ADVERTISEMENT

ಮೆಕ್ಕೆಜೋಳ ಉದ್ಯಮಿ ಕೊಲೆಗೆ ಯತ್ನ

ಕೋರಮಂಗಲ: ಕನ್ಹಯ್ಯಲಾಲ್ ಮೇಲೆ ಗುಂಡು ಹಾರಿಸಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 19:41 IST
Last Updated 2 ಜೂನ್ 2018, 19:41 IST
ಕನ್ಹಯ್ಯಲಾಲ್
ಕನ್ಹಯ್ಯಲಾಲ್   

ಬೆಂಗಳೂರು: ಕೋರಮಂಗಲದಲ್ಲಿ ಶನಿವಾರ ಮಧ್ಯಾಹ್ನ ಉದ್ಯಮಿ ಕನ್ಹಯ್ಯಲಾಲ್ ಅಗರ್ವಾಲ್‌ (54) ಅವರ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು, ಅವರತ್ತ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ನಾಲ್ಕು ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಒಂದು ಕನ್ಹಯ್ಯಲಾಲ್ ಅವರ ತಲೆಗೆ ತಾಗಿದೆ. ಉಳಿದ ಮೂರು ಟೇಬಲ್‌ಗೆ ತಗುಲಿವೆ. ಗಾಯಗೊಂಡಿರುವ ಉದ್ಯಮಿಯನ್ನು ಸೇಂಟ್ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಫಾರ್ಮ್ ಇಂಡಿಯಾ ಇಂಪೆಕ್ಸ್’ ಕಂಪನಿ ನಿರ್ದೇಶಕರಾದ ಅವರು, ಹೊಸೂರು ರಸ್ತೆಯ ರಹೇಜಾ ಆರ್ಕೇಡ್‌ನಲ್ಲಿ ಕಚೇರಿ ಹೊಂದಿದ್ದಾರೆ. ಅದೇ ಕಚೇರಿಯ ಕೊಠಡಿಗೆ ನುಗ್ಗಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ADVERTISEMENT

ಉದ್ಯಮಿ ಮಾತನಾಡುವ ಸ್ಥಿತಿಯಲ್ಲಿಲ್ಲ. ಘಟನೆ ವೇಳೆ ಕಚೇರಿಯಲ್ಲಿದ್ದ ಕೆಲಸಗಾರರು ಹಾಗೂ ಉದ್ಯಮಿ ಸಂಬಂಧಿಕರಿಂದ ಹೇಳಿಕೆ ಪಡೆಯಲಾಗುತ್ತಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್ ಸಿಂಗ್ ವರು ತಿಳಿಸಿದರು.

ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ, ‘ಪ್ರಕರಣದ ತನಿಖೆಗೆ ಪೊಲೀಸರ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಚೇರಿಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಆರೋಪಿಗಳ ಮುಖಚಹರೆ ಪತ್ತೆಯಾಗಿದೆ. ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ತಿಳಿಸಿದರು.

ಮೆಕ್ಕೆಜೋಳ ಖರೀದಿಸದಂತೆ ಬೆದರಿಕೆ: ರಾಜ್ಯ ಹಾಗೂ ಹೊರರಾಜ್ಯಗಳ ರೈತರಿಂದ ಮೆಕ್ಕೆಜೋಳ ಖರೀದಿಸುತ್ತಿದ್ದ ಕನ್ನಯ್ಯಲಾಲ್‌, ಅದನ್ನು ವಿದೇಶಕ್ಕೆ ರಫ್ತು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಒಂದೂವರೆ ವರ್ಷಗಳಿಂದ ಬಿಹಾರದ ಹಸನಾಪುರದ ರೈತರಿಂದ ಜೋಳ ಖರೀದಿಸಲಾರಂಭಿಸಿದ್ದರು. ಅದನ್ನು ಪ್ರಶ್ನಿಸಿದ್ದ ಸ್ಥಳೀಯ ಏಜೆಂಟರಾದ ವಿಭೂತಿಕುಮಾರ್ ಸಿಂಗ್ ಹಾಗೂ ಸಚಿನ್‌ಕುಮಾರ್ ಸಿಂಗ್, ‘ತಮ್ಮೂರಿನಲ್ಲಿ ವ್ಯಾಪಾರ ಮಾಡಿದರೆ ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಕೆವೊಡ್ಡಿದ್ದರು. ಈಗ ಅವರೇ ಬಿಹಾರದಿಂದ ಸುಪಾರಿ ಹಂತಕರನ್ನು ಕಳುಹಿಸಿ ಉದ್ಯಮಿ ಕೊಲೆಗೆ ಯತ್ನಿಸಿರುವ ಅನುಮಾನವಿದೆ’ ಎಂದು ಹೇಳಿದರು.

ತಂದೆಯನ್ನು ರಕ್ಷಿಸಿದ ಮಗ: ಕಚೇರಿಗೆ ಬಂದಿದ್ದ ದುಷ್ಕರ್ಮಿಗಳನ್ನು ಭದ್ರತಾ ಸಿಬ್ಬಂದಿ, ಬಾಗಿಲು ಬಳಿಯೇ ತಡೆದು ಪ್ರಶ್ನಿಸಿದ್ದರು. ಮೆಕ್ಕೆಜೋಳ ಖರೀದಿ ಸಂಬಂಧ ಮಾಲೀಕರ ಜೊತೆ ಮಾತನಾಡಬೇಕೆಂದು ಒಳಗೆ ಹೋಗಿದ್ದರು ಎಂದು ಪೊಲೀಸರು ಹೇಳಿದರು.

ಕಚೇರಿ ಕೊಠಡಿಯಲ್ಲಿ ಕನ್ಹಯ್ಯಲಾಲ್‌ ಹಾಗೂ ಅವರ ಮಗ ರಿಷಿ ಕುಳಿತುಕೊಂಡಿದ್ದರು. ಉದ್ಯಮಿಯ ಎದುರಿನ ಕುರ್ಚಿಯಲ್ಲೇ ದುಷ್ಕರ್ಮಿಗಳು ಕುಳಿತುಕೊಂಡಿದ್ದರು. ಅವರಲ್ಲಿ ಒಬ್ಬ ಜೋರು ಧ್ವನಿಯಲ್ಲಿ ಮಾತನಾಡಲಾರಂಭಿಸಿದ್ದ. ‘ಜೋಳ ಖರೀದಿಗೆ ಹಸನಾಪುರಕ್ಕೆ ಬರಬೇಡಿ’ ಎಂದು ಎಚ್ಚರಿಸಿದ್ದ. ಅದರಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯಿತು. ಅವಾಗಲೇ ದುಷ್ಕರ್ಮಿಯೊಬ್ಬ, ಪಿಸ್ತೂಲ್ ತೆಗೆದು ಕನ್ಹಯ್ಯಲಾಲ್‌ ಅವರತ್ತ ಹಾರಿಸಿದ.

ಅದನ್ನು ಕಂಡ ಮಗ ರಿಷಿ, ತಂದೆಯನ್ನು ಎಳೆದುಕೊಂಡು ಟೇಬಲ್‌ ಕೆಳಗೆ ಅವಿತುಕೊಂಡು ರಕ್ಷಣೆ ಪಡೆದ. ಅದಾದ ಬಳಿಕವೂ ಆರೋಪಿ, ಟೇಬಲ್‌ ಮೇಲೆಯೇ ಮೂರು ಸುತ್ತು ಗುಂಡು ಹಾರಿಸಿದ. ಗುಂಡು ಖಾಲಿ ಆಗುತ್ತಿದ್ದಂತೆ ದುಷ್ಕರ್ಮಿಗಳು, ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ವಿವರಿಸಿದರು.

ಸಿಎಂ ಸಭೆ ನಡೆದ ಎರಡೇ ದಿನದಲ್ಲಿ ಘಟನೆ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮೇ 31ರಂದು ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ್ದರು. ‘ಬೆಂಗಳೂರಿನಲ್ಲಿ ರೌಡಿಗಳ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಅಪರಾಧ ಸಂಖ್ಯೆ ಕಡಿಮೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಅದಾದ ಎರಡೇ ದಿನದಲ್ಲಿ ಉದ್ಯಮಿ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, ಪೊಲೀಸರ ಕೆಲಸವನ್ನು ಪ್ರಶ್ನಿಸುವಂತಿದೆ.

ಏಜೆಂಟರಿಂದ ಸುಪಾರಿ

‘ತಂದೆಯನ್ನು ಹತ್ಯೆ ಮಾಡಲು ಏಜೆಂಟರಾದ ವಿಭೂತಿಕುಮಾರ್ ಸಿಂಗ್ ಹಾಗೂ ಸಚಿನ್‌ಕುಮಾರ್ ಸಿಂಗ್ ಅವರೇ ಸುಪಾರಿ ಕೊಟ್ಟಿದ್ದಾರೆ’ ಎಂದು ಕನ್ಹಯ್ಯಲಾಲ್‌ ಅವರ ಮಗ ಚಿರಂಗ್ ದೂರಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಶನಿವಾರ ಬೆಳಿಗ್ಗೆಯಿಂದಲೇ ಏಜೆಂಟರು, ತಂದೆಯ ಮೊಬೈಲ್‌ಗೆ ಕರೆ ಮಾಡುತ್ತಿದ್ದರು. ಆದರೆ, ಅವರು ಸ್ವೀಕರಿಸಿರಲಿಲ್ಲ. ಮಧ್ಯಾಹ್ನ ತಂದೆ ಕಚೇರಿಯಲ್ಲಿರುವುದನ್ನು ತಿಳಿದುಕೊಂಡೇ ದುಷ್ಕರ್ಮಿಗಳು ಬಂದಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.