ADVERTISEMENT

ಮೇಸ್ತ ಸಾವು: ವಕೀಲರ ನೇಮಕ ಕೋರಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

ಕಾರವಾರ:  ತಮ್ಮ ಪುತ್ರ ಪರೇಶ ಸಾವಿನ ಪ್ರಕರಣದ ತನಿಖೆ ವಿಷಯವಾಗಿ ರಾಜ್ಯ ಸರ್ಕಾರದ ಮೇಲೆ ತಮಗೆ ಭರವಸೆ ಇಲ್ಲ ಎಂದಿರುವ ಹೊನ್ನಾವರದ ಕಮಲಾಕರ ಮೇಸ್ತ, ವಾದ ಮಂಡಿಸಲು ಸ್ವಂತ ವಕೀಲರನ್ನು ನೇಮಿಸಿಕೊಳ್ಳಲು ಅನುಮತಿ ನೀಡಬೇಕು ಎಂದು ಜಿಲ್ಲಾ ನ್ಯಾಯಾಲಯಕ್ಕೆ ಮಂಗಳವಾರ ಮನವಿ ಮಾಡಿದ್ದಾರೆ.

ವಕೀಲ ನಾಗರಾಜ ನಾಯಕ ಮೂಲಕ ಅವರು ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ನಾಯಕ,  ‘ಅರ್ಜಿ ವಿಚಾರಣೆ ಮಾರ್ಚ್ 28ರಂದು ನಡೆಯಲಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಕಮಲಾಕರ ಆರೋಪಿಸಿದ್ದಾರೆ. ಪ್ರಕರಣದ ಒಂದನೇ ಆರೋಪಿಯು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ. ಸರ್ಕಾರಿ ವಕೀಲರು ಕಮಲಾಕರ ಅವರು ದಾಖಲಿಸಿದ ದೂರಿನ ಪ್ರಥಮ ತನಿಖಾ ವರದಿಯನ್ನು ಆಧರವಾಗಿಟ್ಟುಕೊಂಡೇ ವಾದ ಮಂಡಿಸುತ್ತಿದ್ದಾರೆ. ಇದರಿಂದ ಆರೋಪಿಗೆ ಜಾಮೀನು ದೊರಕಿ, ನ್ಯಾಯ ಸಿಗದಿರಬಹುದು. ಹೀಗಾಗಿ ವಕೀಲರನ್ನು ನೇಮಿಸಿಕೊಳ್ಳಲು ಬಯಸಿದ್ದಾರೆ’ ಎಂದರು.

ADVERTISEMENT

‘2017ರ ಡಿಸೆಂಬರ್ 13ಕ್ಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಅದರ ನಂತರವೂ ಕರ್ನಾಟಕ ಪೊಲೀಸರು ಇದೇ ಪ್ರಕರಣದ ಬಗ್ಗೆ ಪಂಚನಾಮೆ ನಡೆಸಿದ್ದಾರೆ. ಶವ ಸಿಕ್ಕಿದ ಸ್ಥಳದ ಸುತ್ತ ಇದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳ ಡಿವಿಆರ್ ಅನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಡಿವಿಆರ್ ಪಡೆದವರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಅಥವಾ ಸಿಬಿಐಗೆ ಹಸ್ತಾಂತರಿಸಿರುವ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸರು ನೀಡುತ್ತಿಲ್ಲ. ಒಂದು ವೇಳೆ ಅವರಿಗೆ ನೀಡದಿದ್ದಲ್ಲಿ ಪೊಲೀಸರು ಚಾರ್ಜ್‌ಶೀಟ್ ಯಾಕೆ ಸಲ್ಲಿಸಿಲ್ಲ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.