ಬೆಂಗಳೂರು: `ರಾಜ್ಯ ವಿಧಾನಸಭೆ ಮತ್ತು ಲೋಕಸಭೆಗೆ ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾಗಬಹುದು~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಶನಿವಾರ ಇಲ್ಲಿ ಇಂಗಿತ ವ್ಯಕ್ತಪಡಿಸಿದರು.
ಪಕ್ಷದ ಮಹಿಳಾ ಮೋರ್ಚಾ ಇದೇ 31ರಂದು ಆಯೋಜಿಸಲಿರುವ `ನಾರಿ ಶಕ್ತಿ ಸಂಗಮ~ ಸಮಾವೇಶಕ್ಕೆ ಪೂರ್ವಭಾವಿಯಾಗಿ ನಗರದ ಅರಮನೆ ಮೈದಾನದಲ್ಲಿ ನಡೆದ ಭೂಮಿ ಪೂಜೆ ಕಾರ್ಯಕ್ರಮ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಸರಣಿ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
`ಡಿ.ವಿ. ಸದಾನಂದಗೌಡರೇ ಈ ಸಲದ ಬಜೆಟ್ ಮಂಡಿಸಲಿದ್ದಾರೆ. ಇದರಲ್ಲಿ ಯಾವ ಗೊಂದಲವೂ ಇಲ್ಲ. ಉಳಿದ ಅವಧಿಗೂ ಅವರೇ ಮುಖ್ಯಮಂತ್ರಿ~ ಎಂದೂ ಈಶ್ವರಪ್ಪ ತಿಳಿಸಿದರು.
ಅವಧಿಪೂರ್ವ ಚುನಾವಣೆ ಸಾಧ್ಯತೆಯ ಈ ಹೇಳಿಕೆ ಪಕ್ಷದ ಅಧ್ಯಕ್ಷರಿಂದಲೇ ಬಂದಿರುವುದು ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ನಾಯಕತ್ವದ ವಿಚಾರದಲ್ಲಿ ನೀಡುತ್ತಿರುವ ಗೊಂದಲದ ಹೇಳಿಕೆಗಳಿಗೆ ಕಡಿವಾಣ ಹಾಕಲು ಈಶ್ವರಪ್ಪ ಈ `ಬಾಂಬ್~ ಸಿಡಿಸಿದ್ದಾರೆ ಎಂದು ಪಕ್ಷದ ವಲಯದಲ್ಲಿ ಅರ್ಥೈಸಲಾಗಿದೆ.
ಭಾನುವಾರ ಸಭೆ: ಈ ನಡುವೆ ಯಡಿಯೂರಪ್ಪ ಬೆಂಬಲಿಗರು ಒತ್ತಡ ತಂತ್ರ ಮುಂದುವರಿಸಿದ್ದಾರೆ. ತಮ್ಮ ಬೇಡಿಕೆಗೆ ಹೈಕಮಾಂಡ್ ಬಗ್ಗದಿದ್ದರೆ ಸಾಮೂಹಿಕ ರಾಜೀನಾಮೆ `ಅಸ್ತ್ರ~ ಬಳಸಲು ಚಿಂತನೆ ನಡೆಸಿದ್ದಾರೆ.
ಭಾನುವಾರ ಯಡಿಯೂರಪ್ಪ ಅವರ ನಿವಾಸದಲ್ಲಿ ಜರುಗಲಿರುವ ಆಪ್ತ ಸಚಿವರು, ಶಾಸಕರ ಸಭೆಯಲ್ಲಿ ಈ ಕುರಿತು ಚರ್ಚೆ ಆಗುವ ಸಂಭವ ಇದೆ.
ಈ ಸಭೆಗೆ ಬರುವಂತೆ ಅವರ ಆಪ್ತ ಸಿದ್ದಲಿಂಗಸ್ವಾಮಿ ಅವರು ಶಾಸಕರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ 2.30ಕ್ಕೆ ರೇಸ್‌ಕೋರ್ಸ್ ರಸ್ತೆಯ ನಿವಾಸಕ್ಕೆ ಬರುವಂತೆ ತಿಳಿಸಿದ್ದಾರೆ.
ಮಂಗಳವಾರದಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಆ ವೇಳೆಯೊಳಗೆ ರಾಜ್ಯ ರಾಜಕೀಯದಲ್ಲಿ ಕೆಲ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ. ಅಧಿವೇಶನ ಆರಂಭಕ್ಕೂ ಮುನ್ನವೇ ತಮ್ಮನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಹೈಕಮಾಂಡ್ ಇದಕ್ಕೆ ಒಪ್ಪದಿದ್ದರೆ ಅವರು ಬಲ ಪ್ರದರ್ಶನಕ್ಕೂ ಮುಂದಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮುಗಿದ ಕೂಡಲೇ ಮುಂದಿನ ನಡೆ ಕುರಿತು ದೃಢ ನಿರ್ಧಾರ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ತಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರಬೇಕು ಎಂದು ಕೆಲವು ಬೆಂಬಲಿಗರಿಗೆ ಸೂಚಿಸಿದ್ದಾರೆ.
ಕೆಲವರಿಂದ `ವಚನ~ ಕೂಡ ಪಡೆದಿದ್ದಾರೆ. ಇತ್ತೀಚೆಗೆ ಹುಬ್ಬಳ್ಳಿ ಸಮಾವೇಶಕ್ಕೆ ತೆರಳುವಾಗ ರೈಲಿನಲ್ಲಿ ಈ ಎಲ್ಲ ಬೆಳವಣಿಗೆಗಳು ನಡೆದಿವೆ. ಭರವಸೆ ಕೊಟ್ಟವರಲ್ಲಿ ಶಾಸಕರಾದ ನಂದೀಶ್ ರೆಡ್ಡಿ, ಎಸ್.ಆರ್.ವಿಶ್ವನಾಥ್, ಅರವಿಂದ ಲಿಂಬಾವಳಿ ಮತ್ತಿತರರು ಸೇರಿದ್ದಾರೆ ಎಂದು ಗೊತ್ತಾಗಿದೆ. ಶನಿವಾರ ರಾತ್ರಿ ಸಚಿವ ಜಗದೀಶ ಶೆಟ್ಟರ್ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು.
ಸಿ.ಎಂ ದೆಹಲಿಗೆ: ಯಡಿಯೂರಪ್ಪ ಅವರು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬೇಸತ್ತಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಈ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ನೀಡಲು ಈಶ್ವರಪ್ಪ ಅವರ ಜೊತೆಗೂಡಿ ಸೋಮವಾರ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನಕ್ಕೂ ಮೊದಲೇ ಗೊಂದಲ ನಿವಾರಿಸಬೇಕು. ಸಾಧ್ಯವಾದರೆ ಈ ಕುರಿತು ವರಿಷ್ಠರಿಂದಲೇ ಹೇಳಿಕೆ ಬರುವಂತೆ ಮಾಡಿ, ಬಜೆಟ್ ಅಧಿವೇಶನಕ್ಕೆ ಹಾದಿ ಸುಗಮ ಮಾಡಿಕೊಳ್ಳಬೇಕು ಎಂದು ಬಯಸಿದ್ದಾರೆ.
`ಬಿಜೆಪಿಯ ಮುಖ್ಯಮಂತ್ರಿ ಈ ಬಾರಿ ಬಜೆಟ್ ಮಂಡಿಸಲಿದ್ದಾರೆ~ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ವಿ. ಧನಂಜಯ ಕುಮಾರ್ ಇತ್ತೀಚೆಗೆ ನೀಡಿರುವ ಹೇಳಿಕೆ ಕುರಿತು ಈಶ್ವರಪ್ಪ ಕೆಂಡಾಮಂಡಲವಾಗಿದ್ದಾರೆ. `ಧನಂಜಯ ಕುಮಾರ್ ಅಂಥ ಹೇಳಿಕೆ ಏಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ, ಅವರು ಪಕ್ಷದ ವಕ್ತಾರರೂ ಅಲ್ಲ. ಅವರು ನೀಡಿರುವ ಹೇಳಿಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರಲಾಗುವುದು~ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.