ADVERTISEMENT

ಮಳೆರಾಯನ ಗರ್ವ ಇಳಿಸಿದ `ನೆರೆಗೂಳಿ'!

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2013, 19:59 IST
Last Updated 15 ಫೆಬ್ರುವರಿ 2013, 19:59 IST
ಮಳೆರಾಯನ ಗರ್ವ ಇಳಿಸಿದ `ನೆರೆಗೂಳಿ'!
ಮಳೆರಾಯನ ಗರ್ವ ಇಳಿಸಿದ `ನೆರೆಗೂಳಿ'!   

ಚಾಮರಾಜನಗರ: ಒಮ್ಮೆ ಮಳೆರಾಯನಿಗೆ ಗರ್ವ ಬಂದಿತಂತೆ. ಆಗ ಹೆಚ್ಚು ಮಳೆಯಾಗಿ ಪ್ರವಾಹ ಉಂಟಾಯಿತು. ಎಲ್ಲ ಬೆಳೆಗಳು ನೀರಿನಲ್ಲಿ ಮುಳುಗಿಹೋದವು. ಶಿವನಿಗೆ ಈ ಸಮಸ್ಯೆ ನೋಡಲು ಸಮಯ ಸಿಗಲಿಲ್ಲ.

ಆಗ `ನಂದಿ'ಗೆ ಸಮಸ್ಯೆ ಪರಿಹರಿಸಲು ಸೂಚಿಸಿದ. ನಂದಿ ಭೂಮಿಗೆ ಬಂದಿತು. ತನ್ನಲ್ಲಿರುವ ಶಕ್ತಿಯನ್ನು ಬತ್ತವೊಂದಕ್ಕೆ ಧಾರೆ ಎರೆಯಿತು. ಮಳೆ ಸುರಿದರೂ ಈ ಬತ್ತ ಬೆಳೆಯುತ್ತಲೇ ಇತ್ತು. ಕೊನೆಗೆ, ಮಳೆರಾಯನೇ ಸೋತು ಸುಮ್ಮನಾದ. ಪ್ರವಾಹ ಎದುರಿಸಿ ಬೆಳೆದ ಈ ಬತ್ತಕ್ಕೆ `ನೆರೆಗೂಳಿ' ಎಂಬ ಹೆಸರು ಬಂದಿತಂತೆ! 

-`ಕುಲಾಂತರಿ ಬೀಜಗಳ ಹಾವಳಿ ಮತ್ತು ದೇಸಿ ಬೀಜ ಸಂರಕ್ಷಣೆ' ಕುರಿತು ಮಾತನಾಡಿದ ದೇಸಿ ಬೀಜ ಸಂರಕ್ಷಣಾ ತಜ್ಞ ಕೃಷ್ಣಪ್ರಸಾದ್, ದೇಸಿ ಬೀಜಗಳ ಬಗ್ಗೆ ಜನಪದರ ಬಾಯಲ್ಲಿ ಹರಿದಾಡುವ ಕಥೆ ಬಿಚ್ಚಿಟ್ಟರು.

`ಶಿವಮೊಗ್ಗ ಜಿಲ್ಲೆಯಲ್ಲಿ ವರದಾ ನದಿ ಹರಿಯುತ್ತದೆ. ಜೂನ್-ಜುಲೈ ವೇಳೆ ನದಿಪಾತ್ರದಲ್ಲಿ ನೆರೆ ಹೆಚ್ಚಿರುತ್ತದೆ. ಪ್ರವಾಹ ಬಂದಾಗ ತಿಂಗಳವರೆಗೂ ಬತ್ತದ ಗದ್ದೆಗಳಲ್ಲಿ ನೀರು ನಿಲ್ಲುತ್ತದೆ. ಇಲ್ಲಿನ ರೈತರ ಬಳಿ `ನೆರೆಗೂಳಿ' ಎಂಬ ದೇಸಿ ಬತ್ತದ ತಳಿಯಿದೆ. ಈ ಬತ್ತದ ಪೈರು 110 ದಿನದವರೆಗೆ ನೀರಿನಲ್ಲಿ ಮುಳುಗಿದರೂ ಕೊಳೆಯುವುದಿಲ್ಲ.

ನೀರು ಬಸಿದ ನಂತರ ಸಣ್ಣದೊಂದು ಕಡ್ಡಿಯಿದ್ದರೂ ಚಿಗುರೊಡೆಯುತ್ತದೆ. ಎಕರೆಗೆ 10 ರಿಂದ 12 ಕ್ವಿಂಟಲ್ ಇಳುವರಿಗೆ ಮೋಸವಿಲ್ಲ. ಈಗ  ಶಿರಸಿಯಲ್ಲಿ ಅಂತರರಾಷ್ಟ್ರೀಯ ಬತ್ತ ಸಂಶೋಧನಾ ಕೇಂದ್ರ ತೆರೆಯಲಾಗಿದೆ. 200 ದಿನ ನೀರಿನಲ್ಲಿ ಮುಳುಗಿದರೂ ಕೊಳೆಯುವುದಿಲ್ಲ ಎಂದು ರೈತರಿಗೆ ಸ್ವರ್ಣ-1 ಎಂಬ ಕುಲಾಂತರಿ ಬತ್ತ ಪರಿಚಯಿಸಲಾಗಿದೆ. ಇಲ್ಲಿಯವರೆಗೂ ಈ ಬತ್ತ ಯಶಸ್ಸು ಕಂಡಿಲ್ಲ. ಕೇಂದ್ರದ ವಿಜ್ಞಾನಿಯೇ ಈ ಸತ್ಯ ಒಪ್ಪಿಕೊಳ್ಳುತ್ತಾರೆ. ಆದರೆ, `ನೆರೆಗೂಳಿ'ಯಂತಹ ದೇಸಿ ಬೀಜಗಳ ಮಹತ್ವ ಸರ್ಕಾರಕ್ಕೆ ಅರ್ಥವಾಗಿಲ್ಲ. ಈ ಸತ್ಯ  ಅನ್ನದಾತರಿಗೆ ಅರ್ಥವಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.