ADVERTISEMENT

ಮುಖಭಂಗಕ್ಕೆ ನಾಂದಿ?

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 20:10 IST
Last Updated 11 ಫೆಬ್ರುವರಿ 2012, 20:10 IST

ಬೆಂಗಳೂರು: ಎರಡನೇ ಉಪ ಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದ ವಿವಾದ ನ್ಯಾಯಾಲಯದ ಮೆಟ್ಟಿಲೇರಿದರೆ ರಾಜ್ಯ ಸರ್ಕಾರ ಮುಖಭಂಗ ಅನುಭವಿಸಲಿದೆಯೇ?

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ಪ್ರಕಾರ ಈ ಸಾಧ್ಯತೆ ಹೆಚ್ಚಿದೆ. ಕೇಂದ್ರ ಜಾಗೃತ ಆಯೋಗದ ಮುಖ್ಯ ಜಾಗೃತ ಆಯುಕ್ತರ (ಸಿವಿಸಿ) ಹುದ್ದೆಗೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಜೆ.ಥಾಮಸ್ ಅವರನ್ನು ನೇಮಕ ಮಾಡಿದ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮುಖಭಂಗ ಅನುಭವಿಸಿದಂತೆ ರಾಜ್ಯ ಸರ್ಕಾರವೂ ಇಕ್ಕಟ್ಟಿಗೆ ಸಿಲುಕಬಹುದು ಎನ್ನುತ್ತಾರೆ ಅವರು.

`ಸಿವಿಸಿ ನೇಮಕಾತಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕಿ, ಪಿ.ಜೆ.ಥಾಮಸ್ ಅವರ ಹೆಸರು ಶಿಫಾರಸಿಗೆ ವಿರೋಧ ವ್ಯಕ್ತಪಡಿಸಿದ್ದರು. ಅದರ ಆಧಾರದಲ್ಲೇ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಕೊನೆಗೆ ನ್ಯಾಯಾಲಯ ಥಾಮಸ್ ಅವರ ನೇಮಕಾತಿಯನ್ನು ರದ್ದು ಮಾಡಿತು. ಉಪ ಲೋಕಾಯುಕ್ತರ ನೇಮಕಾತಿ ಪ್ರಕರಣ ಅದಕ್ಕೆ ಹೋಲಿಕೆ ಆಗುತ್ತದೆ. ಇಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೇ ವಿರೋಧ ವ್ಯಕ್ತ ಮಾಡಿದ್ದಾರೆ. ಅದು ಸರ್ಕಾರದ ಮುಖಭಂಗಕ್ಕೆ ಕಾರಣವಾಗಬಹುದು~ ಎನ್ನುತ್ತಾರೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯವರು.

ಈ ನೇಮಕಾತಿಯನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನಲ್ಲಿ ಯಾರಾದರೂ ಅರ್ಜಿ ಸಲ್ಲಿಸಬಹುದು. ಅಂತಹ ಬೆಳವಣಿಗೆ ನಡೆದಲ್ಲಿ ರಾಜ್ಯ ಸರ್ಕಾರ ಮುಜುಗರಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.