ADVERTISEMENT

ಯಡಿಯೂರಪ್ಪ ಪಾದಯಾತ್ರೆ ಆರಂಭ

ಕಾವೇರಿ ನ್ಯಾಯ ಮಂಡಳಿ ಅಂತಿಮ ತೀರ್ಪಿನ ಅಧಿಸೂಚನೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2013, 19:59 IST
Last Updated 7 ಫೆಬ್ರುವರಿ 2013, 19:59 IST
ಯಡಿಯೂರಪ್ಪ ಪಾದಯಾತ್ರೆ ಆರಂಭ
ಯಡಿಯೂರಪ್ಪ ಪಾದಯಾತ್ರೆ ಆರಂಭ   

ಮೈಸೂರು: ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪಿನ ಅಧಿಸೂಚನೆ ವಿರೋಧಿಸಿ ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಗರದಿಂದ ಬೆಂಗಳೂರಿನವರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಗುರುವಾರ ಆರಂಭಗೊಂಡಿತು.
ಕಾವೇರಿ ಕರ್ನಾಟಕ ಹಿತರಕ್ಷಣಾ ಹೋರಾಟ ಸಮಿತಿಯ ಆಶ್ರಯದಲ್ಲಿ ಫೆ.7 ರಿಂದ 13 ರ ವರೆಗೆ ಪಾದಯಾತ್ರೆ ನಡೆಯಲಿದೆ.

ನಗರದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬೆಳಿಗ್ಗೆ 11 ಗಂಟೆಗೆ ಯಡಿಯೂರಪ್ಪ ಆರಂಭಿಸಿದ ಪಾದಯಾತ್ರೆಯಲ್ಲಿ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ, ಬಿ.ಜೆ.ಪುಟ್ಟಸ್ವಾಮಿ, ಮಾಜಿ ಶಾಸಕ ಎಚ್. ಎಂ.ವಿಶ್ವನಾಥ್ ಸೇರಿದಂತೆ ಕೆಜೆಪಿ ಹಲವು ಮುಖಂಡರು, ಕಾರ್ಯಕರ್ತರು, ರೈತರು ಜೊತೆಯಾದರು.

ಎಪ್ಪತ್ತರ ಹರೆಯದ ಯಡಿಯೂರಪ್ಪ ಹೊಸ ಶೂ ಧರಿಸಿ, ತಲೆಗೆ ಟೋಪಿ ಹಾಕಿಕೊಂಡು ಲವಲವಿಕೆಯಿಂದಲೇ ಹೆಜ್ಜೆ ಹಾಕಿದರು. ತಮ್ಮ ನಾಯಕನ ಹಿಂದೆ ಬೆಂಬಲಿಗರೂ ಸಹ ಹೆಜ್ಜೆ ಹಾಕಿದರು.

ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದವರು ಯಡಿಯೂರಪ್ಪನವರಿಗೆ ಜೈಕಾರ ಹಾಕಿದರು. `ಇಲ್ಲದ ನೀರು ಕೊಡುವುದಿಲ್ಲ', `ಕೇಂದ್ರದ ಪಕ್ಷಪಾತ, ಕನ್ನಡಿಗರಿಗೆ ಮರ್ಮಾಘಾತ', `ನಮ್ಮ ಕಾವೇರಿಯನ್ನು ಉಳಿಸಿಕೊಳ್ಳೋಣ' ಎಂಬಿತ್ಯಾದಿ  ಘೋಷಣೆಗಳುಳ್ಳ ಫಲಕಗಳನ್ನು ಪ್ರದರ್ಶಿಸಲಾಯಿತು.

ಚಾಮುಂಡೇಶ್ವರಿಗೆ ಪೂಜೆ: ಪಾದಯಾತ್ರೆ ಆರಂಭಕ್ಕೂ ಮುನ್ನ ಯಡಿಯೂರಪ್ಪ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ನಂತರ ನಗರದ ಅರಮನೆ ಬಳಿ ಇರುವ ವಿನಾಯಕ ದೇವಸ್ಥಾನ, ಕೋಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಬಳಿಕ ಜನತೆ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, `ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪಿನ ಅಧಿಸೂಚನೆಯನ್ನು ಫೆ. 20 ರೊಳಗೆ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ರಾಜ್ಯದ ಪಾಲಿಗೆ ಮರಣ ಶಾಸನವಾಗಲಿದೆ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದ್ದರಿಂದ ನಾನು ನಡೆಸುತ್ತಿರುವ ಪಕ್ಷಾತೀತ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು' ಎಂದು ಮನವಿ ಮಾಡಿದರು.

ಪಾದಯಾತ್ರೆ ಸಾಂಕೇತಿಕವಲ್ಲ: `ನಾಡು, ನುಡಿ, ಜಲ, ನೆಲ ರಕ್ಷಣೆಗಾಗಿ ನಡೆಸುತ್ತಿರುವ ಪಾದಯಾತ್ರೆ ಕೇವಲ ಸಾಂಕೇತಿಕವಲ್ಲ. ಇದನ್ನು ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ. ಈ ಹೋರಾಟ ಪ್ರಧಾನಮಂತ್ರಿಯ ಗಮನ ಸೆಳೆಯುವ ಸಲುವಾಗಿ ಹಮ್ಮಿಕೊಂಡಿದ್ದೇನೆ' ಎಂದು ಸ್ಪಷ್ಟಪಡಿಸಿದರು.

ಕೆಜಿಪಿ ಬಾವುಟ ಇರಲಿಲ್ಲ ಅಷ್ಟೆ!
ನಗರದಿಂದ ಬೆಂಗಳೂರಿನವರಿಗೆ ಕರ್ನಾಟಕ ಜನತಾ ಪಕ್ಷದ  ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಕೆಜೆಪಿ ಬಾವುಟ ಕಾಣಿಸಲಿಲ್ಲ. ಆದ್ದರಿಂದ ಯಡಿಯೂರಪ್ಪ ತಮ್ಮದು ಪಕ್ಷಾತೀತ ಪಾದಯಾತ್ರೆ ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಕೆಜೆಪಿ ಬಾವುಟ ಇರಲಿಲ್ಲ. ಆದರೆ, ಪಾದಯಾತ್ರೆ ಆರಂಭಕ್ಕೂ ಮುನ್ನ ಹಾಗೂ ಪಾದಯಾತ್ರೆಯಲ್ಲಿ ಕೆಜೆಪಿಯ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರೇ ಇದ್ದದ್ದು ಎದ್ದುಕಾಣಿಸುತ್ತಿತ್ತು.

ಚಿತ್ರನಟಿ ಶ್ರುತಿ ಕೆಜೆಪಿ ಸೇರ್ಪಡೆ
ಚಿತ್ರನಟಿ ಶ್ರುತಿ  ಗುರುವಾರ ಬಿಜೆಪಿ ತೊರೆದು  `ಕೆಜೆಪಿ' ಸೇರಿದರು. ನಗರದ ರೆಸಾರ್ಟ್‌ವೊಂದರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಶ್ರುತಿಯವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ನಂತರ ಶ್ರುತಿ ಅವರನ್ನು ಕೆಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT