ರತ್ನಾಕರವರ್ಣಿ ವೇದಿಕೆ; ವಿದ್ಯಾಗಿರಿ (ಮೂಡುಬಿದಿರೆ): ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ `ಆಳ್ವಾಸ್ ನುಡಿಸಿರಿ~ಯಲ್ಲಿ ಶನಿವಾರ ನಡೆದ ವಿಚಾರಗೋಷ್ಠಿಗಳಲ್ಲಿ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ಸರ್ಕಾರದ ಕನ್ನಡ ಕಾಳಜಿಯನ್ನು ತರಾಟೆಗೆ ತೆಗೆದುಕೊಂಡರು. ನಿಜವಾದ ಬದ್ಧತೆ ಇದ್ದರೆ ಒಂದರಿಂದ ಎಂಟನೇ ತರಗತಿಯವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ಒದಗಿಸಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಅಖಂಡ ಕರ್ನಾಟಕದ ಅಸ್ತಿತ್ವ -ಹೋರಾಟ ಕುರಿತ ವಿಚಾರಗೋಷ್ಠಿಯಲ್ಲಿ `ಕನ್ನಡ ಸಂಘ ಸಂಸ್ಥೆಗಳು ಮತ್ತು ಹೋರಾಟ~ ಕುರಿತು ಮಾತನಾಡಿದ ಕನ್ನಡಪರ ಹೋರಾಟಗಾರ ಮೈಸೂರಿನ ಸ.ರ.ಸುದರ್ಶನ, `ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯ 29 ಎಫ್ ಕಲಂನಲ್ಲಿ ಶಿಕ್ಷಣ ಮಾಧ್ಯಮ ಮಾತೃಭಾಷೆಯಲ್ಲಿರಬೇಕು ಎಂದು ಹೇಳಲಾಗಿದೆ. ಇಚ್ಛಾಶಕ್ತಿ ಇರುತ್ತಿದ್ದರೆ ಒಂದರಿಂದ ಎಂಟನೇ ತರಗತಿವರೆಗಿನ ಶಿಕ್ಷಣ ಮಾತೃಭಾಷೆಯಲ್ಲೇ ಸಿಗುವಂತೆ ಸರ್ಕಾರ ನೋಡಿಕೊಳ್ಳಬಹುದಿತ್ತು. ಆದರೆ, ಆರನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಮೂಲಕ ಸರ್ಕಾರವು ಕಾಯ್ದೆಯ ಆಶಯಕ್ಕೆ ಭಂಗ ತಂದಿದೆ~ ಎಂದು ಆರೋಪಿಸಿದರು.
`2011ರ ಜನಗಣತಿಯಲ್ಲಿ ರಾಜ್ಯದ ಯಾವೊಬ್ಬ ಪ್ರಜೆಯೂ ಇಂಗ್ಲಿಷ್ ಮಾತೃಭಾಷೆ ಎಂದು ನಮೂದಿಸಿಲ್ಲ. ಹಾಗಿದ್ದರೂ ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಹೇಗೆ ತೆರೆಯುತ್ತಿದೆ~ ಎಂದು ಪ್ರಶ್ನಿಸಿದ ಅವರು, `ಸರ್ಕಾರದ ಈ ನಿಲುವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಕನ್ನಡ ಕ್ರಿಯಾ ಸಮಿತಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಿದೆ. ಇದಕ್ಕೆ ಮುನ್ನ ಈ ಬಗ್ಗೆ ಶಿಕ್ಷಣ ಸಚಿವರು ಸಹಿತ ಏಳು ಮಂದಿಗೆ ಎರಡೆರಡು ಬಾರಿ ನೋಟಿಸ್ ನೀಡಿದ್ದೇವೆ. ಈ ಪೈಕಿ ಉತ್ತರಿಸುವ ಸೌಜನ್ಯ ತೋರಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಮಾತ್ರ~ ಎಂದರು.
`ಶಿಕ್ಷಣದಲ್ಲಿ ಕನ್ನಡ~ ಕುರಿತು ಮಾತನಾಡಿದ ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್, `ಶಿಕ್ಷಣದಲ್ಲಿ ಕನ್ನಡವನ್ನು ಪ್ರತಿಷ್ಠಾಪಿಸುವ ಸಂವರ್ಧನೆಗೊಳಿಸುವ ಇಚ್ಛಾಶಕ್ತಿ, ರಾಜಕೀಯ ಸಂಕಲ್ಪ ಬಲ ಹಾಗೂ ಉತ್ಸಾಹ ಸರ್ಕಾರಕ್ಕಿಲ್ಲ. ಈ ಅರ್ಥದಲ್ಲಿ ಇದು ಹೆಳವ ಸರ್ಕಾರ~ ಎಂದು ತರಾಟೆಗೆ ತೆಗೆದುಕೊಂಡರು.
`ನಮ್ಮನ್ನು ಆಳುವ ಸರ್ಕಾರ ಈಗೀಗ ನಿರ್ಲಜ್ಜೆಯಿಂದ, ಭಂಡತನದಿಂದ ಮಾರುಕಟ್ಟೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ, ರಾಜಾರೋಷವಾಗಿ ಇಂಗ್ಲಿಷ್ ಮಾಧ್ಯಮದ ವಿಸ್ತರಣೆಗೆ ಮಣೆ ಹಾಕುತ್ತಾ ಕನ್ನಡ ಮಾಧ್ಯಮ ಶಾಲೆಗಳ ಪಾಲಿಗೆ ಖಳನಾಯಕ ಆಗುತ್ತಿದೆ~ ಎಂದು ಕಟುಮಾತುಗಳಿಂದ ಟೀಕಿಸಿದರು.
`ಶಿಕ್ಷಣ ಮಾಧ್ಯಮದ ಬಗೆಗೆ ವಾದ ವಿವಾದ, ವಾಗ್ವಾದ, ಕಾನೂನು ಖಟ್ಲೆಗಳ ದೆಸೆಯಿಂದ ಅಖಂಡ ಕರ್ನಾಟಕದ ಅಸ್ತಿತ್ವಕ್ಕೆ ಸಂಚಕಾರ ಒದಗುತ್ತಿದೆ. ಇಂಗ್ಲಿಷ್ ಮತ್ತು ಪ್ರಾಂತೀಯ ಭಾಷಾ ಮಾಧ್ಯಮಗಳ ನಡುವೆ ಕಾಣಿಸಿಕೊಂಡ ಬಿರುಕು ವರ್ಷದಿಂದ ವರ್ಷಕ್ಕೆ ತೀವ್ರವಾಗುತ್ತಿರುವುದು ದುರಂತ. ಇದಕ್ಕೆ ದೂರದೃಷ್ಟಿರಹಿತ ಪ್ರಭುತ್ವ, ಹೊಣೆಗೇಡಿ ಪ್ರಜಾಪ್ರತಿನಿಧಿಗಳು, ಆರಾಮ ಕುರ್ಚಿಯ ಚಿಂತಕರು ಹಾಗೂ ಸ್ವಾರ್ಥಪರ ಜನರೂ ಕಾರಣ~ ಎಂದು ವಿಶ್ಲೇಷಿಸಿದರು.
ನೆಲ ಜಲ ಹೋರಾಟದ ಬಗ್ಗೆ ಮಾತನಾಡಿದ ಅಡ್ಡೂರು ಕೃಷ್ಣರಾವ್, `ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಾ ಬಂದಿದೆ. ಈ ಅನ್ಯಾಯ ಸರಿಪಡಿಸಲು ಮುಂದಾದರೆ ಕೇಂದ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಇಂತಹ ಹೋರಾಟಗಳನ್ನು ಜೀವಂತವಾಗಿಡಲು ರಾಜಕೀಯ ಪಕ್ಷಗಳೂ ಬಯಸುತ್ತವೆ~ ಎಂದರು. ಸಮ್ಮೇಳನಾಧ್ಯಕ್ಷ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.