ADVERTISEMENT

ಮಾವಿನ ಗೋದಾಮಿಗೆ ಬೆಂಕಿ: ಭಾರೀ ನಷ್ಟ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ಸಂತೇಬೆನ್ನೂರು: ಇಲ್ಲಿನ ಸಾಸಲು ರಸ್ತೆಯಲ್ಲಿನ ಬಾಷಾಖಾನ್ ಅವರ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಮಾವಿನ ಗೋದಾಮಿಗೆ ಶನಿವಾರ ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿ ಪೂರ್ಣ ಸುಟ್ಟು ಭಸ್ಮವಾಗಿದೆ.

ಮಾವು ಗೇಣಿದಾರರಾದ ನಾಗರಾಜ್, ಇಮ್ರಾನ್ ಹಾಗೂ ಅಫ್ಸರ್ ಇದರಲ್ಲಿ ತೋಟಗಳಿಂದ ಕಿತ್ತು ತಂದ ಮಾವಿನ ಫಸಲನ್ನು ಸಂಗ್ರಹಿಸಿದ್ದರು. ಉತ್ತಮ ತಳಿಯ ಬಾದಾಮಿ ಜಾತಿಗೆ ಸೇರಿದ ಸುಮಾರು 10 ಟನ್‌ಗಳಷ್ಟು ಹಣ್ಣುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಶನಿವಾರ ಮುಂಬೈಗೆ ರವಾನಿಸಲು ರಾತ್ರಿ 2ರವರೆಗೆ ಪ್ಯಾಕಿಂಗ್ ಮಾಡಿ ಮನೆಗೆ ತೆರಳಿದ ನಂತರ ಈ ಅವಘಡ ಸಂಭವಿಸಿದೆ.

ರೂ. 12 ಲಕ್ಷ ಮೌಲ್ಯದ ಮಾವು, 3 ಲಕ್ಷ ಬೆಲೆ ಬಾಳುವ ಪ್ಯಾಕಿಂಗ್ ಪರಿಕರಗಳು, ತೂಕದ ಯಂತ್ರ, ಚಪ್ಪಡಿ ಕಲ್ಲುಗಳು, ಪ್ಲಾಸ್ಟಿಕ್ ಶೀಟ್‌ಗಳು ಸುಟ್ಟು ಕರಕಲಾಗಿವೆ. ಜಮೀನಿನ ಸುತ್ತ ಇದ್ದ 50 ಮಾವಿನ ಮರಗಳಿಗೆ ಹಾನಿಯಾಗಿದೆ. ಒಟ್ಟಾರೆ ರೂ. 16 ಲಕ್ಷ ನಷ್ಟ ಸಂಭವಿಸಿದೆ ಎನ್ನುತ್ತಾರೆ ಎಂ. ಸಿದ್ದಪ್ಪ.

ಚನ್ನಗಿರಿ ಅಗ್ನಿಶಾಮಕ ಮತ್ತು ತುರ್ತು ಸೇವಾದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಶುಕ್ರವಾರವಷ್ಟೇ ತೋಟಗಾರಿಕೆ ಹಾಗೂ ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್ ಮಾವಿನ ಸಂಸ್ಕರಣಾ ಘಟಕ ನಿರ್ಮಿಸುವ ಭರವಸೆ ನೀಡಿದ್ದರು. ಇಂತಹ ಆಕಸ್ಮಿಕಗಳಿಂದ ನಷ್ಟ ಸಂಭವಿಸುವುದನ್ನು ತಪ್ಪಿಸಲು ಶೀಘ್ರ ನಿರ್ಮಿಸಬೇಕು ಎಂದು ಸಿರಾಜ್ ಅಹಮದ್, ಅಂಜು ಒತ್ತಾಯಿಸಿದ್ದಾರೆ.

ಪಿಎಸ್‌ಐ ಲಿಂಗನಗೌಡ ನೆಗಳೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.