ADVERTISEMENT

‘ಮೋಚಿ ಮಗ ಮೋಚಿನೇ ಆಗಬೇಕೆ?’

ವಿಧಾನಸಭೆಯಲ್ಲಿ ಚರ್ಚೆಗೆ ಮೆರಗು ತಂದ ‘ಸ್ಟಾರ್‌ ಹೊಟೇಲ್‌ ಹೇರ್‌ ಕಟಿಂಗ್‌’

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 19:30 IST
Last Updated 13 ಜೂನ್ 2017, 19:30 IST
‘ಮೋಚಿ ಮಗ ಮೋಚಿನೇ ಆಗಬೇಕೆ?’
‘ಮೋಚಿ ಮಗ ಮೋಚಿನೇ ಆಗಬೇಕೆ?’   

ಬೆಂಗಳೂರು: ‘ಮೋಚಿ ಮಗ ಮೋಚಿನೇ ಆಗಬೇಕೇನ್ರಿ’.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ ಗೋವಿಂದ ಕಾರಜೋಳ ಅವರಿಗೆ ಕೇಳಿದ ಪ್ರಶ್ನೆ ಇದು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಗೋವಿಂದ ಕಾರಜೋಳ ಅವರು ‘ಕುಲಕಸುಬು ನಂಬಿಕೊಂಡು ಬಂದವರಿಗೆ ಆಯಾ ಕಸುಬಿನ ಬಗ್ಗೆ ಕೌಶಲ ತರಬೇತಿ ಕೊಡಬೇಕು’ ಎಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ  ಆಡಿದ ಮಾತುಗಳು ಸ್ವಾರಸ್ಯಕರ  ಚರ್ಚೆಗೆ ಎಡೆಮಾಡಿತು.

ADVERTISEMENT

‘ಈಗಿನ ಕಾಲದಲ್ಲಿ ಕುಲ ಕಸುಬು ಮುಂದುವರಿಸಲು ಸಾಧ್ಯವಿಲ್ಲ. ಮರಗೆಲಸ ಮತ್ತು ಕಲ್ಲು ಒಡೆಯುವ ಕಸುಬನ್ನು ಬಿಟ್ಟರೆ ಉಳಿದವು ಅಪ್ರಸ್ತುತ ಆಗಿವೆ.  ಕಂಬಳಿ ನೇಯ್ದರೆ ಯಾರು ತೆಗೆದುಕೊಳ್ಳುತ್ತಾರೆ. ಹಿಂದೆ ಸೇನೆಯಲ್ಲಿ ತೆಗೆದುಕೊಳ್ಳುತ್ತಿದ್ದರು. ಈಗ ಯಾರೂ ತೆಗೆದುಕೊಳ್ಳುವುದಿಲ್ಲ. ಕಂಬಳಿಯನ್ನು ಕೇಳುವವರೇ ಇಲ್ಲ. ಚಪ್ಪಲಿ ಹೊಲಿದು ಕಡಿಮೆ ದರ ಇಟ್ಟರೂ ಯಾರೂ ಖರೀದಿಸುವುದಿಲ್ಲ. ಹೇರ್‌ ಕಟಿಂಗ್‌ ಸಲೂನ್‌ಗಳಲ್ಲೂ ಈಗ ಅದೇ ಜಾತಿಯವರು ಕೆಲಸ ಮಾಡುತ್ತಿಲ್ಲ’ ಎಂದರು.

‘ ಹದಿನೈದು ವರ್ಷಗಳ ಹಿಂದೆ ನಾನು ದೆಹಲಿಗೆ ಹೋಗಿದ್ದಾಗ ಅಶೋಕ ಹೊಟೇಲಿನಲ್ಲಿ ₹ 200 ಕೊಟ್ಟು ಹೇರ್‌ ಕಟಿಂಗ್‌ ಮಾಡಿಸಿದ್ದೆ ಎಂದು ಸಿದ್ದರಾಮಯ್ಯ ಹೇಳಿದಾಗ, ‘ಈಗ ಹೆಂಗಸರೂ ಕಟಿಂಗ್‌ ಮಾಡುತ್ತಾರೆ. ಆದರೆ, ಅದಕ್ಕೆ ರೇಟ್‌ ಜಾಸ್ತಿ’ ಎಂದು ಕಾಂಗ್ರೆಸ್‌ನ ಕೆ.ಎನ್‌. ರಾಜಣ್ಣ ಹಾಸ್ಯ ಚಟಾಕಿ ಹಾರಿಸಿದರು.

‘ಪಂಚತಾರಾ ಹೊಟೇಲಿನಲ್ಲಿ ಕಟಿಂಗ್‌ ರೇಟ್‌ ಆಗ ₹ 200 ಇತ್ತು.  ಈಗ ₹ 2000 ಆಗಿರುತ್ತದೆ’ ಎಂದು ಬಿಜೆಪಿಯ ಸಿ.ಟಿ.ರವಿ ಮುಖ್ಯಮಂತ್ರಿಯವರನ್ನು ಕಿಚಾಯಿಸಿದಾಗ, ‘ರವಿ ನೀನು ಸ್ಟಾರ್‌ ಹೊಟೇಲಲ್ಲಿ ಕಟಿಂಗ್‌ ಮಾಡಿಸ್ಕೊಳ್ತೀಯಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ‘ನಾನು ಚಿಕ್ಕಮಗಳೂರಿನಲ್ಲಿ ಕಳೆದ 25 ವರ್ಷಗಳಿಂದ ಒಂದೇ ಸಲೂನ್‌ನಲ್ಲಿ  ಕಟಿಂಗ್‌ ಮಾಡಿಸಿಕೊಳ್ಳುತ್ತಿದ್ದೇನೆ’ ಎಂದರು.

‘ ಸ್ಟಾರ್‌ ಹೊಟೇಲ್‌ನಲ್ಲಿ ಕಟಿಂಗ್ ಮಾಡಿಸಿಕೊಳ್ಳುವ ಬಗ್ಗೆ  ಎಂ.ಬಿ.ಪಾಟೀಲರನ್ನು ಕೇಳಿದರೆ ಸೂಕ್ತ’ ಎಂದು ಸಭಾಧ್ಯಕ್ಷ ಕೋಳಿವಾಡ ಮಾತು ಸೇರಿಸಿದರು.
ಚರ್ಚೆ ಹಳಿ ತಪ್ಪಿದ್ದನ್ನು ಗಮನಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಜಾತಿ, ಕುಲ ಕಸುಬು, ಹೇರ್‌ ಕಟಿಂಗ್‌ಗಳ ಬಗ್ಗೆ ಪ್ರತ್ಯೇಕ ಚರ್ಚೆ ನಡೆಯುವುದು ಒಳ್ಳೆಯದು’ ಎಂದು ಹೇಳಿದ ಬಳಿಕ ಚರ್ಚೆಗೆ ತೆರೆಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.