ಬೆಂಗಳೂರು (ಪಿಟಿಐ): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಸದಸ್ಯರು ನಡೆಸಿದ್ದಾರೆನ್ನಲಾದ ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತಾವು ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ದೂರು ಸಲ್ಲಿಸುವುದಾಗಿ ಜೆಡಿ -ಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಸೋಮವಾರ ಇಲ್ಲಿ ಹೇಳಿದರು.
~ನಾನು ದಾಖಲೆ ಸಹಿತವಾಗಿ ವಾರದೊಳಗೆ ದೂರು ಸಲ್ಲಿಸಲಿದ್ದೇನೆ~ ಎಂದು ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ನುಡಿದರು. ಯಡಿಯೂರಪ್ಪ ಅವರು ತಮ್ಮ ವಿರುದ್ಧ ಆರೋಪ ಮಾಡಿದ ಒಂದು ದಿನದ ಬಳಿಕ ಕುಮಾರ ಸ್ವಾಮಿ ಈ ಹೇಳಿಕೆ ನೀಡಿದ್ದಾರೆ.
ಕುಮಾರ ಸ್ವಾಮಿ ಅವರ ಸಹೋದರ ಎಚ್.ಡಿ. ಬಾಲಕೃಷ್ಣ ಮಾಲೀಕತ್ವದ ಟ್ರಸ್ಟ್, ಗಣಿಗಾರಿಕೆ ಕಂಪೆನಿಗಳಿಂದ 250 ಕೋಟಿ ರೂಪಾಯಿ ದೇಣಿಗೆ ಪಡೆದಿದೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 164 ನಿವೇಶನಗಳನ್ನು ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಬಂಧುಗಳಿಗೆ ಮಂಜೂರು ಮಾಡಲಾಗಿದೆ ಎಂಬುದಾಗಿ ಯಡಿಯೂರಪ್ಪ ಅವರು ಮಾಡಿದ ಆರೋಪಕ್ಕೆ ರೊಚ್ಚಿಗೆದ್ದ ಜೆಡಿ-ಎಸ್ ಧುರೀಣ, ~ಮುಖ್ಯಮಂತ್ರಿಯವರು ಈ ಆರೋಪ ಸಂಬಂಧಿ ದಾಖಲೆ ಹಾಜರು ಪಡಿಸಲಿ~ ಎಂದು ಸವಾಲೆಸೆದರು.
~ನಾನು ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ಭ್ರಷ್ಟಾಚಾರವನ್ನು ದಾಖಲೆ ಸಹಿತವಾಗಿ ಬಹಿರಂಗಪಡಿಸುತ್ತಿದ್ದೇನೆ. ಯಡಿಯೂರಪ್ಪ ಅವರೂ ಬುಡರಹಿತ ಆರೋಪ ಮಾಡುವುದನ್ನು ಬಿಟ್ಟು ದಾಖಲೆಗಳನ್ನು ಬಹಿರಂಗ ಪಡಿಸಲಿ~ ಎಂದು ಕುಮಾರಸ್ವಾಮಿ ಹೇಳಿದರು.
ಯಡಿಯೂರಪ್ಪ ವಿರುದ್ಧ ತಮ್ಮ ದಾಳಿಯನ್ನು ಮುಂದುವರಿಸಿದ ಮಾಜಿ ಮುಖ್ಯಮಂತ್ರಿ 2008ರ ಅಕ್ಟೋಬರ್ ನಿಂದ 2010ರ ಅಕ್ಟೋಬರ್ ವರೆಗೆ ಯಡಿಯೂರಪ್ಪ ಅವರು 106 ಪ್ರಕರಣಗಳಿಗೆ ಸಂಬಂಧಿಸಿದ 221.34 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದಾರೆ ಹಾಗೂ 500 ಕೋಟಿ ರೂಪಾಯಿಗಳಷ್ಟು ಲಾಭ ಮಾಡಿಕೊಂಡಿದ್ದಾರೆ ಎಂದು ಅವರು ನುಡಿದರು. ಈ ಡಿನೋಟಿಫೈ ಮಾಡಿದ ಆಸ್ತಿಯ ಮೌಲ್ಯ 3768.90 ಕೋಟಿ ರೂಪಾಯಿಗಳು ಎಂದೂ ಅವರು ವಿವರಿಸಿದರು. ಈ ಡಿನೋಟಿಫಿಕೇಷನ್ ನಿಂದ ಕೆಲವು ಕಾಂಗ್ರೆಸ್ ನಾಯಕರಿಗೂ ಲಾಭವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಅವರು ಕುಮಾರ ಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ ಕುಮಾರ ಸ್ವಾಮಿ ಅವರು 193 ಎಕರೆ ಜಮೀನನ್ನು ಡಿನೋಟಿಫೈ ಮಾಡಿ ಬಿಡಿಎಗೆ 2000 ಕೋಟಿ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ಮಾರ್ಚ್ 19ರಂದು ಆಪಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.