ನವದೆಹಲಿ: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ದಾಖಲಿಸಿದ್ದ 15 ಎಫ್‌ಐಆರ್‌ಗಳನ್ನು ರದ್ದುಪಡಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಪ್ರತಿಕ್ರಿಯೆ ಸಲ್ಲಿಸಲು ಬಿಜೆಪಿ ಸಂಸದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಪ್ರಮಾಣ ಪತ್ರ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಯಡಿಯೂರಪ್ಪ ಪರ ವಕೀಲ ಕೆ. ವಿ. ವಿಶ್ವನಾಥನ್ ಅವರು ಮಾಡಿದ ಮನವಿಯನ್ನು ನ್ಯಾಯಮೂರ್ತಿಗಳಾದ ಎ. ಕೆ. ಸಿಕ್ರಿ ಮತ್ತು ಡಿ. ವೈ. ಚಂದ್ರಚೂಡ ಅವರನ್ನು ಒಳಗೊಂಡ ನ್ಯಾಯಪೀಠವು ಒಪ್ಪಿಕೊಂಡಿತು.
ಜನವರಿ ಐದರಂದು ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಮತ್ತು ಆದೇಶವನ್ನು ರದ್ದುಪಡಿಸಬೇಕು ಎಂಬ ಕರ್ನಾಟಕ ಸರ್ಕಾರದ ಮೇಲ್ಮನವಿಗೆ ಸಂಬಂಧಿಸಿದಂತೆ ಜುಲೈ 12ರಂದು ಯಡಿಯೂರಪ್ಪ ಅವರಿಗೆ ‘ಸುಪ್ರೀಂ’ ನೋಟಿಸ್ ನೀಡಿತ್ತು.
ಬಿಳೇಕಹಳ್ಳಿ, ಹಲಗವಡೇರಹಳ್ಳಿ ಮತ್ತು ಜೆ.ಬಿ.ಕಾವಲ್‌ನಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಡಿನೋಟಿಫೈ ಮಾಡಿರುವುದು ನಿಯಮ ಬಾಹಿರ ಎಂಬ ಸಿಎಜಿ ವರದಿಯನ್ನು ಆಧರಿಸಿ ಎಫ್‌ಐಆರ್ ದಾಖಲಿಸಿರುವುದು ತಪ್ಪು ಎಂದು ಹೈಕೋರ್ಟ್ ಹೇಳಿದೆ.
ಸರ್ಕಾರದ ಬೊಕ್ಕಸಕ್ಕೆ ಭಾರಿ ಹಾನಿ ಆಗಿದೆ. ಸಿಎಜಿ ವರದಿಯೊಂದೇ ಎಫ್‌ಐಆರ್‌ಗೆ ಆಧಾರವಲ್ಲ. ಇತರ ದಾಖಲೆಗಳೂ ಇವೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಜೋಸೆಫ್ ಅರಿಸ್ಟಾಟಲ್ ವಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.