ADVERTISEMENT

ಮೈಸೂರು ಅಂಚೆ ಕಚೇರಿಗೆ ಹುಸಿ ಬಾಂಬ್ ಕರೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಮೈಸೂರು: ನಗರದ ನೆಹರೂ ವೃತ್ತದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಅಪರಿಚಿತನೊಬ್ಬ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ ಘಟನೆ ಗುರುವಾರ ನಡೆಯಿತು.

ಬೆಳಿಗ್ಗೆ 9.20ರ ಸುಮಾರಿಗೆ ಅಪರಿಚಿತ ಕರೆ ಮಾಡಿ ‘ನಿಮ್ಮ ಕಚೇರಿಯಲ್ಲಿ ಬಾಂಬ್‌ ಇರಿಸಲಾಗಿ ದೆ. 11.30ಕ್ಕೆ ಸರಿಯಾಗಿ ಅದು ಸ್ಫೋಟಗೊಳ್ಳಲಿದೆ’ ಎಂದು ಹೇಳಿ ಕರೆಯನ್ನು ಕಡಿತಗೊಳಿಸಿದ. ಬಾಂಬ್‌ ಬೆದರಿಕೆ ಕರೆಯಿಂದಾಗಿ ಅಂಚೆ ಕಚೇರಿಯ ಸಿಬ್ಬಂದಿ ಆತಂಕಗೊಂಡರು. ಆಗತಾನೆ ಕಚೇರಿ ಆರಂಭವಾಗಿದ್ದರಿಂದ ಹೆಚ್ಚಿನ ಸಿಬ್ಬಂದಿ ಕಚೇರಿಯಲ್ಲಿ ಇರಲಿಲ್ಲ. ಒಳಗಿದ್ದ ಸಿಬ್ಬಂದಿ ಓಡಿ ಹೊರಬಂದರು. ಕಚೇರಿ ಎದುರಿನಲ್ಲೇ ಇದ್ದ ಲಷ್ಕರ್‌ ಪೊಲೀಸ್‌ ಠಾಣೆಗೆ ಸುದ್ದಿ ಮುಟ್ಟಿಸಿದರು.

ಸ್ಥಳಕ್ಕೆ ಆಗಮಿಸಿದ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಕಚೇರಿಯನ್ನು ಸಂಪೂರ್ಣ ತಪಾಸಣೆ ಮಾಡಿದಾಗ ಬಾಂಬ್‌ ಪತ್ತೆಯಾಗಲಿಲ್ಲ. ಬಳಿಕ ಅದು ಹುಸಿ ಬಾಂಬ್‌ ಕರೆ ಎಂಬ ನಿರ್ಧಾರಕ್ಕೆ ಬಂದರು.

ಸ್ಥಿರ ದೂರವಾಣಿಯಿಂದ ಅಪರಿಚಿತ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಪರಿಶೀಲಿಸಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.