ADVERTISEMENT

ಮುತ್ತಯ್ಯಗೆ ಬಾಡಿ ವಾರಂಟ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST

ಬಳ್ಳಾರಿ:  ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆ ತಡೆಯುವಂತೆ ಕೋರಿ ಪ್ರತಿಭಟನೆ ನಡೆಸಿದ್ದ 29 ಜನರ ವಿರುದ್ಧ ಪ್ರಾಣ ಬೆದರಿಕೆ ಆರೋಪದಡಿ ದೂರು ನೀಡಿದ್ದ ಅರಣ್ಯಾಧಿಕಾರಿ ಎಸ್.ಮುತ್ತಯ್ಯ ಅವರಿಗೆ ಬಳ್ಳಾರಿ ಜಿಲ್ಲಾ ನ್ಯಾಯಾಲಯವು ಬುಧವಾರ ಬಾಡಿ ವಾರಂಟ್ ಜಾರಿ ಮಾಡಿದೆ.

ಮಾಜಿ ಸಚಿವ ಎಂ.ದಿವಾಕರ ಬಾಬು ಸೇರಿದಂತೆ ಒಟ್ಟು 29 ಜನರ ವಿರುದ್ಧ ಜಿಲ್ಲಾ ಅರಣ್ಯ ಇಲಾಖೆ ಕಚೇರಿಯ ಅತಿಕ್ರಮ ಪ್ರವೇಶ, ಪೀಠೋಪಕರಣ ಧ್ವಂಸ, ಹಲ್ಲೆ ಯತ್ನ ಹಾಗೂ ಪ್ರಾಣ ಬೆದರಿಕೆ ಆರೋಪ ಹೊರಿಸಿ ಮುತ್ತಯ್ಯ ದೂರು ನೀಡಿದ್ದರು.

ಜಿಲ್ಲೆಯ ಸಂಡೂರು ತಾಲ್ಲೂಕಿನ ತುಮಟಿ, ವಿಠಲಾಪುರ ಬಳಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ 2008ರ ಅಕ್ಟೋಬರ್ 15ರಂದು ಮಧ್ಯಾಹ್ನ ನಗರದ ಮೋತಿ ವೃತ್ತದ ಬಳಿಯ ಅರಣ್ಯ ಇಲಾಖೆ ಕಚೇರಿ ಎದುರು ಆರೋಪಿಗಳೆಲ್ಲ ಪ್ರತಿಭಟನೆ ನಡೆಸಿದ್ದರು.

ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ದೂರು ನೀಡಿದ್ದ ಮುತ್ತಯ್ಯ ಅವರನ್ನು ಸಾಕ್ಷ್ಯ ನುಡಿಯುವಂತೆ ಸೂಚಿಸಿ ಈ ವಾರಂಟ್ ಜಾರಿಗೊಳಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿರುವ ಜಿಲ್ಲಾ ನ್ಯಾಯಾಧೀಶೆ ಎಂ.ಜಿ. ಉಮಾ ಅವರು ಮುತ್ತಯ್ಯ ವಿರುದ್ಧ ಜೂನ್ 12ರಂದು ಸಮನ್ಸ್ ಜಾರಿ ಮಾಡಿ, ಜೂನ್ 21ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದರು.

ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಗಣಿ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಮುತ್ತಯ್ಯ ಅವರನ್ನು ಬಂಧಿಸಿರುವುದರಿಂದ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದು, ಅಂದು ವಿಚಾರಣೆಗೆ ಹಾಜರಾಗಿರಲಿಲ್ಲ.

ಬುಧವಾರ ಮತ್ತೆ ವಾರಂಟ್ ಹೊರಡಿಸಿರುವ ನ್ಯಾಯಾಲಯ, ಆಗಸ್ಟ್ 16ರಂದು ಅವರನ್ನು ವಿಚಾರಣೆಗೆ ಕರೆತರುವಂತೆ ಪೊಲೀಸರಿಗೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.