ADVERTISEMENT

ಮುಗಿದ ಮುಖ್ಯಮಂತ್ರಿ ಆಯ್ಕೆ, ಮುಗಿಯದ ಅಧಿಕಾರದ ಜಗಳ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 12:05 IST
Last Updated 10 ಜುಲೈ 2012, 12:05 IST
ಮುಗಿದ ಮುಖ್ಯಮಂತ್ರಿ ಆಯ್ಕೆ, ಮುಗಿಯದ ಅಧಿಕಾರದ ಜಗಳ
ಮುಗಿದ ಮುಖ್ಯಮಂತ್ರಿ ಆಯ್ಕೆ, ಮುಗಿಯದ ಅಧಿಕಾರದ ಜಗಳ   

ಬೆಂಗಳೂರು (ಐಎಎನ್ ಎಸ್): ಪರಸ್ಪರ ಘರ್ಷಣೆಗೆ ಇಳಿದಿರುವ ಬಿಜೆಪಿಯ ಉಭಯ ಬಣಗಳು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ ಅವರಿಗೆ ಡಿ.ವಿ. ಸದಾನಂದ ಗೌಡ ಅವರಿಂದ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಳ್ಳಲು ಮಂಗಳವಾರ ಅಂತಿಮವಾಗಿ ದಾರಿ ಮಾಡಿಕೊಟ್ಟಿವೆ. ಆದರೆ ಅಧಿಕಾರದಲ್ಲಿ ಪಾಲಿಗಾಗಿ ತಮ್ಮ ಹೋರಾಟ ಮುಂದುವರೆಸಿವೆ.

56ರ ಹರೆಯದ ಶೆಟ್ಟರ ಅವರು ಈ ಹಿಂದೆ ಪ್ರಕಟಿಸಿದ್ದಂತೆ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಬದಲಿಗೆ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ರಾಜನಾಥ್ ಸಿಂಗ್ ಹೇಳಿದರು. ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಸುಗಮಗೊಳಿಸುವ ಸಲುವಾಗಿ ಇನ್ನೊಬ್ಬ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಜೊತೆಗೆ ಸಿಂಗ್ ನಗರಕ್ಕೆ ಬಂದಿದ್ದಾರೆ.

ಸದಾನಂದ ಗೌಡ ಅವರು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರಿಗೆ ಬುಧವಾರ ತಮ್ಮ ರಾಜೀನಾಮೆ ಸಲ್ಲಿಸುವರು. ಶೆಟ್ಟರ ಅವರು ಇದೇ ವೇಳೆಗೆ ನೂತನ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡುವರು ಎಂದು ರಾಜನಾಥ್ ಸಿಂಗ್ ಹೇಳಿದರು.

ಇದಕ್ಕೆ ಮುನ್ನ ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷ ಸಭೆಯಲ್ಲಿ ಶೆಟ್ಟರ ಅವರನ್ನು ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಸರ್ವಾನುಮತದಿಂದ ಆರಿಸಲಾಯಿತು. ತೀವ್ರ ಘರ್ಷಣೆ, ಪ್ರಕ್ಷುಬ್ಧತೆಯ ನಡುವೆ ನಡೆದ ಸಭೆಗಳು, ಒತ್ತಡಗಳ ಬಳಿಕ ಮಂಗಳವಾರ ಬೆಳಗ್ಗೆ ನಡೆಯಬೇಕಾಗಿದ್ದ ಶಾಸಕಾಂಗ ಪಕ್ಷದ ಸಭೆ ಸಂಜೆ ನಡೆದು ಈ ಆಯ್ಕೆ ಮಾಡಲಾಯಿತು.

~ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ಇಲ್ಲಿ ಕರೆಯಲಾಗಿದ್ದು ಗೊತ್ತುವಳಿಯ ಮೂಲಕ ಶೆಟ್ಟರ ಅವರನ್ನು ನೂತನ ನಾಯಕನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುವುದು. ವರಿಷ್ಠ ಮಂಡಳಿಯ ವೀಕ್ಷಕರಾದ ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ನೇತೃತ್ವದಲ್ಲಿ ಸಭೆ ನಡೆಯುವುದು ಎಂದು ವಕ್ಷದ ವಕ್ತಾರರು ಇದಕ್ಕೆ ಮುನ್ನ  ಐಎಎನ್ ಎಸ್ ಗೆ ತಿಳಿಸಿದ್ದರು.

ಡಿ.ವಿ. ಸದಾನಂದ ಗೌಡ ಅವರ ಸ್ಥಾನದಲ್ಲಿ ಶೆಟ್ಟರ ಅವರನ್ನು ನೇಮಿಸಲಾಗುವುದು ಎಂದು ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಪ್ರಕಟಿಸಿದ ಒಂದು ದಿನದ ಬಳಿಕ ಸೋಮವಾರ ಹಾಗೂ ಮಂಗಳವಾರ ಮುಂಜಾನೆ ತೀವ್ರ ಸ್ವರೂಪದ ಚರ್ಚೆಗಳು ನಡೆದವು. 

ಒಂದು ಹಂತದಲ್ಲಿ ಈದಿನ ಸಭೆ ಆರಂಭಗೊಳ್ಳುವುದಕ್ಕೂ ಮೊದಲೇ ಹೊಸ ಬಿಕ್ಕಟ್ಟು ಕೂಡಾ ತಲೆ ಎತ್ತಿತ್ತು. ಕೆ.ಎಸ್. ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ, ಸದಾನಮದ ಗೌಡ ಅವರಿಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡುವುದರ ಜೊತೆಗೆ ಶೇಕಡಾ 50 ರಷ್ಟು ಸಚಿವ ಸ್ಥಾನಗಳನ್ನು ಸದಾನಂದ ಗೌಡ ಬೆಂಬಲಿರಿಗೆ ನೀಡಬೇಕೆಂದು ಸದಾನಂದ ಗೌಡ ಬೆಂಬಲಿಗರು ಪಟ್ಟು ಹಿಡಿದಿದ್ದರು.

ರಾಜ್ಯದಲ್ಲಿ ಪಕ್ಷದ ಉಸ್ತುವಾರಿಯ ಹೊಣೆ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಅವರು ಪಕ್ಷದ ನಾಯಕರು, ಶಾಸಕರ ಜೊತೆಗೆ ನಗರದಲ್ಲಿನ ಪಕ್ಷ ಕಚೇರಿಯಲ್ಲಿ ಮಾತುಕತೆ ನಡೆಸಿದರು. ಅಲ್ಲಿಗೆ ಶೆಟ್ಟರ, ಗೌಡ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರನ್ನು ಕರೆಸಿಕೊಂಡು ಸುಲಲಿತವಾಗಿ ನಾಯಕತ್ವ ಬದಲಾವಣೆ ನಡೆಸುವ ನಿಟ್ಟಿನಲ್ಲಿ ಚರ್ಚಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT