ADVERTISEMENT

ಮಾಜಿ ಸಚಿವ ಜನಾರ್ದನ ರೆಡ್ಡಿ ಕಸ್ಟಡಿ ಅವಧಿ ವಿಸ್ತರಣೆಗೆ ಸಿಬಿಐ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ಹೈದರಾಬಾದ್: ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಭಾವ ಶ್ರೀನಿವಾಸ್ ರೆಡ್ಡಿ ಅವರನ್ನು ಇನ್ನೂ ಏಳು ದಿನಗಳ ಕಾಲ ತನ್ನ ವಶದಲ್ಲಿಯೇ ಇಟ್ಟುಕೊಳ್ಳಲು ಸಿಬಿಐ ಸಿದ್ಧತೆ ನಡೆಸಿದೆ.

 ಜನಾರ್ದನ ರೆಡ್ಡಿ ಅವರ ನಿಕಟವರ್ತಿಗಳ ಲಾಕರ್‌ನಿಂದ ವಶಪಡಿಸಿಕೊಂಡಿರುವ ನಗದು ಮತ್ತು ದಾಖಲೆಗಳನ್ನು ಮುಂದಿಟ್ಟುಕೊಂಡು ಸಿಬಿಐ ಅಧಿಕಾರಿಗಳು ಈ ಸಿದ್ಧತೆ ನಡೆಸುತ್ತಿದ್ದಾರೆ.

 ಸೋಮವಾರ ಬೆಳಿಗ್ಗೆ 10 ಗಂಟೆಗೆ ಸಿಬಿಐ ಅಧಿಕಾರಿಗಳು ಈ ಇಬ್ಬರನ್ನೂ ನಾಂಪಳ್ಳಿಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿದೆ. ಈ ಸಂದರ್ಭದಲ್ಲಿ ಕಸ್ಟಡಿ ಅವಧಿಯನ್ನು ಏಳು ದಿನಗಳ ಕಾಲ ವಿಸ್ತರಿಸುವಂತೆ ಮನವಿ ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

 ಸೋಮವಾರ ಅಥವಾ ಮಂಗಳವಾರ ಜನಾರ್ದನ ರೆಡ್ಡಿ ಅವರನ್ನು ಬಳ್ಳಾರಿಗೆ ಕರೆದೊಯ್ದು ಲಾಕರ್‌ಗಳನ್ನು ತೆರೆಯುವ ಉದ್ದೇಶವಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶ್ರೀನಿವಾಸ್ ರೆಡ್ಡಿ ಅವರು ತನಿಖೆಗೆ ಸಹಕರಿಸುತ್ತಿದ್ದು, ಆದರೆ ಜನಾರ್ದನ ರೆಡ್ಡಿ ಅವರು ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ.

 ಆಂಧ್ರದಲ್ಲಿ ಹೂಡಿರುವ ಬಂಡವಾಳಕ್ಕೆ ಸಂಬಂಧಿಸಿದ ಕಾಗದಪತ್ರಗಳ ಮೇಲಿನ ಸಹಿ ಬಗ್ಗೆ ಕೇಳಿದಾಗ, `ಇದು ನನ್ನ ಸಹಿ ಹೌದೆ~ ಎಂದು ನಮಗೇ ಮರು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

 ಇಬ್ಬರ ಕಸ್ಟಡಿ ಅವಧಿ ವಿಸ್ತರಣೆಗೆ ಮನವಿ ಮಾಡುವುದರ ಜತೆಗೆ ಇಬ್ಬರನ್ನೂ ಪಾಲಿಗ್ರಾಫ್ ಮತ್ತು ನಾರ್ಕೊ ವಿಶ್ಲೇಷಣೆಗೆ ಒಳಪಡಿಸಲು ಅನುಮತಿ ಕೋರಲಾಗುತ್ತದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

 ಬಳ್ಳಾರಿಯ ಆಕ್ಸಿಸ್ ಬ್ಯಾಂಕಿನ 350 ಲಾಕರ್‌ಗಳ ಪೈಕಿ 200 ಲಾಕರ್‌ಗಳನ್ನು ಜನಾರ್ದನ ರೆಡ್ಡಿ ಮತ್ತು ಅವರ ಆಪ್ತರೇ ಹೊಂದಿದ್ದಾರೆ.

 ಆರು ಲಾಕರ್‌ಗಳ ತಪಾಸಣೆ ಮಾಡಲಾಗಿದ್ದು, ಅವುಗಳಲ್ಲಿ 15 ಕೆ.ಜಿ ಚಿನ್ನದ ಬಿಸ್ಕತ್ತಗಳು, ಪ್ಲಾಟಿನಂ ಆಭರಣಗಳು ಮತ್ತು 3 ಕೋಟಿ ನಗದು ದೊರೆತಿದೆ. ಬಹುತೇಕ ಚಿನ್ನವನ್ನು ದುಬೈನಿಂದ ಆಮದು ಮಾಡಿಕೊಳ್ಳಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.