ADVERTISEMENT

ಮೆಟ್ಟೂರು ಮುಟ್ಟಿದರೂ ಮಂಡ್ಯಕ್ಕೆ ಬರಲಿಲ್ಲ!

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಮೈಸೂರು: ಕೃಷ್ಣರಾಜ ಸಾಗರ, ಕಬಿನಿ ಜಲಾಶಯದಿಂದ ಬಿಟ್ಟಿರುವ ನೀರು ತಮಿಳುನಾಡು ಮೆಟ್ಟೂರು ಜಲಾಶಯವನ್ನು ತಲುಪಿದೆ. ಆದರೆ ಕೆಆರ್‌ಎಸ್‌ನಿಂದ ನಾಲೆಗೆ ಬಿಟ್ಟ ನೀರು ಇನ್ನೂ ಮದ್ದೂರು, ಮಳವಳ್ಳಿ ತಾಲ್ಲೂಕಿನ ಹಲವು ಭಾಗಗಳಿಗೆ ತಲುಪಿಯೇ ಇಲ್ಲ.

ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಬಿಟ್ಟು 45 ದಿನಗಳಾಗಿವೆ. ಆದರೂ ಮದ್ದೂರು, ಮಳವಳ್ಳಿ ತಾಲ್ಲೂಕಿನ ಸುಮಾರು 60 ಸಾವಿರ ಎಕರೆ ಪ್ರದೇಶದ ಹೊಲಗಳಿಗೆ ನೀರು ಸಿಕ್ಕಿಲ್ಲ.  ಮಳವಳ್ಳಿ ತಾಲ್ಲೂಕಿನ ಕಸಬಾ, ಬಿ.ಜಿ. ಪುರ, ಕಿರುಗಾವಲು ಹಾಗೂ ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ನಾಲೆಗಳಲ್ಲಿ ನೀರು ಹರಿಯುತ್ತಿಲ್ಲ. ಈ ಭಾಗದ ಬಹುತೇಕ ಹೊಲಗಳಿಗೆ ನೀರು ಬರುವುದೆಂದು ರೈತರು ಕಾಯುತ್ತಲೇ ಇದ್ದಾರೆ. ಆದರೆ, ನೀರಿನ ಸುಳಿವೇ ಇಲ್ಲ.

ವಿ.ಸಿ ನಾಲೆಯ ಉಪಕಾಲುವೆ, ಬಿ.ಜಿ.ಪುರ ನಾಲೆ ಹಾಗೂ ನಂಜಾಪುರ ಏತ ನೀರಾವರಿ ನಾಲೆಗಳ ಮೂಲಕ ನೀರು ಬರಬೇಕಾಗಿತ್ತು. ನೀರು ಬಾರದ್ದರಿಂದ ಈ ಭಾಗದ ಸುಮಾರು 25 ಸಾವಿರ ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಕೊಪ್ಪ ಹೋಬಳಿಯಲ್ಲಿಯೂ ನೀರು ಬಂದಿಲ್ಲ. 310 ಕ್ಯೂಸೆಕ್ ನೀರು ಬರಬೇಕು. 180 ಕ್ಯೂಸೆಕ್ ಮಾತ್ರ ಬರುತ್ತಿದೆ. ಶಿಂಷಾ ಶಾಖಾ ನಾಲೆಯ ಸುಮಾರು 26,000 ಎಕರೆ ಹಾಗೂ ಕೆರಗೋಡು ನಾಲೆಯ ಸುಮಾರು 9 ಸಾವಿರ ಎಕರೆ ಪ್ರದೇಶಕ್ಕೆ ನೀರು ಸರಿಯಾಗಿ ಬರುತ್ತಿಲ್ಲ. ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಪರದಾಡುವಂತಾಗಿದೆ. ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿ ಹೇಮಾವತಿ ಅಣೆಕಟ್ಟಿನ ಕೊನೆಯ ಭಾಗ. ಅಲ್ಲಿಯೂ ನೀರು ಸರಿಯಾಗಿ ಹರಿಯುತ್ತಿಲ್ಲ.

ನಾಲೆಯಲ್ಲಿ ಬಿಟ್ಟ ನೀರನ್ನು ಅಚ್ಚುಕಟ್ಟು ಪ್ರದೇಶದ ಕೆರೆಗಳಿಗೆ ಭರ್ತಿ ಮಾಡಬೇಕು ಎಂದು ಕಾಡಾ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಈ ಪ್ರದೇಶದ ಸುಮಾರು 40ಕ್ಕೂ ಹೆಚ್ಚು ಕೆರೆಗಳು ಇನ್ನೂ ಭರ್ತಿಯಾಗಿಲ್ಲ.

ನೀರನ್ನು ಕೊನೆಯ ಭಾಗದವರೆಗೆ ತಲುಪಿಸಲು ಹಾಗೂ ಕೆರೆಗಳನ್ನು ಭರ್ತಿ ಮಾಡಿಸಲೆಂದು ಜಿಲ್ಲಾಡಳಿತವು ನೀರಾವರಿ, ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಿದೆ. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕೆಆರ್‌ಎಸ್ ಅಣೆಕಟ್ಟಿನಿಂದ ನೀರು ಬಿಟ್ಟ ಹತ್ತು ದಿನಗಳ ಒಳಗೆ ನಾಲೆಗಳ ಕೊನೆಯ ಭಾಗಕ್ಕೆ ತಲುಪಬೇಕು. ಆದರೆ, 45 ದಿನಗಳಾದರೂ ತಲುಪಿಲ್ಲ. ಕೂಡಲೇ ನೀರನ್ನು ತಲುಪಿಸುವ ಕೆಲಸ ಮಾಡದಿದ್ದರೆ ಕೃಷಿ ಚಟುವಟಿಕೆಯಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿಯೂ ಪರದಾಡಬೇಕಾಗುತ್ತದೆ ಎನ್ನುವುದು ರೈತರ ಆತಂಕ.

ಈ ಭಾಗದ ರೈತರದ್ದು ಈಗ ಎರಡು ಬಗೆಯ ಹೋರಾಟ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಹಾಗೂ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಿ ಎಂದು ಅವರು ಹೋರಾಡುತ್ತಿದ್ದಾರೆ. ಕೊಪ್ಪ ಭಾಗದ ನೂರಾರು ರೈತರು ಇತ್ತೀಚೆಗೆ ಮಂಡ್ಯದಲ್ಲಿರುವ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಕೊನೆಯ ಭಾಗದ ಹೊಲಗಳಿಗೂ ನೀರು ತಲುಪಿಸುವಂತೆ ಒತ್ತಾಯಿಸಿದ್ದಾರೆ.

ಅಣೆಕಟ್ಟೆಯಿಂದ ನೀರು ಬಿಡುವುದನ್ನು ಖಾತ್ರಿ ಮಾಡಿಕೊಂಡು ಈ ಭಾಗದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬತ್ತ ಬೆಳೆಯಲು ಬಿತ್ತನೆ ಮಾಡಲಾಗಿದೆ. ನೀರು ಬಾರದೆ ನಾಟಿ ಮಾಡಲು ಸಾಧ್ಯವಿಲ್ಲ. ಬಿತ್ತನೆ ಮಾಡಿದ ಬತ್ತ ಒಣಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮಂಡ್ಯ ಜಿಲ್ಲೆಯ ಏಳೂ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಬಿತ್ತನೆ ಬೀಜ ನೀಡುವಾಗ ~ಯಾವುದೇ ರೀತಿಯಲ್ಲಿ ನಷ್ಟ ಉಂಟಾದರೆ ಅದಕ್ಕೆ ನಾವೇ ಜವಾಬ್ದಾರರು~ ಎಂದು ರೈತರಿಂದ ಬರೆಸಿಕೊಂಡ ನಂತರವೇ ಕೃಷಿ ಇಲಾಖೆ ಬೀಜ ನೀಡಿದೆ. ಇದರಿಂದ ನೀರಿನ ಕೊರತೆಯಿಂದ ಬೆಳೆ ನಾಶವಾದರೆ ಸರ್ಕಾರದಿಂದ ಯಾವುದೇ ಪರಿಹಾರ ಕೂಡ ಸಿಗುವುದಿಲ್ಲ ಎಂಬ ಆತಂಕದಲ್ಲಿ ರೈತರು ಇದ್ದಾರೆ.

(ನಾಳಿನ ಸಂಚಿಕೆ ನೋಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.