ADVERTISEMENT

ಮೃಗಾಲಯಕ್ಕೆ 3 ಡ್ವಾರ್ಫ್ ಕೈಮನ್ ಮೊಸಳೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 19:30 IST
Last Updated 7 ಜೂನ್ 2011, 19:30 IST
ಮೃಗಾಲಯಕ್ಕೆ 3 ಡ್ವಾರ್ಫ್ ಕೈಮನ್ ಮೊಸಳೆ
ಮೃಗಾಲಯಕ್ಕೆ 3 ಡ್ವಾರ್ಫ್ ಕೈಮನ್ ಮೊಸಳೆ   

ಮೈಸೂರು:  ಮೃಗಾಲಯಕ್ಕೆ ಮಂಗಳವಾರ ಪ್ರಪಂಚದ ಅತಿ ಚಿಕ್ಕ ಮೊಸಳೆ ಡ್ವಾಫ್ ಕೈಮನ್ ಸೇರಿದಂತೆ ಮೂರು  ಜಾತಿಯ ಮೊಸಳೆಗಳು ಬಂದಿವೆ.

ಚೆನ್ನೈನ ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್‌ನ ನೈಲ್ ಕ್ರೊಕೊಡೈಲ್, ಡ್ವಾರ್ಫ್ ಕೈಮನ್ ಮತ್ತು ಆಫ್ರಿಕನ್ ಸ್ಲೆಂಡರ್ ಸ್ಕೌಟೆಡ್ ಕ್ರೊಕೊಡೈಲ್‌ಗಳನ್ನು ಇದೀಗ  ಪ್ರವಾಸಿಗರು ವೀಕ್ಷಿಸಬಹುದು.

ನೈಲ್ ಕ್ರೊಕೊಡೈಲ್ ಪ್ರಪಂಚದ ಎರಡನೇಯ ಅತಿ ದೊಡ್ಡ ಮೊಸಳೆ ಜಾತಿಯದಾಗಿದ್ದು, ಆಫ್ರಿಕಾದ ಸೊಮಾಲಿಯಾ, ಇಥಿಯೋಪಿಯಾ, ಉಗಾಂಡ, ಕೀನ್ಯ,  ಈಜಿಪ್ಟ್, ತಾಂಜೇನಿಯಾ, ಜಿಂಬಾಬ್ವೆ ದೇಶಗಳಲ್ಲಿ ಕಂಡುಬರುತ್ತವೆ. 

ಇದು 21 ಅಡಿ ಉದ್ದ ಹಾಗೂ 730 ಕೆಜಿ ಬೆಳೆಯಬಲ್ಲವು. ನದಿಗಳು, ಸರೋವರಗಳು, ಜೌಗು ಪ್ರದೇಶಗಳಲ್ಲಿ ವಾಸಿಸಿ ಪ್ರತಿಕೂಲ ವಾತಾವರಣಗಳಲ್ಲಿ  ವಿಶೇಷ ಕಂದಕಗಳನ್ನು ನಿರ್ಮಿಸಿಕೊಂಡು ಬದುಕುತ್ತವೆ. ಮರಿ ಮೊಸಳೆಗಳು ಮೀನು, ಕಪ್ಪೆ ಹಾಗೂ ಇತರೆ ಸರೀಸೃಪಗಳನ್ನು ತಿಂದು ಬದುಕುತ್ತವೆ. ದೊಡ್ಡ  ಮೊಸಳೆಗಳು ಮಂಗ,  ಜಿಂಕೆ, ಜೀಬ್ರಾ ಮತ್ತಿತರ ಪ್ರಾಣಿಗಳನ್ನು ತಿನ್ನುತ್ತವೆ. 50 ಸೆಂಟಿಮೀಟರ್ ಆಳದ ಮರಳಿನಲ್ಲಿ ಗೂಡು ಕಟ್ಟಿ 40-60 ಮೊಟ್ಟೆಗಳನ್ನು  ಇಡುತ್ತವೆ. 80-90 ದಿವಸಗಳಲ್ಲಿ ಮರಿಗಳು ಜನಿಸುತ್ತವೆ. 70ರಿಂದ 100 ವರ್ಷಗಳವರೆಗೆ ಬದುಕಬಲ್ಲವು.

ಡ್ವಾರ್ಫ್ ಕೈಮನ್: ಪ್ರಪಂಚದ ಅತಿ ಚಿಕ್ಕ ಮೊಸಳೆ ಜಾತಿಗೆ ಸೇರಿದೆ. ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಬ್ರೆಜಿಲ್, ಕೊಲಂಬಿಯ, ಪೆರು, ವೆನೆಜುವೆಲಾ ಮತ್ತಿತರ ದೇಶಗಳಲ್ಲಿ ಇವು ವಾಸಿಸುತ್ತಿವೆ.

ನದಿಗಳಲ್ಲಿ ಮೀನು, ಪಕ್ಷಿ ಇತ್ಯಾದಿಗಳನ್ನು ತಿನ್ನುತ್ತವೆ. 10-25 ಮೊಟ್ಟೆಗಳನ್ನು ಮಣ್ಣು ಹಾಗೂ ಎಲೆಗಳು ಕೂಡಿದ ಗೂಡಿನಲ್ಲಿ ಇಡುತ್ತವೆ. 90 ದಿವಸಗಳಲ್ಲಿ ಮರಿಗಳು ಜನಿಸುತ್ತವೆ. ಈ ಮೊಸಳೆಗಳು 20-25 ವರ್ಷಗಳವರೆಗೆ ಬದುಕಬಲ್ಲವು.

ಆಫ್ರಿಕನ್ ಕ್ರೊಕೊಡೈಲ್: ಆಫ್ರಿಕಾದ ಮಧ್ಯ ಹಾಗೂ ಪಶ್ಚಿಮ ಭಾಗದ ನದಿ ಹಾಗೂ ಸರೋವರಗಳಲ್ಲಿ ಆಫ್ರಿಕನ್ ಸ್ಲೆಂಡರ್ ಸ್ಪೌಟೆಡ್ ಕ್ರೊಕೊಡೈಲ್‌ಗಳು ಕಾಣಸಿಗುತ್ತವೆ. 3ರಿಂದ4 ಮೀಟರ್ ಉದ್ದ ಇರುವ ಈ ಮೊಸಳೆಗಳಿಗೆ ಉದ್ದವಾದ ಮೂತಿ ಇರುತ್ತದೆ. ಮೀನು, ಕಪ್ಪೆ, ಹಾವು, ಪಕ್ಷಿಗಳನ್ನು ತಿನ್ನುತ್ತವೆ. 13-27 ಮೊಟ್ಟೆಗಳನ್ನು ಎಲೆಗರುವ ಗೂಡಿನಲ್ಲಿಡುತ್ತವೆ. 

ಜಗತ್ತಿದ  ಅತಿ ದೊಡ್ಡ ಮೊಸಳೆ ಸಾಲ್ಟ್ ವಾಟರ್ ಕ್ರೊಕೊಡೈಲ್ ಹಾಗೂ ಚಿಕ್ಕ ಮೊಸಳೆ ಡ್ವಾರ್ಫ್ ಕೈಮನ್‌ಗಳನ್ನು ಪ್ರದರ್ಶಿಸುವ ಕೆಲವೇ ಮೃಗಾಲಯಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಮೈಸೂರು ಮೃಗಾಲಯದ್ದು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಕೆ.ಬಿ. ಮಾರ್ಕಂಡೇಯ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.