ಬೆಂಗಳೂರು: ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದ ಸುಪ್ರಸಿದ್ಧ ಸಂಗೀತ ಕಲಾವಿದ ರುದ್ರ ಪಟ್ಟಣ ಕೃಷ್ಣಶಾಸ್ತ್ರಿ ಶ್ರೀಕಂಠನ್ (94) ಸೋಮವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರಿಗೆ ಪತ್ನಿ, ರುದ್ರಪಟ್ಟಣ ರಮಾಕಾಂತ ಸೇರಿದಂತೆ ಐವರು ಪುತ್ರರು ಹಾಗೂ ರತ್ನಮಾಲಾ ಪ್ರಕಾಶ್ ಸೇರಿದಂತೆ ಇಬ್ಬರು ಪುತ್ರಿಯರು ಇದ್ದಾರೆ. ಶ್ವಾಸಕೋಶ ಸಂಬಂಧಿ ತೊಂದರೆಯಿಂದ ಬಳಲಿದ ಅವರು, ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಮೈಸೂರು ಅರಮನೆಯಲ್ಲಿ ಮಹಾರಾಜರ ಮುಂದೆ ಹಾಡಿದ್ದ ರುದ್ರಪಟ್ಟಣ ಕೃಷ್ಣಶಾಸ್ತ್ರಿ ಶ್ರೀಕಂಠನ್, ಸಾಹಿತ್ಯ ಶುದ್ಧಿ, ಶ್ರುತಿ ಶುದ್ಧಿ ಹಾಗೂ ಸ್ವರ ಶುದ್ಧಿಗೆ ಪ್ರಸಿದ್ಧಿಯಾದ ಸಂಗೀತ ಸಾಧಕ. ಸಂಗೀತವನ್ನು ಅವರು ಎಷ್ಟೊಂದು ಅಪ್ಪಿಕೊಂಡಿದ್ದರೆಂದರೆ 94ರ ಇಳಿ ವಯಸ್ಸಿನಲ್ಲೂ ಆಲಾಪ ತೆಗೆಯದೆ ಅವರ ದಿನಚರಿಯೇ ಮುಗಿಯುತ್ತಿರಲಿಲ್ಲ.
ವೃದ್ಧಾಪ್ಯದಲ್ಲೂ ದೇಶದಾದ್ಯಂತ ಸಂಚರಿಸಿ ಸಂಗೀತ ಕಛೇರಿ ನೀಡುತ್ತಿದ್ದರು. ಎರಡು ವಾರಗಳ ಹಿಂದೆ ಹೈದರಾಬಾದ್‌ನಲ್ಲಿ ಅವರು ಕಛೇರಿ ನೀಡಿದ್ದರು. ಸಾರ್ವಜನಿಕ ವೇದಿಕೆಯಲ್ಲಿ ಅವರ ಕೊನೆಯ ಕಾರ್ಯಕ್ರಮ ಅದಾಗಿತ್ತು. ತಮ್ಮ ಬದುಕಿನ ಅಂತಿಮ ಕ್ಷಣದವರೆಗೆ ಹೀಗೆ ಸಂಗೀತ ಸೇವೆಯಲ್ಲಿ ತೊಡಗಿದ ಬೇರೆ ಕಲಾವಿದ ಇಲ್ಲ.
ತಂದೆಯೇ ಗುರು: ಶ್ರೀಕಂಠನ್ ಅವರು 1920ರ ಜನವರಿ 14ರಂದು ಹಾಸನ ಜಿಲ್ಲೆ ರುದ್ರಪಟ್ಟಣದಲ್ಲಿ ಜನಿಸಿದ್ದರು. ಅವರ ತಂದೆ ಆರ್. ಕೃಷ್ಣಶಾಸ್ತ್ರಿ ಸಹ ದೊಡ್ಡ ಗಾಯಕರಾಗಿದ್ದರು.
ಹಲವು ನಾಟಕಗಳನ್ನು ಬರೆದಿದ್ದ ಕೃಷ್ಣಶಾಸ್ತ್ರಿಗಳು ಹರಿಕಥಾ ವಿದ್ವಾನರಾಗಿದ್ದರು. ಶ್ರೀಕಂಠನ್ ಅವರ ತಾಯಿ ಸಣ್ಣಮ್ಮ ಸಹ ಗಾಯಕಿಯಾಗಿದ್ದರು. ಆದರೆ, ಎರಡು ವರ್ಷದ ಮಗುವಾಗಿದ್ದಾಗ ಶ್ರೀಕಂಠನ್ ತಾಯಿಯನ್ನು ಕಳೆದುಕೊಂಡಿದ್ದರು.
ಪತ್ನಿಯನ್ನು ಕಳೆದುಕೊಂಡ ಬಳಿಕ ಕೃಷ್ಣಶಾಸ್ತ್ರಿಗಳು ವಾಸ್ತವ್ಯವನ್ನು ಮೈಸೂರಿಗೆ ಸ್ಥಳಾಂತರಿಸಿದ್ದರು. ಮೈಸೂರಿನ ಸದ್ವಿದ್ಯಾ ಪಾಠಶಾಲೆ ಮತ್ತು ಬನುಮಯ್ಯ ಪ್ರೌಢಶಾಲೆಯಲ್ಲಿ ಶ್ರೀಕಂಠನ್ ಓದಿದರು.
ನಂತರ ಮಹಾರಾಜ ಕಾಲೇಜಿನಿಂದ ಬಿ.ಎ ಪದವಿ ಪಡೆದರು. ಸಂಗೀತದ ಸಾಧನೆಯಲ್ಲಿ ತಂದೆಯೇ ಅವರಿಗೆ ಮೊದಲ ಗುರುವಾದರು. ಬಳಿಕ ತಮ್ಮ ಹಿರಿಯ ಸಹೋದರ ಆರ್.ಕೆ. ವೆಂಕಟರಾಮಶಾಸ್ತ್ರಿ ಅವರ ಗರಡಿಯಲ್ಲಿ ಪಳಗಿದರು. ವೀಣೆ ಸುಬ್ಬಣ್ಣ ಮತ್ತು ಚೌಡಯ್ಯ ಅವರ ಶಿಷ್ಯರಾಗುವ ಅಪೂರ್ವ ಅವಕಾಶವೂ ಅವರಿಗೆ ದೊರೆಯಿತು.
ತ್ಯಾಗರಾಜ ಶಿಷ್ಯ ಪರಂಪರೆ: ಸಂತ ತ್ಯಾಗರಾಜರ ಶಿಷ್ಯರಾಗಿದ್ದರು ವಾಲಾಜಪೇಟೆ ವೆಂಟಕರಮಣ ಭಾಗವತರು. ಅವರ ನೇರ ಶಿಷ್ಯರೇ ಮೈಸೂರು ಸದಾಶಿವರಾಯರು. ಅವರ ಬಳಿ ವೀಣೆ ಶೇಷಣ್ಣನವರು ಅಧ್ಯಯನ ನಡೆಸಿದ್ದರು.
ವೀಣೆ ಶೇಷಣ್ಣನವರ ಶಿಷ್ಯರಾಗಿದ್ದ ವೆಂಟಕರಾಮಶಾಸ್ತ್ರಿ ಅವರು ಶ್ರೀಕಂಠನ್ ಅವರಿಗೆ ಗುರುವಾಗಿದ್ದರು. ಹೀಗಾಗಿ ಶ್ರೀಕಂಠನ್ ಅವರದು ತ್ಯಾಗರಾಜರ ಶಿಷ್ಯ ಪರಂಪರೆಯಾಗಿದೆ.
‘ಮದ್ರಾಸ್ ಕಾರ್ಪೊರೇಶನ್ ರೇಡಿಯೋ’ದಲ್ಲಿ ವೆಂಟಕರಾಮಶಾಸ್ತ್ರಿ ಅವರಿಗೆ ಕೆಲಸ ಸಿಕ್ಕ ಪರಿಣಾಮವಾಗಿ ಅವರ ಜತೆಯಲ್ಲಿ ಮದ್ರಾಸಿಗೆ ತೆರಳಿದ ಶ್ರೀಕಂಠನ್ ಅವರಿಗೆ, ಅಲ್ಲಿನ ಮೇರು ಸಂಗೀತಗಾರರಾದ ಶಮ್ಮನ್‌ಗುಡಿ ಶ್ರೀನಿವಾಸ ಅಯ್ಯರ್, ಮುಸಿರಿ ಸುಬ್ರಹ್ಮಣ್ಯ ಅಯ್ಯರ್, ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರ ಸಹವಾಸ ಸಿಕ್ಕಿತು. ಆ ಕಲಾವಿದರು ಮೈಸೂರಿಗೆ ಬಂದಾಗ ಹೊಸ-ಹೊಸ ರಾಗಗಳನ್ನು ಪರಿಚಯಿಸಿ ಹೋಗುತ್ತಿದ್ದರು. ಯುವ ಪ್ರತಿಭೆಯಾಗಿದ್ದ ಶ್ರೀಕಂಠನ್ ಅವರು, ಆಸ್ಥೆಯಿಂದ ಆ ರಾಗಗಳನ್ನು ಅಭ್ಯಸಿಸಿ, ಬೆಳೆಯುತ್ತಾ ಹೋದರು. ಕರ್ನಾಟಕ ಸಂಗೀತದ ಮೇರು ಶಿಖರ ಏರಿದರು.
‘ಸಂಗೀತವೇ ನನ್ನ ಬದುಕಿನ ಉಸಿರು’ ಎಂದಿದ್ದ ಶ್ರೀಕಂಠನ್, 14ನೇ ವಯಸ್ಸಿನಲ್ಲಿ ಮೈಸೂರು ಅರಮನೆಯಲ್ಲಿ ಮೊದಲ ಕಛೇರಿ ನೀಡಿದ್ದರು. ಅವರ ಕಛೇರಿಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದವು.
‘ನೀನು ತುಂಬಾ ಚೆನ್ನಾಗಿ ಹಾಡುತ್ತೀ. ಕೆಲವು ವರ್ಷಗಳ ಸಾಧನೆ ಬಳಿಕ ಮತ್ತೆ ಅರಮನೆಗೆ ಬಾ’ ಎಂದು ಆಸ್ಥಾನ ವಿದ್ವಾನ್ ಮುತ್ತಯ್ಯ ಭಾಗವತರು, ಶ್ರೀಕಂಠನ್ ಅವರ ಬೆನ್ನು ತಟ್ಟಿದ್ದರಂತೆ.
ಮೈಸೂರು ಸಂಸ್ಥಾನ ರೇಡಿಯೋ ಕೇಂದ್ರದಲ್ಲಿ ಸಂಗೀತದ ಗುರುವಾಗಿ ಉದ್ಯೋಗ ಪ್ರಾರಂಭಿಸಿದರು. ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಅಸಂಖ್ಯ ಕಾರ್ಯಕ್ರಮ ನೀಡಿದರು. ಬೇಂದ್ರೆ, ಗುಂಡಪ್ಪ, ಪು.ತಿ.ನ. ಮೊದಲಾದ ಕವಿಗಳ ಹಾಡುಗಳಿಗೆ ರಾಗ ತಾಳದ ಉಡುಗೆ ತೊಡಿಸಿದರು. ಕರ್ನಾಟಕದ ಸಂಗೀತದ ಮಾಧುರ್ಯವನ್ನು ವಿದೇಶದಲ್ಲೂ ಮೆರೆಸಿದರು.
ಬೆಂಗಳೂರು ಆಕಾಶವಾಣಿಯಲ್ಲಿ ಬೆಳಗಿನ ವೇಳೆ ‘ಮೇಳಗಾನ’ವೆಂಬ ಕಾರ್ಯಕ್ರಮ ಮೂಡಿಬರುತ್ತಿತ್ತು. ಕೀರ್ತನೆಗಳನ್ನು ಕಲಾವಿದರ ಜತೆ ಶ್ರೀಕಂಠನ್ ಪ್ರಸ್ತುತಪಡಿಸುತ್ತಿದ್ದ ರೀತಿ ಹಾಗೂ ಅದರ ಮಾಧುರ್ಯ ಅವಿಸ್ಮರಣೀಯ.
ಸಂಗೀತದ ಮೇರು ಸಾಧನೆ ಮಾಡಿದ್ದರೂ ಇಳಿ ವಯಸ್ಸಿನಲ್ಲಿ ಸಹ ಅವರು ನಿತ್ಯ ಎರಡು ಗಂಟೆ ಅಭ್ಯಾಸ ಮಾಡುತ್ತಿದ್ದರು. ವರ್ಷಕ್ಕೆ ಸರಾಸರಿ 60 ಕಛೇರಿಗಳನ್ನು ನೀಡುತ್ತಿದ್ದರು. 80 ವರ್ಷಗಳ ತಮ್ಮ ಸಂಗೀತ ಯಾತ್ರೆಯಲ್ಲಿ 500ಕ್ಕೂ ಅಧಿಕ ಶಿಷ್ಯಂದಿರನ್ನು ತಯಾರು ಮಾಡಿದ್ದರು.
‘ನನ್ನದೀಗ 94 ವರ್ಷದ ಯುವಧ್ವನಿ’ ಎಂದು ಇತ್ತೀಚೆಗಷ್ಟೇ ಈ ಮೇರು ಸಾಧಕ ಮನಸಾರೆ ನಕ್ಕು ಹೇಳಿದ್ದರು. ‘80 ವರ್ಷಗಳ ಸಂಗೀತ ಸಾಧನೆ ಗುಟ್ಟೇನು’ ಎಂದು ಕೇಳಿದ್ದಾಗ ‘ಸಾತ್ವಿಕ ಆಹಾರ, ದುಶ್ಚಟಗಳಿಂದ ದೂರ, ಇಷ್ಟೇ ನನ್ನ ಯಶಸ್ಸಿನ ಗುಟ್ಟು’ ಎಂದಿದ್ದರು.
ತಮ್ಮ ವೃದ್ಧಾಪ್ಯದ ದಿನಗಳಲ್ಲೂ ಅವರು ನಿತ್ಯ ಸಂಗೀತ ಪಾಠ ಮಾಡುತ್ತಿದ್ದರು. ಇಸ್ರೊ ಅಧ್ಯಕ್ಷ ಕೆ.ರಾಧಾಕೃಷ್ಣನ್, ಆರ್.ಎಸ್. ರಮಾಕಾಂತ, ಎಂ.ಎಸ್. ಶೀಲಾ, ಟಿ.ಎಸ್. ಸತ್ಯವತಿ, ಆರ್.ಎ. ರಮಾಮಣಿ ಮತ್ತಿತರರು ಅವರ ಶಿಷ್ಯರಾಗಿದ್ದಾರೆ.
ಪ್ರಶಸ್ತಿ–ಪುರಸ್ಕಾರಗಳು: ಪದ್ಮಭೂಷಣ, ಕೇಂದ್ರ ಸಂಗೀತ ಕಲಾನಿಧಿ, ಕರ್ನಾಟಕ ರಾಜ್ಯ ಸಂಗೀತ ವಿದ್ವಾನ್, ಕನಕ–ಪುರಂದರ, ಮದ್ರಾಸ್ ಸಂಗೀತ ಅಕಾಡೆಮಿಯ ಸಂಗೀತ ಕಲಾನಿಧಿ, ಸಂಗೀತ ಪ್ರಭಾಕರ, ಸದ್ಗುರು ತ್ಯಾಗರಾಜ ಹಂಸಧ್ವನಿ, ಗಾನ ಭಾಸ್ಕರ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಬೆಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.
ಸಂತಾಪ: ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅವರು ಶ್ರೀಕಂಠನ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.