ADVERTISEMENT

ಮಳೆ, ನೆರೆ: ಜನಜೀವನಕ್ಕೆ ಧಕ್ಕೆ

ಕೃಷ್ಣಾ, ಉಪ ನದಿಗಳ ಹರಿವು ಹೆಚ್ಚಳ, ಬಾಗಲಕೋಟೆಯಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2013, 13:15 IST
Last Updated 23 ಜುಲೈ 2013, 13:15 IST

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಬಿಟ್ಟು ಉಳಿದೆಡೆ ಮಳೆಯ ಅಬ್ಬರ ಮುಂದುವರಿದಿದೆ. ಗುಲ್ಬರ್ಗ, ಯಾದಗಿರಿ, ಬೀದರ್, ಕೊಪ್ಪಳ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಆಲಮಟ್ಟಿ, ನಾರಾಯಣಪುರ  ಜಲಾಶಯಗಳಿಂದ 1.35 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡುತ್ತಿದ್ದು, ಇಕ್ಕೆಲಗಳ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಕಾವೇರಿ ಮತ್ತು ಲಕ್ಷ್ಮಣತೀರ್ಥ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.

ಮಹಾರಾಷ್ಟ್ರದಲ್ಲಿಯೂ ಮಳೆರಾಯನ ಆರ್ಭಟ ಮುಂದುವರಿದಿದ್ದು, ರಾಜ್ಯದ ನದಿಗಳಿಗೆ 1 ಲಕ್ಷ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ಮಟ್ಟ ಕಳೆದ 24 ಗಂಟೆಗಳಲ್ಲಿ ಸುಮಾರು ನಾಲ್ಕೂವರೆ ಅಡಿ ಹೆಚ್ಚಿದೆ. ಉಪನದಿಗಳಾದ ದೂಧಗಂಗಾ, ವೇದಗಂಗಾ ಮತ್ತು ಪಂಚಗಂಗಾ ನದಿಗಳ ಹರಿವು ಕ್ಷಣಕ್ಷಣಕ್ಕೂ ವಿಸ್ತಾರಗೊಳ್ಳುತ್ತ ಹೊಲಗದ್ದೆಗಳಿಗೆ  ನುಗ್ಗಲಾರಂಭಿಸಿದೆ.

ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ-ಯಡೂರ ನಡುವಿನ  ಕೆಳಮಟ್ಟದ ಸೇತುವೆ ಮೇಲೆ 13 ಅಡಿ, ಜತ್ರಾಟ- ಭೀವಶಿ ಸೇತುವೆ ಮೇಲೆ 11 ಅಡಿ, ಭೋಜವಾಡಿ-ಕುನ್ನೂರ, ಕಾರದಗಾ-ಭೋಜ, ಸದಲಗಾ-ಬೋರಗಾಂವ ಮತ್ತು ಮಲಿಕವಾಡ-ದತ್ತವಾಡ ಸೇತುವೆ ಮೇಲೆ 6 ಅಡಿ, ಅಕ್ಕೋಳ-ಸಿದ್ನಾಳ ಸೇತುವೆ ಮೇಲೆ 4 ಅಡಿ ನೀರು ಹರಿಯುತ್ತಿದೆ. ಆದರೆ, ಗ್ರಾಮಗಳಿಗೆ ಪರ್ಯಾಯ ರಸ್ತೆ ಸಂಪರ್ಕ ಇರುವುದರಿಂದ ಹೆಚ್ಚಿನ ತೊಂದರೆ ಆಗಿಲ್ಲ. ಹಿಪ್ಪರಗಿ ಜಲಾಶಯದಿಂದಲೂ 1.35 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕಟ್ಟೆಚ್ಚರ ವಹಿಸಲು ಸೂಚನೆ: ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಪ್ರವಾಹದ ಸಾಧ್ಯತೆ ಇದ್ದು, ಅಗತ್ಯವಿರುವೆಡೆ ಗಂಜಿ ಕೇಂದ್ರಗಳನ್ನು ತೆರೆಯಬೇಕು, ಬೋಟ್ ಹಾಗೂ ಜೀವರಕ್ಷಕ ಸಾಮಗ್ರಿಗಳು, ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು' ಎಂದು ಜ್ಲ್ಲಿಲಾ ಆಡಳಿತ ತಾಲ್ಲೂಕು ಅಧಿಕಾರಿಗಳಿಗೆ ಸೂಚಿಸಿದೆ.

ಜಮಖಂಡಿ ತಾಲ್ಲೂಕಿನ ಶೂರ್ಪಾಲಿ ಗ್ರಾಮದ ಶ್ರೀಲಕ್ಷ್ಮೀ- ನರಸಿಂಹ ದೇವಸ್ಥಾನ ಸಂಪೂರ್ಣ ಮುಳುಗಿದೆ. ಕೃಷ್ಣಾ ತೀರ ರೈತ ಸಂಘ ಚಿಕ್ಕಪಡಸಲಗಿ ಹತ್ತಿರ ನಿರ್ಮಿಸಿರುವ ಬ್ಯಾರೇಜ್ ನೀರಿನಲ್ಲಿ ಸಂಪೂರ್ಣ ಮುಳುಗಿದ್ದರಿಂದ ಬ್ಯಾರೇಜ್ ಎತ್ತರ ಹೆಚ್ಚಿಸುವ ಕಾಮಗಾರಿ ಸ್ಥಗಿತಗೊಂಡಿದೆ.  ಹಾವೇರಿ, ಗದಗ, ವಿಜಾಪುರಗಳಲ್ಲಿ ಚದುರಿದಂತೆ ಮಳೆ ಬಿದ್ದಿದೆ. ಗುಲ್ಬರ್ಗ, ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ರಭಸದ ಮಳೆಯಾಗಿದೆ. ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದರೆ ಹಳಿಯಾಳ, ದಾಂಡೇಲಿ, ಮುಂಡಗೋಡ, ಯಲ್ಲಾಪುರ, ಶಿರಸಿ, ಸಿದ್ಧಾಪುರದಲ್ಲಿ ದಿನವಿಡೀ ಮಳೆ ಬಿದ್ದಿದೆ. ಸುರಪುರ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಗಡಿ ಜಿಲ್ಲೆ ಬೀದರ್‌ನಲ್ಲಿ ಸೋಮವಾರ ಬೆಳಿಗ್ಗೆ ಸುಮಾರು 8 ಗಂಟೆ ವೇಳೆಗೆ ಆರಂಭವಾದ ಮಳೆ ವಿರಾಮವಿಲ್ಲದೆ ಸಂಜೆ ಐದರವರೆಗೂ ಮುಂದುವರಿಯಿತು. ಬಸವಕಲ್ಯಾಣ, ಭಾಲ್ಕಿ, ಔರಾದ್, ಹುಮನಾಬಾದ್ ತಾಲ್ಲೂಕುಗಳಲ್ಲಿಯೂ ಮಳೆಯಾಗಿದೆ.

ಶರಾವತಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ 19 ಅಡಿ ಬಾಕಿ ಇದೆ. ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಜಲಾಶಯದ ನೀರಿನಮಟ್ಟ 1,800 ಗಡಿ ದಾಟಿದೆ. ತೀರ್ಥಹಳ್ಳಿ ಸುತ್ತಮುತ್ತ ಭಾರಿ ಮಳೆ ಬೀಳುತ್ತಿದ್ದು ಮಂಡಗದ್ದೆ ಬಳಿ ಶಿವಮೊಗ್ಗ- ತೀರ್ಥಹಳ್ಳಿ ರಸ್ತೆ ಮೇಲೆ ತುಂಗಾ ನದಿ ಉಕ್ಕಿ ಹರಿಯುವ ಸೂಚನೆಗಳಿವೆ.

ಭದ್ರಾ ಜಲಾಶಯದ ನೀರಿನಮಟ್ಟ 172.80 (ಗರಿಷ್ಠ 186 ಅಡಿ) ಅಡಿಗೆ ತಲುಪಿದೆ. ಸಾಗರದಲ್ಲಿ ವರದಾ ನದಿ ಉಕ್ಕಿ ಹರಿದಿದ್ದು, ಬೀಸನಗದ್ದೆಯ ಸುಮಾರು 200 ಎಕರೆ ಭತ್ತದ ಗದ್ದೆ ಮುಳುಗಡೆಯಾಗಿದೆ.

ಶಾಲೆಗಳಿಗೆ ರಜೆ: ಕೊಡಗು ಜಿಲ್ಲೆಯಾದ್ಯಂತ ಸೋಮವಾರ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು. ಮಳೆ ಕಾರಣ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ನೀಡಲಾಗಿದ್ದ ರಜೆಯನ್ನು ಮಂಗಳವಾರಕ್ಕೂ ಮುಂದುವರಿಸಲಾಗಿದೆ. ಮಡಿಕೇರಿ ಸಮೀಪದ ಎರಡನೇ ಮೊಣ್ಣಂಗೇರಿ ಸಮೀಪ ಸುಮಾರು ಒಂದೂವರೆ ಇಂಚು ಅಗಲ ಹಾಗೂ ಒಂದು ಕಿ.ಮೀ. ಉದ್ದಕ್ಕೆ ಭೂಮಿ ಬಿರುಕು ಬಿಟ್ಟಿದೆ. ಮಡಿಕೇರಿಯ್ಲ್ಲಲಿ ಅಂತರ್ಜಲ ಮಟ್ಟ ಹೆಚ್ಚುತ್ತಿದ್ದು, ಬಾವಿ ಕೆರೆಗಳು ತುಂಬಿ ಹರಿಯುತ್ತಿವೆ. 

   ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿಗಳ ದಡಗಳ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತವು ಸೂಚಿಸಿದ್ದು, ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಚಿಕ್ಕಮಗಳೂರು ಸೇರಿ ಮಲೆನಾಡಿನಲ್ಲಿ ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತಗೊಂಡಿದೆ. ಭತ್ತದ ನಾಟಿ ಹೊರತುಪಡಿಸಿ, ಉಳಿದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದ ಮಟ್ಟಿಗೆ ಮಳೆ ಸುರಿಯುತ್ತಿದೆ. ಕಾಫಿ ಇನ್ನಿತರ ತೋಟದ ಕೆಲಸಗಳನ್ನು ಕೈಗೊಳ್ಳಲಾಗದೆ ಬೆಳೆಗಾರರು ಪರದಾಡುವಂತಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಕಾಫಿ, ಮೆಣಸು ಬೆಳೆಗಾರರು ಫಸಲು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ದ.ಕ.ದಲ್ಲಿ ಬಿಡುವು: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಸೋಮವಾರ ಬಿಡುವು ಪಡೆದಿದ್ದು, ಕೊಳೆ ರೋಗದಿಂದ ಕಂಗೆಟ್ಟೆ ಬೆಳೆಗಾರರಿಗೆ ಔಷಧ ಸಿಂಪಡಿಸುವುದಕ್ಕೆ ಅವಕಾಶ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.