ADVERTISEMENT

`ಮುಖ್ಯಮಂತ್ರಿ' ಮುನಿಸು

ಬಿಜೆಪಿ ಪರ ಪ್ರಚಾರದಿಂದ ಚಂದ್ರು ದೂರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಬೆಂಗಳೂರು:  `ರಾಜಕೀಯವಾಗಿ ಸೂಕ್ತ ಸ್ಥಾನಮಾನ ದೊರಕಿಸಬೇಕೆಂಬ ಬೇಡಿಕೆ ಕುರಿತು ಬಿಜೆಪಿ ರಾಜ್ಯ ಘಟಕದ ಮುಖಂಡರು ಸ್ಪಂದಿಸದೇ ಇರುವುದನ್ನು ವಿರೋಧಿಸಿ ವಿಧಾನಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ' ಚಂದ್ರು ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ನನಗೆ ರಾಜಕೀಯವಾಗಿ ಸೂಕ್ತ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪಕ್ಷದ ರಾಜ್ಯ ಘಟಕದ ಹಿಂದಿನ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ರಾಷ್ಟ್ರೀಯ ನಾಯಕರಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದೇನೆ. ಇದುವರೆಗೆ ಯಾವುದೇ ನಾಯಕರೂ ಸೌಜನ್ಯಕ್ಕೂ ನನ್ನನ್ನು ಕರೆದು ಮಾತನಾಡಲಿಲ್ಲ' ಎಂದು ದೂರಿದರು.

`ನಾನು ಪಕ್ಷದ ಬೆಳವಣಿಗೆಗಾಗಿ ನನ್ನ ವೃತ್ತಿ ಜೀವನವನ್ನೇ ತ್ಯಾಗ ಮಾಡಿ ಪ್ರಾಮಾಣಿಕವಾಗಿ ದುಡಿದೆ. ವಿಧಾನ ಪರಿಷತ್ ಸದಸ್ಯನಾಗಿ ನೇಮಕ ಮಾಡುವಂತೆ ಮೂರು ಬಾರಿ ಬೇಡಿಕೆ ಇಟ್ಟರೂ ಮನ್ನಣೆ ನೀಡಲಿಲ್ಲ. ಈಗ ಪರಿಷತ್ತಿನ ಒಂದು ಸ್ಥಾನ (ಒಂದು ವರ್ಷ ಐದು ತಿಂಗಳ ಅವಧಿಗೆ) ಖಾಲಿ ಇದೆ. ಈ ಸ್ಥಾನಕ್ಕೆ ನನ್ನನ್ನು ನಾಮಕರಣ ಮಾಡಬೇಕು' ಎಂದು ಒತ್ತಾಯಿಸಿದರು.

ಪಕ್ಷದಲ್ಲಿ ಅಹವಾಲು ಹೇಳಿಕೊಳ್ಳಲು ಸೂಕ್ತ ವೇದಿಕೆ ಇಲ್ಲದ ಕಾರಣ ಅನಿವಾರ್ಯವಾಗಿ ಬಹಿರಂಗವಾಗಿ ಮಾತನಾಡಬೇಕಾಗಿದೆ. ಈ ಕಾರಣಕ್ಕಾಗಿ ಪಕ್ಷ ತಮ್ಮ ಮೇಲೆ ಯಾವುದೇ ಕ್ರಮ ಕೈಗೊಂಡರೂ ಎದುರಿಸಲು ಸಿದ್ಧ ಎಂದರು.

`ಸಚಿವರಾದ ಉಮೇಶ ಕತ್ತಿ, ವಿ.ಸೋಮಣ್ಣ, ಮುರುಗೇಶ ನಿರಾಣಿ ಅವರಂತಹ ಬಲಿಷ್ಠರೇ ಪಕ್ಷಕ್ಕೆ ಮುಖ್ಯವಾಗಿದ್ದಾರೆ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ನಾಯಕರು ದುಂಬಾಲು ಬೀಳುತ್ತಾರೆ.

ನಾನು ಹಿಂದುಳಿದ ವರ್ಗದಿಂದ ಬಂದವನು. ನನಗೆ ಜಾತಿ, ಹಣ, ಪ್ರಮುಖರ ಬೆಂಬಲ ಇಲ್ಲ. ಆದಕಾರಣ ನಮ್ಮಂತಹ ನೊಂದ ಕಾರ್ಯಕರ್ತರ ಧ್ವನಿ ಪಕ್ಷದ ಕಾರ್ಯಕರ್ತರಿಗೆ ಕೇಳುತ್ತಿಲ್ಲ. ಪಕ್ಷದ ನಾಯಕರು ತಮ್ಮ ಶ್ರೀಮಂತಿಕೆ, ದರ್ಪ, ಅಹಂಕಾರ ತೊರೆದು ಕಾರ್ಯಕರ್ತರ ಕಷ್ಟ ಸುಖ ವಿಚಾರಿಸಲು ಗಮನ ನೀಡಬೇಕು' ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.