ADVERTISEMENT

ಮೈಸೂರಿನಲ್ಲಿ ಚಿರತೆ ಪ್ರತ್ಯಕ್ಷ: ಪೇದೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2011, 19:30 IST
Last Updated 31 ಅಕ್ಟೋಬರ್ 2011, 19:30 IST
ಮೈಸೂರಿನಲ್ಲಿ ಚಿರತೆ ಪ್ರತ್ಯಕ್ಷ: ಪೇದೆ ಮೇಲೆ ದಾಳಿ
ಮೈಸೂರಿನಲ್ಲಿ ಚಿರತೆ ಪ್ರತ್ಯಕ್ಷ: ಪೇದೆ ಮೇಲೆ ದಾಳಿ   

ಮೈಸೂರು:  ಚಿರತೆ ಪ್ರತ್ಯಕ್ಷವಾಗಿ ದಾಳಿ ನಡೆಸಿದ ಪರಿಣಾಮ ಪೇದೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಿಜಯನಗರದ 4ನೇ ಹಂತದ ಹೊರ ವರ್ತುಲ ರಸ್ತೆಯಲ್ಲಿ ಸೋಮವಾರ  ನಡೆಯಿತು.

ಬೆಳಿಗ್ಗೆ 6 ಗಂಟೆಗೆ ಚಿರತೆಯನ್ನು ಕಂಡ ನಾಗರಿಕರೊಬ್ಬರು ಕೂಡಲೇ ವಿಜಯನಗರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದರು. ಪೇದೆ ಚೆಲುವರಾಜು ಮತ್ತು ಸಿಬ್ಬಂದಿ ಪಿಸಿಆರ್ ವಾಹನದಲ್ಲಿ ಸ್ಥಳಕ್ಕೆ ತೆರಳಿದರು. ಪೊದೆಯೊಂದರಲ್ಲಿ ಚಿರತೆ ಅಡಗಿ ಕುಳಿತ್ತಿತ್ತು. ಇದನ್ನು ಅರಿಯದ ಚೆಲುವರಾಜು ಕೋಲು ಹಿಡಿದು ಪೊದೆ ಬಳಿ ತೆರಳಿದಾಗ ಚಿರತೆ ಹಠಾತ್ತನೆ ಇವರ ಮೇಲೆ ಎರಗಿತು.

ಇದರಿಂದ ಚೆಲುವರಾಜು ತೊಡೆಗೆ ಗಾಯವಾಯಿತಾದರೂ ಅಪಾಯದಿಂದ ಪಾರಾದರು. ಕೂಡಲೇ ಅವರನ್ನು ಅಪೊಲೊ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ಪಡೆಯುತ್ತಿರುವ ಅವರು ಚೇತರಿಸಿ ಕೊಳ್ಳುತ್ತಿದ್ದಾರೆ.

ಪತ್ತೆಯಾಗದ ಚಿರತೆ: ಚಿರತೆ ಪ್ರತ್ಯಕ್ಷವಾಗಿರುವ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ದಾವಿಸಿದರು.  ಮಧ್ಯಾಹ್ನದವರೆಗೆ ಕಾರ್ಯಾಚರಣೆ ನಡೆಸಿದರೂ ಚಿರತೆ ಪತ್ತೆ ಆಗಲಿಲ್ಲ. 

ಡಿಸಿಎಫ್ ಮನೋಜ್‌ಕುಮಾರ್, ಎಸಿಎಫ್ ದುರ್ಗೇಗೌಡ, ಚಾಮರಾಜೇಂದ್ರ ಮೃಗಾಲಯದ ವೈದ್ಯ ಡಾ.ಸುರೇಶ್‌ಕುಮಾರ್ ಅರಿವಳಿಕೆ ಮದ್ದಿನೊಂದಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿದರು. ಆದರೂ ಚಿರತೆಯ ಸುಳಿವು ಸಿಗಲಿಲ್ಲ. ಕೊನೆಗೆ ಮೂರು ಬೋನುಗಳನ್ನು ತರಿಸಿ ಪ್ರತ್ಯೇಕ ಸ್ಥಳಗಳಲ್ಲಿ ಇರಿಸಲಾಯಿತು.

ಜನರಲ್ಲಿ ಆತಂಕ: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಒಂದೂರವರೆ ತಿಂಗಳ ಹಿಂದೆಯಷ್ಟೆ ಚಿರತೆ ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಇದೀಗ ವಿಜಯನಗರಲ್ಲಿ ಬೆಳ್ಳಂಬೆಳಗ್ಗೆ ಚಿರತೆ ಕಾಣಿಸಿಕೊಂಡು ಪೇದೆ ಮೇಲೆ ದಾಳಿ ನಡೆಸಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಬಡಾವಣೆಯ ನಾಗರೀಕರು ಭಯಬೀತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.