ADVERTISEMENT

ಮೊದಲು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 17:25 IST
Last Updated 16 ಫೆಬ್ರುವರಿ 2011, 17:25 IST

ಬೆಂಗಳೂರು: ‘ವಿಶ್ವ ದರ್ಜೆಯ ಯೋಜನೆಗಳನ್ನು ರೂಪಿಸುವುದು ನಿಮಗೆ ಗೊತ್ತು. ನಿಮ್ಮ ಬುಡದಲ್ಲಿಯೇ ವಾತಾವರಣ ಕಲುಷಿತಗೊಳಿಸುತ್ತಿರುವ ಒಳಚರಂಡಿಯನ್ನು ರಿಪೇರಿ ಮಾಡಿಸುವುದು ಗೊತ್ತಾಗುವುದಿಲ್ಲವೆ..?’ -ಇದು ಹೈಕೋರ್ಟ್ ಮಂಗಳವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪರಿ.

 ಆರ್‌ಎಂವಿ 2ನೇ ಹಂತದ 7ನೇ ಅಡ್ಡ ರಸ್ತೆಯ ಬಳಿ ಚರಂಡಿ ನೀರನ್ನು ಕಾಲುವೆಗೆ ಬಿಟ್ಟಿರುವ ಜಲ ಮಂಡಳಿಯ ಕ್ರಮವನ್ನು ಪ್ರಶ್ನಿಸಿ ಲೀಲಾವತಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಹಲವು ತಿಂಗಳಿಂದ ಈ ಭಾಗದಲ್ಲಿ ಸಮಸ್ಯೆ ಉಂಟಾಗಿ ದ್ದರೂ,ಈ ಬಗ್ಗೆ ಸಂಬಂಧಿತ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನ ಆಗಿಲ್ಲವೆನ್ನುವುದು ಅರ್ಜಿದಾರರ ದೂರು. ಇದರಿಂದ ದಿನಪೂರ್ತಿ ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಂಡೇ ಕಾಲ ಕಳೆಯಬೇಕಾಗಿದೆ. ಸುತ್ತಲಿನ ಜನರು ಸದಾ ರೋಗ ಭೀತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

‘ಆ ಯೋಜನೆ, ಈ ಯೋಜನೆ ಮಾಡುವ ಮೊದಲು ಇರುವ ನಾಗರಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು ಉತ್ತಮ’ ಎಂದು ಅವರು ಸೂಚ್ಯವಾಗಿ ಸರ್ಕಾರಕ್ಕೆ ಸೂಚಿಸಿದರು.

ಈ ಹಿನ್ನೆಲೆಯಲ್ಲಿ, ಚರಂಡಿ ನೀರನ್ನು ಕಾಲುವೆಗೆ ಹರಿಸದಂತೆ ಯಾವ ರೀತಿಯ ಕ್ರಮಗಳನ್ನು ತುರ್ತಾಗಿ  ತೆಗೆದುಕೊಳ್ಳಲಾಗುತ್ತದೆ, ಈ ಮೂಲಕ ಪರಿಸರ ಮಾಲಿನ್ಯವನ್ನು ಹೇಗೆ ತಡೆಗಟ್ಟಲಾಗುತ್ತದೆಂಬ ಬಗ್ಗೆ ಸೂಕ್ತ ಅಧಿಕಾರಿಗಳಿಂದ ಪ್ರಮಾಣಪತ್ರ ಸಲ್ಲಿಸಲು ಜಲಮಂಡಳಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.

ಮಾಹಿತಿಗೆ ಆದೇಶ: ಹೈಕೋರ್ಟ್ ಸುತ್ತ ವಕೀಲರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡುವ ಸಂಬಂಧದ ಪ್ರಸ್ತಾವ ಯಾವ ಹಂತದಲ್ಲಿ ಇದೆ ಎಂದು ತಿಳಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಪಾರ್ಕಿಂಗ್ ಸೌಲಭ್ಯ ಕೋರಿ ವಕೀಲರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಈ ಸೌಲಭ್ಯದ ಕುರಿತು ಈಗಾಗಲೇ ಸರ್ಕಾರದ ಮುಂದೆ ಪ್ರಸ್ತಾವ ಇರುವ ಹಿನ್ನೆಲೆಯಲ್ಲಿ ಅದು ಯಾವ ಹಂತದಲ್ಲಿ ಇದೆ ಎಂಬ ಮಾಹಿತಿಯನ್ನು ಕೋರ್ಟ್ ಬಯಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.