ADVERTISEMENT

ಮಾರ್ಗಸೂಚಿಗೆ ಯುವಜನ ಮತ್ತು ಕ್ರೀಡಾ ಇಲಾಖೆಗೆ ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST

ಬೆಂಗಳೂರು: ರಾಜ್ಯದಲ್ಲಿನ ಎಲ್ಲ ಕ್ರೀಡಾಂಗಣಗಳಲ್ಲಿ ಕ್ರೀಡೇತರ ಚಟುವಟಿಕೆಗಳಿಗೂ ಅವಕಾಶ ನೀಡಬಹುದೇ ಅಥವಾ ಬೇಡವೇ ಎಂಬ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಯುವಜನ ಮತ್ತು ಕ್ರೀಡಾ ಇಲಾಖೆಗೆ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.

‘ಮೊದಲು, ಕ್ರೀಡೇತರ ಚಟುವಟಿಕೆಗಳಿಗೆ ಬಾಡಿಗೆ ನೀಡುವ ಸಂಬಂಧ ಯಾವ ರೀತಿಯ ಷರತ್ತುಗಳನ್ನು ವಿಧಿಸಬಹುದು ಎಂಬುದಾಗಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ 48 ಕ್ರೀಡಾ ಸಂಸ್ಥೆಗಳು ಕೂಡಲೇ ಸಭೆ ಸೇರಿ ಮಾರ್ಗಸೂಚಿ ರೂಪಿಸಬೇಕು. ಪ್ರತಿಯೊಂದು ಕ್ರೀಡಾ ಸಂಘಗಳು ಈ ಮಾರ್ಗಸೂಚಿಯನ್ನು ಮುಂದಿನ ಕ್ರಮಕ್ಕಾಗಿ ಆರು ತಿಂಗಳ ಒಳಗೆ ಪ್ರತ್ಯೇಕವಾಗಿ ಇಲಾಖೆಯ ಕಾರ್ಯದರ್ಶಿಯ ಅವಗಾಹನೆಗೆ ಕಳುಹಿಸಬೇಕು. ಈ ಕುರಿತು ಇಲಾಖೆ ನಂತರದ ಮೂರು ತಿಂಗಳ ಒಳಗೆ ಅಂತಿಮ ನಿರ್ಧಾರಕ್ಕೆ ಬರಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

(ಅರ್ಜಿಯಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್, ಅಥ್ಲೆಟಿಕ್ ಅಸೋಸಿಯೇಷನ್, ಬ್ಯಾಸ್ಕೆಟ್‌ಬಾಲ್, ಬಾಡ್ಮಿಂಟನ್, ಕೇರಂ, ಚೆಸ್, ಮಹಿಳಾ ಕ್ರಿಕೆಟ್ ಸೇರಿದಂತೆ ಇತರ ಕ್ರೀಡಾ ಸಂಘ ಸಂಸ್ಥೆಗಳು ಪ್ರತಿವಾದಿಗಳಾಗಿವೆ).

ADVERTISEMENT

‘ಸಭೆಯಲ್ಲಿ ರೂಪಿಸಲಾದ ಮಾರ್ಗಸೂಚಿಗೆ ಇಲಾಖೆಯ ಕಾರ್ಯದರ್ಶಿಗಳು ತಿದ್ದುಪಡಿ ಮಾಡಬಹುದು ಇಲ್ಲವೇ ಬೇರೆ ವಿಷಯಗಳನ್ನು ಅದರಲ್ಲಿ ಸೇರಿಸಬಹುದು. ಅಂತಿಮವಾಗಿ ರೂಪಿಸಲಾಗುವ ಮಾರ್ಗಸೂಚಿಯಲ್ಲಿನ ನಿಯಮ ಮೀರಿದರೆ ಯಾವ ಶಿಕ್ಷೆಗೆ ಸಂಘ ಸಂಸ್ಥೆಗಳಿಗೆ ಒಳಪಡಿಸಲಾಗುವುದು ಎಂಬ ಬಗ್ಗೆಯೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಬೇಕು’ ಎಂದು ಸೂಚಿಸಿರುವ ಪೀಠ, ಇಲಾಖೆಯ ಈ ನಿರ್ಧಾರಕ್ಕೆ ಪ್ರತಿಯೊಂದು ಕ್ರೀಡಾ ಸಂಘ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಸ್ಪಷ್ಟಪಡಿಸಿದೆ.

‘ಒಂದು ವೇಳೆ ಯಾವುದೇ ಸಂಘ ಸಂಸ್ಥೆಗಳು ಆರು ತಿಂಗಳ ಅವಧಿಯಲ್ಲಿ ಮಾರ್ಗಸೂಚಿಯನ್ನು ಇಲಾಖೆಗೆ ನೀಡದೇ ಹೋದಲ್ಲಿ ಅಂತಹ ಸಂಘ ಸಂಸ್ಥೆಗಳು ಇನ್ನು ಮುಂದೆ ಕ್ರೀಡೇತರ ಚಟುವಟಿಕೆಗಳಿಗೆ ತಮ್ಮ ವ್ಯಾಪ್ತಿಯ ಕ್ರೀಡಾಂಗಣವನ್ನು ನೀಡುವಂತಿಲ್ಲ’ ಎಂದೂ ಪೀಠ ತೀರ್ಪಿನಲ್ಲಿ ಎಚ್ಚರಿಸಿದೆ.

ಕ್ರೀಡೆಗೆ ಮೀಸಲಿಟ್ಟ ನಗರದ ಕಂಠೀರವ ಕ್ರೀಡಾಂಗಣದ ಜಾಗವನ್ನು ವಾಣಿಜ್ಯ ಮೇಳ, ಫ್ಯಾಷನ್ ಷೋ, ಇತರ ಉತ್ಸವ, ಪಾರ್ಕಿಂಗ್ ನಿಲುಗಡೆಯಂತಹ ಕ್ರೀಡೇತರ ಚಟುವಟಿಕೆಗಳಿಗೆ ನೀಡುತ್ತಿರುವುದನ್ನು ಪ್ರಶ್ನಿಸಿ ಕೆ.ಪಟೇಲ್ ಮನೇಗೌಡ ಎನ್ನುವವರು 2008ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ವರ್ಷವಿಡೀ ಇತರ ಚಟುವಟಿಕೆಗಳಿಗೆ ಕ್ರೀಡಾಂಗಣ ಮೀಸಲು ಇರುವ ಕಾರಣ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟಗಳ ವಿವಿಧ ಕ್ರೀಡೆಗಳಿಗೆ ಕ್ರೀಡಾಂಗಣ ದೊರಕುತ್ತಿಲ್ಲ ಎನ್ನುವುದು ಅವರ ವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.