ADVERTISEMENT

ಮುಖ್ಯೋಪಾಧ್ಯಾಯ ಹುದ್ದೆ: ಪ್ರಕ್ರಿಯೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 19:30 IST
Last Updated 13 ಅಕ್ಟೋಬರ್ 2011, 19:30 IST

ಬೆಂಗಳೂರು: ಪ್ರೌಢಶಾಲೆಗಳಲ್ಲಿನ 629 ಮುಖ್ಯೋಪಾಧ್ಯಾಯರ ಹುದ್ದೆಗಳ ಭರ್ತಿಗೆ ನಾಲ್ಕು ವರ್ಷಗಳ ಹಿಂದೆ ಆರಂಭವಾದ ಪ್ರಕ್ರಿಯೆ ಪೂರ್ಣಗೊಂಡಿದ್ದು ಗೆಜೆಟ್‌ನಲ್ಲಿ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಆದರೆ ಇದುವರೆಗೆ ನೇಮಕಾತಿ ಆದೇಶ ನೀಡದ ಕಾರಣ ಭಾವಿ ಮುಖ್ಯೋಪಾಧ್ಯಾಯರು ಭವಿಷ್ಯದ ಬಗ್ಗೆ ಕಂಗಾಲಾಗಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗವು 2007ರ ನವೆಂಬರ್‌ನಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ ಈ ವರ್ಷದ ಫೆಬ್ರುವರಿಯಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿತ್ತು. ಆ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಗೆಜೆಟ್‌ನಲ್ಲೂ ಪ್ರಕಟವಾಗಿದೆ. ಆದರೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ನೂ ನೇಮಕಾತಿ ಆದೇಶ ನೀಡಿಲ್ಲ.

ಖಾಲಿ ಇರುವ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ನೇರ ನೇಮಕಾತಿ ಮತ್ತು ಬಡ್ತಿ ಮೂಲಕ ತುಂಬುವ ಪ್ರಮಾಣಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ತೊಡಕು ಹಾಗೂ ಹೈಕೋರ್ಟ್ ನೀಡಿರುವ ಆದೇಶದಿಂದಾಗಿ ನೇಮಕ ಪ್ರಕ್ರಿಯೆ ಗೊಂದಲದ ಗೂಡಾಗಿದೆ. 2006ರ ಅಕ್ಟೋಬರ್ 31ರಂದು ಹೊರಡಿಸಿರುವ ಆದೇಶದ ಪ್ರಕಾರ ಶೇ 25ರಷ್ಟು ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಶೇ 75ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ ತುಂಬಬೇಕು.

ಈ ಮಧ್ಯೆ ಈಗ ಆಯ್ಕೆಗೊಂಡಿರುವ 629 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದರೆ ತಮಗೆ ಬಡ್ತಿ ನೀಡಲು ಹುದ್ದೆಗಳು ಖಾಲಿ ಇರುವುದಿಲ್ಲ ಎಂದು ಕೆಲ ಸಹ ಶಿಕ್ಷಕರು ಹೈಕೋರ್ಟ್ ಮೆಟ್ಟಿಲು ಹತ್ತಿದ್ದು, ನ್ಯಾಯಾಲಯವು ಕಳೆದ ಜೂನ್‌ನಲ್ಲಿ ನೀಡಿರುವ ಆದೇಶದಲ್ಲಿ ಶೇ 75ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ ತುಂಬುವಂತೆ ಆದೇಶಿಸಿದೆ.

ನ್ಯಾಯಾಲಯದ ಆದೇಶದಂತೆ ಶೇ 75ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ ತುಂಬಿದರೆ, ನೇರ ನೇಮಕಾತಿಗೆ 629 ಹುದ್ದೆಗಳು ಖಾಲಿ ಇರುವುದಿಲ್ಲ. ಹೀಗಾಗಿ ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದೆ. ಹೈಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರೂ ಇನ್ನೂ ಅಂಗೀಕಾರ ಆಗಿಲ್ಲ. ಹೀಗಾಗಿ ಮುಂದೇನು ಮಾಡಬೇಕು ಎಂದು ಸರ್ಕಾರವೂ ಗೊಂದಲದಲ್ಲಿದೆ.

1,123 ಮುಖ್ಯೋಪಾಧ್ಯಾಯರ ಹುದ್ದೆಗಳು ಖಾಲಿ ಇದ್ದು, ಈ ಪೈಕಿ ಶೇ 75ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ ತುಂಬಿದರೆ ನೇರ ನೇಮಕಾತಿಗೆ 629 ಹುದ್ದೆಗಳು ಉಳಿಯುವುದಿಲ್ಲ.  ನೇಮಕ ಪ್ರಕ್ರಿಯೆ ಆರಂಭವಾಗುವುದಕ್ಕೂ ಮೊದಲೇ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ನೇಮಕಾತಿ ಆರಂಭಿಸಿರುವುದು ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ.
 
ಪದವಿಪೂರ್ವ ಕಾಲೇಜುಗಳಿಂದ ಪ್ರೌಢಶಾಲೆಗಳನ್ನು ಬೇರ್ಪಡಿಸಲಾಗುತ್ತಿದ್ದು, ಅಂತಹ ಕಡೆ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ಸೃಷ್ಟಿಸುವ ಮೂಲಕ ಈಗಾಗಲೇ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂದು  ಧರಣಿ ಸತ್ಯಾಗ್ರಹ ನಡೆಸುತ್ತಿರುವ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

ಮುಖ್ಯೋಪಾಧ್ಯಾಯರ ಹುದ್ದೆಗೆ ನೇಮಕಗೊಂಡಿರುವ ಕೆಲ ಅಭ್ಯರ್ಥಿಗಳು ಹಾಸ್ಟೆಲ್ ವಾರ್ಡನ್ ಹುದ್ದೆಗಳಿಗೂ ಆಯ್ಕೆಯಾಗಿದ್ದರು. ಆದರೆ ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗೆ ಆಯ್ಕೆಯಾಗಿದ್ದರಿಂದ ವಾರ್ಡನ್ ಹುದ್ದೆ ಬೇಡ ಎಂದು ಬರೆದುಕೊಟ್ಟಿದ್ದಾರೆ. ಹೀಗಾಗಿ ಅತ್ತ ವಾರ್ಡನ್ ಹುದ್ದೆಯೂ ಇಲ್ಲ, ಇತ್ತ ಮುಖ್ಯೋಪಾಧ್ಯಾಯರ ಹುದ್ದೆಯೂ ಇಲ್ಲದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.