ADVERTISEMENT

ಮಾಗಡಿ ಸ್ವಾಮೀಜಿ ಮಠಕ್ಕೆ ಮರಳಲು ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:35 IST
Last Updated 12 ಜನವರಿ 2012, 19:35 IST

ತುಮಕೂರು: ಹದಿನೈದು ದಿನಗಳಿಂದ ಮಠದಿಂದ ಕಣ್ಮರೆಯಾಗಿದ್ದ ರಾಮನಗರ ಜಿಲ್ಲೆ ಮಾಗಡಿ ಜಡೆದೇವರ ಮಠದ ಇಮ್ಮಡಿ ಶಂಕರ ಸ್ವಾಮೀಜಿ ಗುರುವಾರ ದಿಢೀರನೇ ಸಿದ್ದಗಂಗಾ ಮಠದಲ್ಲಿ ಕಾಣಿಸಿಕೊಂಡರು.

ಸ್ವಾಮೀಜಿ ಸಿದ್ದಗಂಗಾ ಮಠದಲ್ಲಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣ ಮಾಗಡಿಯಿಂದ ಸಿದ್ದಗಂಗಾ ಮಠಕ್ಕೆ ಧಾವಿಸಿಬಂದ ಮಠದ ಭಕ್ತರ ದಂಡು ಸ್ವಾಮೀಜಿ ಅವರನ್ನು ಮಠಕ್ಕೆ ಬರುವಂತೆ ಒತ್ತಾಯಿಸಿದರು.

ನಂತರ ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಮತ್ತು ಇಮ್ಮಡಿ ಸ್ವಾಮೀಜಿ ಕೆಲ ಸಮಯ ಮಾತುಕತೆ ನಡೆಸಿದರು. ಭಕ್ತರ ದಂಡು ಮತ್ತು ರಾಮನಗರದಿಂದ ಬಂದಿದ್ದ ಒಂದಿಬ್ಬರು ಸ್ವಾಮೀಜಿಗಳು ಇಮ್ಮಡಿ ಸ್ವಾಮೀಜಿ ಮನವೊಲಿಸುವಲ್ಲಿ ಪ್ರಯತ್ನಿಸಿದರು. ಭಕ್ತರ ಸತತ ಪ್ರಯತ್ನದ ನಂತರ ಮಠಕ್ಕೆ ವಾಪಸ್ ತೆರಳಲು ಸ್ವಾಮೀಜಿ ಒಪ್ಪಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಇಮ್ಮಡಿ ಸ್ವಾಮೀಜಿ, ಮಠದಿಂದ ತಾವು ನಾಪತ್ತೆಯಾಗಿರಲಿಲ್ಲ. ಆರೋಪದಿಂದ ಮನನೊಂದು ತೀರ್ಥ ಕ್ಷೇತ್ರಗಳ ಯಾತ್ರೆಯಲ್ಲಿ ತೊಡಗಿದ್ದೆ. ಈಗ ಮಠಕ್ಕೆ ವಾಪಸ್ ಆಗುತ್ತೇನೆ.

ಆದರೆ ಪೀಠ ಅಲಂಕರಿಸುವುದಿಲ್ಲ. ಅಲ್ಲಿನ ಭಕ್ತರ ಸಲಹೆ ಪಡೆದ ನಂತರವೇ ಪೀಠ ಅಲಂಕರಿಸುವ ಅಂತಿಮ ತೀರ್ಮಾನ ಮಾಡುವುದಾಗಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.