ADVERTISEMENT

ಮೋದಿ ಮಾತು ಅರ್ಥ ಕಳೆದುಕೊಳ್ಳುತ್ತಿದೆ

ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2018, 7:44 IST
Last Updated 6 ಮೇ 2018, 7:44 IST
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿದರು
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿದರು   

ಕರ್ನಾಟಕದ ಬೆನ್ನಿಗೆ ಇರಿಯುವುದು ಬಿಜೆಪಿಯ ಮಿಷನ್. ಕೇಂದ್ರ ಸರ್ಕಾರ ಸಂಚು ನಡೆಸಿ ಕರ್ನಾಟಕದ ಜನತೆಯ ಹಕ್ಕು ಮತ್ತು ನ್ಯಾಯಯುತ ಪಾಲನ್ನು ನಿರಾಕರಿಸುತ್ತಿದೆ ಎಂದು ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮೂಲಸೌಕರ್ಯ ಅಭಿವೃದ್ಧಿ, ಬರ ಪರಿಹಾರ, ನಗರಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಅಭಿವೃದ್ಧಿ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ' ಎಂದರು.

ಕೇಂದ್ರದ ಮಲತಾಯಿ ಧೋರಣೆ ಪರಿಣಾಮವಾಗಿ ₹78,727 ಕೋಟಿ ಮೊತ್ತದ ಯೋಜನೆಗಳ ಅನುಷ್ಠಾನ ವಿಳಂಬವಾಗಿದೆ. ಅವುಗಳ ಅಂದಾಜು ವೆಚ್ಚ ₹96,951 ಕೋಟಿಗೆ ಹೆಚ್ಚಳವಾಗಿದೆ. ಆ ಮೂಲಕ ಕರ್ನಾಟಕದ ಜನರ ಮೇಲೆ ₹ 25,000 ಕೋಟಿ ಹೊರೆ ಹೊರಿಸಲಾಗಿದೆ ಎಂದು ಆಪಾದಿಸಿದರು.

ADVERTISEMENT

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ₹35,000 ಕೋಟಿ ಮೊತ್ತದ ಖನಿಜ ಲೂಟಿ‌ ನಡೆಯಿತು. ಈಗ ನಾಲ್ಕು ವರ್ಷಗಳಿಂದ 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ದೊರೆಯಬೇಕಿದ್ದ ₹35,000 ಕೋಟಿಯನ್ನು ನೀಡದೆ ಅನ್ಯಾಯ ಮಾಡಲಾಗಿದೆ ಎಂದರು.

ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಮತ್ತು ಕರ್ನಾಟಕದ ಹಕ್ಕು ಕಸಿಯುವುದು ಬಿಜೆಪಿಯ ವಂಶವಾಹಿಯಲ್ಲಿ ಸೇರಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಾತು ಮತ್ತು ಕೃತಿ ನಡುವೆ ಹೋಲಿಕೆ ಇಲ್ಲ. ಮೋದಿಯವರ ಮಾತುಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.