ADVERTISEMENT

ಮಾಜಿ ರಾಜ್ಯಪಾಲರಾದ ವಿ.ಎಸ್ ರಮಾದೇವಿ ನಿಧನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ಬೆಂಗಳೂರು: ಮಾಜಿ ರಾಜ್ಯಪಾಲರಾದ ಡಾ.ವಿ.ಎಸ್.ರಮಾದೇವಿ (79) ಅವರು ತೀವ್ರ ಹೃದಯಾಘಾತದಿಂದ ಬುಧವಾರ ನಗರದಲ್ಲಿ ನಿಧನರಾದರು.`ದೀರ್ಘ ಕಾಲದಿಂದ ಮಧುಮೇಹದಿಂದ ಬಳಲುತ್ತಿದ್ದ ಅವರು, ಮಧ್ಯಾಹ್ನದ ಊಟದ ನಂತರ ಮನೆಯಲ್ಲಿ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದರು' ಎಂದು ಕುಟುಂಬ ಮೂಲಗಳು ತಿಳಿಸಿವೆ.

ರಮಾದೇವಿ ಅವರು ಪುತ್ರ ವಿ.ಎಸ್.ರಾಕೇಶ್, ಪುತ್ರಿಯರಾದ ವಿ.ಎಸ್.ರೇಖಾ, ವಿ.ಎಸ್.ರಾಧಿಕಾ ಚೌಧರಿ ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.
ಆಂಧ್ರಪ್ರದೇಶ ಮೂಲದವರಾದ ರಮಾದೇವಿ ಅವರು ಮಾರ್ಚ್ 15, 1934ರಂದು ಜನಿಸಿದ್ದರು. ಅವರು ಕೇಂದ್ರ ಚುನಾವಣಾ ಆಯೋಗದ ಏಕೈಕ ಮಹಿಳಾ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಜುಲೈ 26, 1997ರಿಂದ ಡಿಸೆಂಬರ್ 1, 1999ರ ವರೆಗೆ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಹಾಗೂ ಡಿಸೆಂಬರ್ 2, 1999ರಿಂದ ಮೇ 20, 2002ರ ವರೆಗೆ ಕರ್ನಾಟಕದ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು.

ಮೃತದೇಹವನ್ನು ಹೈದರಾಬಾದ್‌ಗೆ ಕೊಂಡೊಯ್ದು ಗುರುವಾರ ಅಂತ್ಯಕ್ರಿಯೆ ನಡೆಸಲು ಅವರ ಕುಟುಂಬ ನಿರ್ಧರಿಸಿದೆ. `ಮಧ್ಯಾಹ್ನದವರೆಗೆ ಬಂಜಾರ ಹಿಲ್ಸ್ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಪೂರೈಸಲಾಗುತ್ತದೆ' ಎಂದು ಕುಟುಂಬ ಮೂಲಗಳು ತಿಳಿಸಿವೆ. ರಮಾದೇವಿ ಅವರ ನಿವಾಸಕ್ಕೆ ಶಾಸಕ ಸತೀಶ್ ರೆಡ್ಡಿ, ವಿಧಾನಪರಿಷತ್ ಸದಸ್ಯ ಪ್ರೊ.ಎಂ.ಆರ್.ದೊರೆಸ್ವಾಮಿ, ಮಾಜಿ ಸಚಿವೆ ರಾಣಿ ಸತೀಶ್ ಹಾಗೂ ಇತರರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT