ADVERTISEMENT

ಮೈಕ್ರೊ ಇಯರ್ ಫೋನ್ ಮೂಲಕ ಉತ್ತರ!

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ‘ವಾಟ್ಸ್‌ಆ್ಯಪ್’ ಮೂಲಕ ಸೋರಿಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:31 IST
Last Updated 6 ಮಾರ್ಚ್ 2018, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಹಾಗೂ ವಿವಿಧ ಇಲಾಖೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿಕೊಂಡು, ಮೈಕ್ರೊ ಇಯರ್ ಫೋನ್ ಮೂಲಕ ಉತ್ತರ ನೀಡಿ ಹಣ ಗಳಿಸುತ್ತಿದ್ದ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.

ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ), ಹಾಸ್ಟೆಲ್ ವಾರ್ಡನ್‌, ಜೈಲು ವಾರ್ಡರ್ ಮತ್ತು ಸ್ಟೆನೊಗ್ರಾಫರ್ ಸೇರಿ ವಿವಿಧ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಂದ ಈ ತಂಡವು ತಲಾ ₹10ರಿಂದ ₹12 ಲಕ್ಷ ಪಡೆಯುತ್ತಿತ್ತು ಎಂದು ವಿಚಾರಣೆ ವೇಳೆ ಬಹಿರಂಗಗೊಂಡಿದೆ.

‘ಈ ಜಾಲದಲ್ಲಿ 12ಕ್ಕೂ ಹೆಚ್ಚು ಜನರಿದ್ದು ಕಲಬುರ್ಗಿ, ಅಫಜಲಪುರ, ವಿಜಯಪುರ ಮತ್ತು ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿದ್ದರು.  ಕೆಪಿಎಸ್‌ಸಿ ಪರೀಕ್ಷಾ ಕೇಂದ್ರಗಳನ್ನು ಹೊಂದಿದ್ದ ಕಲಬುರ್ಗಿಯ ಎರಡು ಕಾಲೇಜುಗಳ ಪ್ರಾಂಶುಪಾಲರ ನೆರವಿನಿಂದ ಪ್ರಶ್ನೆಪತ್ರಿಕೆಗಳನ್ನು ವಾಟ್ಸ್‌ಆ್ಯಪ್ ಮೂಲಕ ಪಡೆಯುತ್ತಿದ್ದರು. ಪರೀಕ್ಷೆ ಆರಂಭವಾದ 15–20 ನಿಮಿಷಗಳಲ್ಲಿ ಉತ್ತರಗಳನ್ನು ಸಿದ್ಧಪಡಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳುತ್ತವೆ.

ADVERTISEMENT

ಜಾಲದಲ್ಲಿ ಮೂರು ತಂಡ!: ‘ಈ ಜಾಲದಲ್ಲಿ ಡಿವೈಸ್ ತಂಡ, ಉತ್ತರ ನೀಡುವ ತಂಡ ಮತ್ತು ಪರಿಣತರ ತಂಡಗಳಿವೆ. ಪ್ರಶ್ನೆಪತ್ರಿಕೆಯನ್ನು ವಾಟ್ಸ್‌ಆ್ಯಪ್ ಮೂಲಕ ಪಡೆದ ತಕ್ಷಣ ಪರಿಣತರ ತಂಡವು ಉತ್ತರಗಳನ್ನು ಸಿದ್ಧಪಡಿಸುತ್ತಿತ್ತು. ಉತ್ತರ ನೀಡುವ ತಂಡವು ಪ್ರಶ್ನೆಪತ್ರಿಕೆಯ ಸರಣಿಗೆ (ಉದಾ: ಎ, ಬಿ, ಸಿ, ಡಿ) ಅನುಗುಣವಾಗಿ ಉತ್ತರಗಳನ್ನು ಹೊಂದಿಸಿಕೊಳ್ಳುತ್ತಿತ್ತು. ಡಿವೈಸ್ ತಂಡವು ಪರೀಕ್ಷಾ ಕೇಂದ್ರಗಳಿಗೆ ತೆರಳುವ ಮುನ್ನವೇ ಅಭ್ಯರ್ಥಿಗಳಿಗೆ ಮೈಕ್ರೊ ಇಯರ್ ಫೋನ್ ಕೊಟ್ಟು, ಅವರ ಮೊಬೈಲ್‌ ಅನ್ನು ತಮ್ಮ ಬಳಿ ಇರಿಸಿಕೊಳ್ಳುತ್ತಿತ್ತು. ಹಣ ಪಡೆದ ಅಭ್ಯರ್ಥಿಗಳಿಗೆ ಕಾಲ್‌ ಕಾನ್ಫರೆನ್ಸ್ ಮೂಲಕ ಉತ್ತರ ನೀಡುತ್ತಿತ್ತು ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ’ ಎಂಬುದು ಪೊಲೀಸ್‌ ಅಧಿಕಾರಿಯ ವಿವರಣೆ.

‘ಒಂದು ಪರೀಕ್ಷೆಗೆ 4–5 ಅಭ್ಯರ್ಥಿಗಳಿಂದ ಮಾತ್ರ ಈ ಜಾಲವು ಹಣ ಪಡೆಯುತ್ತಿತ್ತು. ಕೆಪಿಎಸ್‌ಸಿಯಲ್ಲಿ ತಮ್ಮ ಪ್ರಭಾವ ಬಳಸಿ, ತಮಗೆ ಅನುಕೂಲವಾಗುವ ಪರೀಕ್ಷಾ ಕೇಂದ್ರಗಳಲ್ಲೇ ಆ ಅಭ್ಯರ್ಥಿಗಳು ಪರೀಕ್ಷೆ ಬರೆಯುವಂತೆ ನೋಡಿಕೊಳ್ಳುತ್ತಿತ್ತು. ಜಾಲದಲ್ಲಿರುವ ಒಬ್ಬಾತ 50 ಜನರಿಗೆ ಕೆಲಸ ಕೊಡಿಸಿರುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ’ ಎಂದು ಮೂಲಗಳು ಹೇಳುತ್ತವೆ.

ಈ ಹಿಂದೆ ನಡೆದ ಎಫ್‌ಡಿಎ, ಎಸ್‌ಡಿಎ, ಹಾಸ್ಟೆಲ್ ವಾರ್ಡನ್, ಜೈಲು ವಾರ್ಡರ್ ಹುದ್ದೆಗಳಿಗೆ ಅನೇಕ ಅಭ್ಯರ್ಥಿಗಳಿಂದ ಹಣ ಪಡೆದುಕೊಂಡು ಈ ಜಾಲವು ಉತ್ತರ ನೀಡಿದೆ. ಹಣ ಕೊಟ್ಟ ಅಭ್ಯರ್ಥಿಗಳು ಆಯ್ಕೆಯಾಗಿ ಕೆಲಸ ಮಾಡುತ್ತಿದ್ದಾರೆ.

4 ಜನ ಆರೋಪಿಗಳ ಬಂಧನ
ಕಲಬುರ್ಗಿ: ಈಚೆಗೆ ನಡೆದ ಎಫ್‌ಡಿಎ ಪರೀಕ್ಷೆ ವೇಳೆ ಸರಿ ಉತ್ತರಗಳನ್ನು ನೀಡುವುದಾಗಿ ನಂಬಿಸಿ, ಅಭ್ಯರ್ಥಿಯೊಬ್ಬರಿಂದ ₹2 ಲಕ್ಷ ಪಡೆದಿದ್ದ ಆರೋಪದ ಮೇಲೆ ಅಫಜಲಪುರದ ಚಂದ್ರಕಾಂತ ಹರಳಯ್ಯ, ನಾಗರಾಜ ಟೆಂಗಳಿ, ಕಲಬುರ್ಗಿಯ ಭೀಮರಾಯ ಹೂವಿನಹಳ್ಳಿ ಹಾಗೂ ತಮಜಿದ್ ಮೈನೋದ್ದಿನ್ ಪಟೇಲ್ ಅವರನ್ನು ಪೊಲೀಸರು ಈಚೆಗೆ ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ‘ಈ ಪ್ರಕರಣದ ಪ್ರಮುಖ ಆರೋಪಿ, ಹಾಸ್ಟೆಲ್ ವಾರ್ಡನ್‌ ಆಗಿರುವ ಮೈಮೂದ್ ಇಮಾಮಸಾಬ್ ನದಾಫ್ ನಾಪತ್ತೆಯಾಗಿದ್ದು, ಬಂಧನಕ್ಕೆ ಜಾಲ ಬೀಸಲಾಗಿದೆ. ಬಂಧಿತರ ಹೇಳಿಕೆ ಆಧರಿಸಿ ಏಳು ಜನರನ್ನು ವಶಕ್ಕೆ ಪಡೆಯಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿ, ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟು ಕಳುಹಿಸಲಾಗಿದೆ’ ಎಂದು ಮೂಲಗಳು ಹೇಳುತ್ತವೆ.

ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹2ಕೋಟಿ ಮನೆ ಒಡೆಯ!
‘ಈ ಜಾಲದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಅಫಜಲಪುರ ತಾಲ್ಲೂಕು ಮಾತೊಳ್ಳಿಯ ಮೈಮೂದ್ ಇಮಾಮಸಾಬ್ ನದಾಫ್ ಅವರು ಇಲ್ಲಿನ ಮಿಸ್ಬಾ ನಗರದಲ್ಲಿ ₹2 ಕೋಟಿ ಮೌಲ್ಯದ ಮನೆ ಕಟ್ಟಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.