ADVERTISEMENT

ಯಡಿಯೂರಪ್ಪ ಬಂಧನ: ಯಾರು ಏನೆಂದರು?

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST
ಯಡಿಯೂರಪ್ಪ ಬಂಧನ: ಯಾರು ಏನೆಂದರು?
ಯಡಿಯೂರಪ್ಪ ಬಂಧನ: ಯಾರು ಏನೆಂದರು?   

`ಅಗ್ನಿಪರೀಕ್ಷೆ ಗೆದ್ದು ಬರುತ್ತಾರೆ~
`ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈಗ ಎದುರಾಗಿರುವ ಅಗ್ನಿಪರೀಕ್ಷೆಯನ್ನು ಗೆದ್ದು ಬರುತ್ತಾರೆ ಎಂಬ ವಿಶ್ವಾಸ ಇದೆ. ಅವರು ಈಗಾಗಲೇ ನ್ಯಾಯಾಲಯದ ಆದೇಶಕ್ಕೆ ತಲೆಬಾಗಿದ್ದಾರೆ. ಪ್ರಕರಣ ನ್ಯಾಯಾಲಯದ ಮುಂದೆ ಇರುವ ಕಾರಣ ಆ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ. ಆದರೆ ಇಡೀ ಪ್ರಕರಣದ ಹಿಂದೆ ನಡೆದಿರುವ ಸಂಗತಿಗಳು ಲೋಕಕ್ಕೇ ತಿಳಿದಿವೆ.~
 - ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ

`ಕಾನೂನು ಪ್ರಕಾರವೇ ನಡೆಯಲಿದೆ~
 ಕಾನೂನು ಪ್ರಕಾರವೇ ಎಲ್ಲ ಪ್ರಕ್ರಿಯೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ನ್ಯಾಯಾಲಯ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ. ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಜನಚೇತನ ಯಾತ್ರೆಗೆ ಯಡಿಯೂರಪ್ಪ ಪ್ರಕರಣವನ್ನು ಹೋಲಿಸುವುದು ಸರಿಯಲ್ಲ   
-ವಿ.ಧನಂಜಯ ಕುಮಾರ್,  ನವದೆಹಲಿಯಲ್ಲಿನ ಕರ್ನಾಟಕದ ವಿಶೇಷ ಪ್ರತಿನಿಧಿ

`ಸಂತೋಷಪಡುವ ವಿಷಯವಲ್ಲ~
ಅತ್ಯುತ್ತಮ ಆಡಳಿತಕ್ಕೆ ಹೆಸರಾಗಿದ್ದ ರಾಜ್ಯದಲ್ಲಿ ಈ ರೀತಿ ಆಗಬಾರದಿತ್ತು. ವೈಯಕ್ತಿಕವಾಗಿ ಈ ಘಟನೆ ನನಗೆ ಸಂತೋಷವನ್ನುಂಟು ಮಾಡಿಲ್ಲ. ಈ ಘಟನೆಯಿಂದ ನೋವಾಗಿದೆ. ರಾಜಕೀಯವಾಗಿ ಯಡಿಯೂರಪ್ಪ ವಿರುದ್ಧ ಮಾಡಿರುವ ಹೋರಾಟಗಳು ಏನೇ ಇರಲಿ, ಆದರೆ ಇದು ಸಂತೋಷಪಡುವ ವಿಷಯವಲ್ಲ. ಆದರೆ ಕಾನೂನಿನ ಮುಂದೆ ಎಲ್ಲರೂ ತಲೆಬಾಗಲೇಬೇಕು. ರಾಜ್ಯದ ಈಗಿನ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ. ಅವರು ಇದರ ಲಾಭ ಪಡೆಯಲು ಹೊರಟ್ಟಿದ್ದಾರೆ. ಇದರಿಂದ ಲಾಭವಾದರೆ ಅದು ತಾತ್ಕಾಲಿಕ ಅಷ್ಟೇ.  
 - ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರು

`ವೈಯಕ್ತಿಕ ದ್ವೇಷವಿಲ್ಲ~
`ಜೆಡಿಎಸ್‌ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುರಿತು ವ್ಯಕ್ತಿಗತ ದ್ವೇಷ ಇಲ್ಲ. ಆ ಕಾರಣ ಅವರ ಬಂಧನಕ್ಕೆ ಪಕ್ಷ ಸಂಭ್ರಮಿಸುವುದಿಲ್ಲ. ಆದರೆ ಆಡಳಿತಾರೂಢರು ಎಷ್ಟು ಎಚ್ಚರಿಕೆಯಿಂದಿರಬೇಕು, ಸ್ವಾರ್ಥಕ್ಕೆ ಬಲಿಯಾದರೆ ಎಂಥ ಅವಾಂತರಗಳು ಸೃಷ್ಟಿಯಾಗುತ್ತವೆ ಎಂಬುದಕ್ಕೆ ಇಂದಿನ ಬೆಳವಣಿಗೆಯೇ ಸಾಕ್ಷಿ.  ಬಿಜೆಪಿ ಮಂತ್ರಿಮಂಡಲದ ಬಹುತೇಕ ಸದಸ್ಯರು ಜೈಲಿನ ಹಾದಿ ಹಿಡಿದಿರುವುದು ಜನರ ಭರವಸೆಯನ್ನು ಹುಸಿಗೊಳಿಸಿದಂತಾಗಿದೆ.~
- ವೈ.ಎಸ್.ವಿ. ದತ್ತ, ಜೆಡಿಎಸ್ ವಕ್ತಾರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.