ADVERTISEMENT

ಮೋರಿಯಲ್ಲಿ ಆಶ್ರಯ ಪಡೆದಿದ್ದ ಅಬ್ದುಲ್‌ ಗಫೂರ್!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST
ಅಬ್ದುಲ್‌ ಗಫೂರ್‌
ಅಬ್ದುಲ್‌ ಗಫೂರ್‌   

ಹೊನ್ನಾವರ (ಉತ್ತರ ಕನ್ನಡ): ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ, ಲಾರಿ ಚಾಲಕ ಅಬ್ದುಲ್‌ ಗಫೂರ್ ಅಬ್ದುಲ್‌ ಜಬ್ಬಾರ್‌ ಸುಂಠಿ ಮಂಗಳವಾರ ತಾಲ್ಲೂಕಿನ ದಿಬ್ಬಣಗಲ್‌ನಲ್ಲಿ ಪತ್ತೆಯಾಗಿದ್ದಾರೆ.

ಮೋರಿಯೊಂದರಲ್ಲಿ ನಿತ್ರಾಣ ಸ್ಥಿತಿಯಲ್ಲಿದ್ದ ಅವರನ್ನು ಪೊಲೀಸರು ರಕ್ಷಿಸಿ, ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು.

ಉದ್ರಿಕ್ತರು ಹಲ್ಲೆ ನಡೆಸಿದ್ದರಿಂದ ಗಾಯಗೊಂಡಿದ್ದ ತಾವು, ಅವರಿಂದ ತಪ್ಪಿಸಿಕೊಂಡು ಮೋರಿಯೊಂದರಲ್ಲಿ ಆಶ್ರಯ ಪಡೆದಿದ್ದಾಗಿ ಗಫೂರ್‌ ಹೇಳಿದ್ದಾರೆ. ನಾಲ್ಕು ರಾತ್ರಿಗಳನ್ನು ಅಲ್ಲಿಯೇ ಕಳೆದಿದ್ದಾಗಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಶಿರಸಿ ತಾಲ್ಲೂಕಿನ ಬಿಳಿಗಿರಿಕೊಪ್ಪದ ನಿವಾಸಿಯಾದ ಅಬ್ದುಲ್‌, ಡಿ.8ರಂದು ಹೊನ್ನಾವರದಲ್ಲಿ ನಾಪತ್ತೆಯಾಗಿದ್ದರು. ಈ ಕುರಿತು ಪತ್ನಿ ಜುವೇರಿಯಾ, ಶಿರಸಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಎರಡು ಸಲ ದಾಳಿ: ‘ಡಿಸೆಂಬರ್ 8ರಂದು ಬೆಳಿಗ್ಗೆ ಲಾರಿಯಲ್ಲಿ ಮರಳು ತುಂಬಿಕೊಂಡು ಶಿರಸಿ ಕಡೆಗೆ ಹೊರಟಿದ್ದೆ. ಅಂದು ಹೊನ್ನಾವರ ಪಟ್ಟಣದಲ್ಲಿ ಗಲಾಟೆ ಇದುದ್ದರಿಂದ ಗೇರುಸೊಪ್ಪ ಮಾರ್ಗದ ಮೂಲಕ ಶಿರಸಿಗೆ ಹೋಗುತ್ತಿದ್ದೆ. ಈ ವೇಳೆ ಖರ್ವಾ ಕ್ರಾಸ್ ಬಳಿ ಸುಮಾರು 20 ಜನರ ಗುಂಪೊಂದು ನನ್ನನ್ನು ಅಡ್ಡಗಟ್ಟಿ ಬ್ಯಾಟ್, ರಾಡ್‌ಗಳೊಂದಿಗೆ ಹಲ್ಲೆ ನಡೆಸಿತು.

ಅವರು ನನ್ನ ಬಳಿಯಿದ್ದ ₹ 18 ಸಾವಿರ ನಗದು ಹಾಗೂ ಮೊಬೈಲ್‌ ದೋಚಿದರು. ಆಗ ಲಾರಿಯನ್ನು ಅಲ್ಲಿಯೇ ಬಿಟ್ಟು ರಸ್ತೆ ಪಕ್ಕದ ಬೆಟ್ಟದ ಕಡೆ ಓಡಿದೆ. ಸಂಜೆ ಬೆಟ್ಟ ಇಳಿದು ರಸ್ತೆಗೆ ಬಂದಾಗ ಮತ್ತೆ 10–12 ಜನರಿದ್ದ ಗುಂಪು ನನ್ನ ಮೇಲೆ ದಾಳಿ ಮಾಡಿತು. ಮತ್ತೆ ಪೆಟ್ಟು ತಿಂದ ನಾನು ಅಲ್ಲಿಂದ ಓಡಿ ಹೋಗುತ್ತ ದಿಬ್ಬಣಗಲ್‌ನ ಮೋರಿಯ ಅಡಿಗೆ ನುಸುಳಿದೆ’ ಎಂದು ಗಫೂರ್‌ ಘಟನೆಯನ್ನು ವಿವರಿಸಿದರು.

‘ಮಾರನೇ ದಿನ ಮೋರಿಗೆ ಸಮೀಪವಿದ್ದ ಗೇರು ಬೀಜ ಸಂಸ್ಕರಣಾ ಕಾರ್ಖಾನೆಯವರು ಒಂದು ಬಿಸ್ಕತ್ ಪೊಟ್ಟಣ ಹಾಗೂ ನೀರು ಕೊಟ್ಟರು. ದಿನವೂ ಸ್ವಲ್ಪ ಹೊತ್ತು ಮಾತ್ರ ಹೊರಗೆ ಬಂದು ನೀರನ್ನು ಪಡೆದು ಮತ್ತೆ ಮೋರಿಯಡಿ ಹೋಗುತ್ತಿದ್ದೆ. ಮನೆಗೆ ಕರೆ ಮಾಡಬೇಕೆಂದು ಮೊಬೈಲ್ ಕೇಳಿದರೆ ಯಾರೊಬ್ಬರೂ ಕೊಡಲಿಲ್ಲ. ಮಂಗಳವಾರ ಬೆಳಿಗ್ಗೆ ಬಸ್ಸಿನಿಂದಿಳಿದ ಒಬ್ಬರ ಬಳಿ ಮೊಬೈಲ್ ಪಡೆದು ಶಿರಸಿಯಲ್ಲಿರುವ ನನ್ನ ಮಾಲೀಕರಾದ ಪರಮೇಶ್ವರ ಕೊನ್ನೂರು ಅವರಿಗೆ ಕರೆ ಮಾಡಿ ನನ್ನ ಪರಿಸ್ಥಿತಿ ತಿಳಿಸಿದೆ. ಪೊಲೀಸರು ಬಂದಾಗ ನಾನು ಮಾತನಾಡಲಾರದಷ್ಟು ನಿತ್ರಾಣನಾಗಿದ್ದೆ’ ಎಂದು ಹೇಳಿದರು.

‘ಅಬ್ದುಲ್‌ ಗಫೂರ್‌ ನಾಪತ್ತೆಯಾದ ವಿಷಯ ಆತಂಕ ಸೃಷ್ಟಿಸಿತ್ತು. ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ಕೊಡಿಸಿದ್ದು, ಮನೆಗೆ ಸೇರಿಸಲಾಗುವುದು’ ಎಂದು ಪಿಎಸ್‌ಐ ಆನಂದ ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.