ADVERTISEMENT

ಮಾಟದ ಆರೋಪ: ಸಿಎಂ ವಿರುದ್ಧ ಮೊಕದ್ದಮೆ- ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 16:55 IST
Last Updated 1 ಫೆಬ್ರುವರಿ 2011, 16:55 IST

ಬೆಂಗಳೂರು: ‘ರಾಜಕೀಯವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮೇಲೆ ಆಧಾರರಹಿತ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ತಿಳಿಸಿದರು.

‘ಅವರಿಗೆ ಕುರ್ಚಿ ಹೋಗುವ ದುಃಸ್ವಪ್ನ ಕಾಡುತ್ತಿದ್ದು, ಇದರಿಂದ ಹತಾಶರಾಗಿದ್ದಾರೆ. ರಾಜಕೀಯ ಹತಾಶೆ, ಭಯ, ತಪ್ಪು ಮಾಡಿದವರು ಮಾತ್ರ ಈ ರೀತಿ ಮಾಟ, ಮಂತ್ರದ ಆಪಾದನೆ ಮಾಡಲು ಸಾಧ್ಯ. ಆದ್ದರಿಂದ ಯಡಿಯೂರಪ್ಪ ಮೊದಲು ಕೌನ್ಸೆಲಿಂಗ್ ಮಾಡಿಸಿಕೊಳ್ಳುವುದು ಒಳ್ಳೆಯದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದರು.

‘ಯಡಿಯೂರಪ್ಪ ತಮಗೆ ಜೀವ ಭಯ ಇದೆ ಎಂದು ಹೇಳಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಗದವರು ಆರು ಕೋಟಿ ಜನರನ್ನು ಹೇಗೆ ರಕ್ಷಿಸುತ್ತಾರೆ. ಗುಪ್ತಚರ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಜನರ ಗಮನ ಬೇರೆಡೆ ಸೆಳೆಯಲು ಹಾಗೂ ತಮ್ಮ ಮೇಲೆ ಗೂಬೆ ಕೂರಿಸಲು ಈ ರೀತಿಯ ಆರೋಪ ಮಾಡಿದ್ದಾರೆ. ನಾನು ಮಾಟ, ಮಂತ್ರ ಮಾಡಿಸಿದ್ದರೆ ಆ ಬಗ್ಗೆ ದಾಖಲೆಗಳನ್ನು ಕೊಡಲಿ ‘ಎಂದು ಸವಾಲು ಹಾಕಿದರು.

‘ದೇವಸ್ಥಾನಗಳಿಗೆ ಆನೆ, ಕತ್ತೆ ನೀಡಿದ್ದು. ಮೈಸೂರು, ಕೇರಳ, ತಮಿಳುನಾಡಿನಲ್ಲಿ ಹೋಮ ಮಾಡಿಸಿದ್ದು ಯಡಿಯೂರಪ್ಪ. ಅಷ್ಟೇ ಅಲ್ಲ ವಿಧಾನ ಸೌಧ, ರಾಜಭವನದಲ್ಲೂ ಹೋಮ ಮಾಡಿಸಿದರು. ಇದೀಗ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಜೈಲಿಗೆ ಹೋಗುವ ಭೀತಿಯಿಂದ ದುರುದ್ದೇಶಪೂರ್ವಕವಾಗಿ ಆಧಾರರಹಿತ ಆರೋಪ ಮಾಡಿದ್ದಾರೆ. ಸಾರ್ವಜನಿಕರ ದೃಷ್ಟಿಯಲ್ಲಿ ವಿರೋಧ ಪಕ್ಷದ ನಾಯಕ ಕುಬ್ಜನಾಗುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು. 

‘ಯಡಿಯೂರಪ್ಪನವರಿಗೆ ಮೌಢ್ಯಗಳಲ್ಲಿ ನಂಬಿಕೆ ಇದ್ದರೆ ಅದು ಅವರಿಗೆ ಬಿಟ್ಟ ವಿಚಾರ. ಮಾಟ- ಮಂತ್ರಗಳನ್ನು ಮಾಡಿಸಿರುವವರು ಮಾತ್ರ ಇನ್ನೊಬ್ಬರು ನನ್ನ ತರಹ ಮಾಡುತ್ತಾರೆ ಎಂದು ಭಾವಿಸುತ್ತಾರೆ. ಇದು ಮೂರ್ಖತನದ ಪರಮಾವಧಿ. ಅಧಿಕಾರ ಉಳಿಸಿಕೊಳ್ಳಲು ಏನೆಲ್ಲ ಮಾಡುತ್ತಾರೆ ಎಂಬುದು ದೇಶಕ್ಕೇ ಗೊತ್ತಿದೆ. ದೇಶದ ಎಲ್ಲ ದೇವಸ್ಥಾನಗಳನ್ನು ಸುತ್ತುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಸಾವಿರಾರು ಜನ ಮೌಢ್ಯಗಳನ್ನು ನಂಬಿದ್ದಾರೆ. ಬಡವರು ಅಸಹಾಯಕತೆಯಿಂದ ಯಡಿಯೂರಪ್ಪ ಅವರ ಹೇಳಿಕೆಗಳನ್ನು ನಂಬುವ ಸಾಧ್ಯತೆಗಳಿವೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅವರು ನನ್ನ ಚಾರಿತ್ರ್ಯವಧೆ ಮಾಡಲು ಹೊರಟಿದ್ದಾರೆ. ಹತಾಶೆಯಿಂದ ಸತ್ಯಕ್ಕೆ ದೂರವಾದ ಆರೋಪ ಮಾಡಿದ್ದಾರೆ’ ಎಂದು ಟೀಕಿಸಿದರು.

‘ನಾನು ವೈಚಾರಿಕತೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ಯಾವತ್ತೂ ಶಾಸ್ತ್ರ ಕೇಳಿಲ್ಲ. ಮನೆಯಲ್ಲಿ ಪೂಜೆ ಮಾಡಿಲ್ಲ. ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಜಯ ಗಳಿಸಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಬಿಟ್ಟರೆ ಎಂದೂ ದೇವಸ್ಥಾನಕ್ಕೆ ಹೋಗುವುದಿಲ್ಲ. ಮೌಢ್ಯಗಳನ್ನು ವಿರೋಧ ಮಾಡಿಕೊಂಡು ಬಂದಿದ್ದೇನೆ. ಪ್ರಗತಿಶೀಲ ಚಿಂತಕರು ಸಹ ಇವೆಲ್ಲವನ್ನು ತಿರಸ್ಕರಿಸಿದ್ದಾರೆ’ ಎಂದರು.

ಮೌಢ್ಯತೆ ಅನಾಗರಿಕತೆಯ ಲಕ್ಷಣ. ಅನಕ್ಷರತೆ, ಬಡತನ, ಅಸಮಾನತೆಯ ದುರ್ಲಾಭ ಪಡೆಯಲು ಪಟ್ಟಭದ್ರ ಹಿತಾಸಕ್ತಿಗಳು ಮೌಢ್ಯತೆ ಹುಟ್ಟು ಹಾಕಿದ್ದಾರೆ. ಇದು ಸಮಾಜಕ್ಕೆ ಅಪಾಯಕಾರಿ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.