ADVERTISEMENT

ಮೈಸೂರು ಮೃಗಾಲಯ: ಪ್ರಾಣಿ ದತ್ತು ಸ್ವೀಕಾರಕ್ಕೆ ಹೆಚ್ಚಿದ ಬೇಡಿಕೆ

17 ವರ್ಷಗಳಲ್ಲಿ ₹ 3.53 ಕೋಟಿ ಆದಾಯ

ಕೆ.ಓಂಕಾರ ಮೂರ್ತಿ
Published 7 ಜೂನ್ 2018, 19:56 IST
Last Updated 7 ಜೂನ್ 2018, 19:56 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಮೈಸೂರು: ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಕಾಳಜಿ ಹೆಚ್ಚುತ್ತಿದ್ದು, ಮೈಸೂರು ಮೃಗಾಲಯದಲ್ಲಿ ಪ್ರಾಣಿ–ಪಕ್ಷಿ ದತ್ತು ಪಡೆಯಲು ಹೆಚ್ಚಿನ ಬೇಡಿಕೆ ಬರುತ್ತಿದೆ.

ಹಣ ನೀಡಿ ದತ್ತು ಪಡೆದು ವರ್ಷದ ಮಟ್ಟಿಗೆ ಪ್ರಾಣಿಗಳ ನಿರ್ವಹಣೆ ವೆಚ್ಚ ಭರಿಸಲು ಮುಂದಾಗುತ್ತಿದ್ದಾರೆ. ಕೆಲವರು ಪ್ರತಿ ವರ್ಷ ದತ್ತು ನವೀಕರಿಸುತ್ತಿದ್ದಾರೆ. ಇದರಿಂದ ಮೃಗಾಲಯದ ಆದಾಯವೂ ಹೆಚ್ಚಿದೆ. ಹುಲಿ, ಚಿರತೆ, ಆನೆ, ಜಿರಾಫೆ, ನವಿಲು ದತ್ತು ಪಡೆಯುವವರ ಸಂಖ್ಯೆಯೇ ಅಧಿಕ.

ಈ ಯೋಜನೆಯಿಂದ ಕಳೆದ 17 ವರ್ಷಗಳಲ್ಲಿ ಸುಮಾರು ₹ 3.53 ಕೋಟಿ ಆದಾಯ ಮೃಗಾಲಯದ ಖಜಾನೆ ಸೇರಿದೆ. 2017–18ನೇ ಆರ್ಥಿಕ ವರ್ಷದಲ್ಲಿ ₹ 36 ಲಕ್ಷ ಆದಾಯ ಬಂದಿದೆ. 374 ಪ್ರಾಣಿಗಳನ್ನು ದತ್ತು ಪಡೆಯಲಾಗಿದೆ.

ADVERTISEMENT

‘ಮೃಗಾಲಯಕ್ಕೆ ಸರ್ಕಾರದಿಂದ ಅನುದಾನ ಬರುವುದಿಲ್ಲ. ಆದರೆ, ಪ್ರವೇಶ ಶುಲ್ಕ ಹಾಗೂ ದತ್ತು ಯೋಜನೆಯ ಹಣದಿಂದ ನಿರ್ವಹಣೆ ಸಾಧ್ಯವಾಗುತ್ತಿದೆ. ಒಂದು ಹುಲಿ ನಿರ್ವಹಣೆಗೆ ವರ್ಷಕ್ಕೆ ಕನಿಷ್ಠ ₹ 4 ಲಕ್ಷ ಬೇಕು’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ರವಿಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರೀಡಾಪಟುಗಳು, ಚಿತ್ರನಟರು ಮಾತ್ರವಲ್ಲದೆ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ಪ್ರಾಣಿಗಳನ್ನು ದತ್ತು ಪಡೆಯುತ್ತಿವೆ. ಹೊರರಾಜ್ಯದ ಪ್ರವಾಸಿಗರೂ ದತ್ತು ಸ್ವೀಕರಿಸುತ್ತಿದ್ದಾರೆ.

₹ 1,000ದಿಂದ 7,500 ನೀಡಿ ದತ್ತು ಪಡೆದರೆ ವರ್ಷದಲ್ಲಿ ಐದು ಮಂದಿಗೆ ಐದು ಬಾರಿ ಮೃಗಾಲಯ ಪ್ರವೇಶಕ್ಕೆ ಅವಕಾಶವಿದೆ. ₹ 10 ಸಾವಿರದಿಂದ 20 ಸಾವಿರ ನೀಡಿ ದತ್ತು ಪಡೆದರೆ ಐದು ಮಂದಿಗೆ ಹತ್ತು ಬಾರಿ ಪ್ರವೇಶ, ₹ 35 ಸಾವಿರದಿಂದ 1.75 ಲಕ್ಷ ನೀಡಿ ದತ್ತು ಪಡೆದರೆ ಐದು ಮಂದಿಗೆ ಅನಿಯಮಿತ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಪ್ರಮಾಣಪತ್ರ ನೀಡಲಾಗುತ್ತದೆ.

ಮೃಗಾಲಯದಲ್ಲಿ ಸದ್ಯ 1,433 ಪ್ರಾಣಿಗಳು ಇವೆ. ಜಾಗದ ಕೊರತೆಯಿಂದಾಗಿ ಎರಡು ಹುಲಿಗಳನ್ನು ಬೇರೆ ಮೃಗಾಲಯಗಳಿಗೆ ಹಸ್ತಾಂತರಿಸಲಾಗಿದೆ.
*
2001ರಲ್ಲೇ ದತ್ತು ಯೋಜನೆ ಜಾರಿ
ಮೈಸೂರು: 17 ವರ್ಷಗಳ ಹಿಂದೆ ಆರ್ಥಿಕ ನಷ್ಟದಿಂದಾಗಿ ಮೈಸೂರು ಮೃಗಾಲಯ ಮುಚ್ಚುವ ಹಂತ ತಲುಪಿತ್ತು. ಹೀಗಾಗಿ, ಅಂದಿನ ಕಾರ್ಯನಿರ್ವಾಹಕ ನಿರ್ದೇಶಕ ಕುಮಾರ ಪುಷ್ಕರ್ ಅವರು ಪ್ರಾಣಿಗಳ ದತ್ತು ಯೋಜನೆ ರೂಪಿಸಿದರು. ಈ ಯೋಜನೆ ಅಸ್ತಿತ್ವಕ್ಕೆ ಬಂದ 2001–02ನೇ ಸಾಲಿನಲ್ಲಿಯೇ ₹ 40 ಸಾವಿರ ಲಭಿಸಿತ್ತು. ಅಲ್ಲಿಂದ ದತ್ತು ಪಡೆಯುವವರ ಸಂಖ್ಯೆ ಹಾಗೂ ಆದಾಯ ಹೆಚ್ಚುತ್ತಲೇ ಇದೆ.

*
ಜನ್ಮದಿನ, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರ ಹೆಸರಿನಲ್ಲಿ ಪ್ರಾಣಿ ದತ್ತು ಪಡೆದು ಉಡುಗೊರೆ ನೀಡುತ್ತಿದ್ದಾರೆ. ಪ್ರಾಣಿಗಳ ಮೇಲಿನ ಕಾಳಜಿಗೆ ಇದು ಸಾಕ್ಷಿ.
ಸಿ.ರವಿಶಂಕರ್‌ ,ಕಾರ್ಯನಿರ್ವಾಹಕ ನಿರ್ದೇಶಕ, ಮೈಸೂರು ಮೃಗಾಲಯ

*
17 ವರ್ಷಗಳಲ್ಲಿ ದತ್ತು ಸ್ವೀಕಾರಗೊಂಡ ಪ್ರಾಣಿಗಳು: 4,041
ದತ್ತು ಸ್ವೀಕರಿಸಿದ ವ್ಯಕ್ತಿಗಳು: 3,149
ಮೃಗಾಲಯಕ್ಕೆ ಸರ್ಕಾರದಿಂದ ಅನುದಾನ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.