ADVERTISEMENT

ಯುವಜನರ ಮನಸ್ಸು ದೇಶದತ್ತ ಹರಿಯಲಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಮಂಗಳೂರು: ಅವರು ಸೇಬು ಬೆಳೆಯುವ ಪ್ರದೇಶದಿಂದ ಬಂದವರು. ಸೇಬಿನಂತಹ ಚೆಲುವಿನ ಮುಖವೂ ಅವರದಾಗಿತ್ತು. ಮಾತನಾಡಿಸಿದಾಗ ದೇಶಪ್ರೇಮ ಹೊನಲಿನಂತೆ ಪಸರಿಸಿತು. ಯುವಜನತೆ ದೇಶದ ಭವಿಷ್ಯ, ಅವರು ದೇಶಕ್ಕಾಗಿಯೇ ನಿರಂತರ ಚಿಂತನೆ ನಡೆಸಬೇಕು ಎಂಬ ಕಳಕಳಿ ಅವರ ಮನದಲ್ಲಿ ನೆಲೆಸಿತ್ತು.

ಚೆಲುವನ್ನೂ ಹೊತ್ತು, ದೇಶದ ಬಗ್ಗೆ ಇನ್ನಷ್ಟು ಚೆಲುವಿನ ಮಾತನಾಡಿದವರು ಹಿಮಾಚಲ ಪ್ರದೇಶದ ಅಂತಿಮ ಪದವಿ ವಿದ್ಯಾರ್ಥಿನಿ ವಿಪುಲ್.

ಇಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ದೇಶದ ವಿವಿಧೆಡೆಯಿಂದ ಆಗಮಿಸಿರುವ ಯುವಜನರನ್ನು ಮಾತನಾಡಿಸಲು `ಪ್ರಜಾವಾಣಿ~ ಶುಕ್ರವಾರ ಹೊರಟಾಗ ಮೊದಲು ಎದುರಾಗಿದ್ದು ವಿಪುಲ್. ಅವರು ದೇಶದ ಬಗ್ಗೆ ತಮ್ಮ ತುಡಿತ ವ್ಯಕ್ತಪಡಿಸಿದರು.

ADVERTISEMENT

`ನಾವು ಮೊದಲು ಉತ್ತಮರಾದರೆ ಸಮಾಜವೂ ಬದಲಾಗುತ್ತದೆ. ಮಾನವೀಯತೆ ಎಂಬುದು ಇತರರಿಗಿಂತಲೂ ಯುವಜನತೆಯಲ್ಲಿ ಹೆಚ್ಚಿರಬೇಕು. ನಮ್ಮ ಒಳ್ಳೆಯತನ ಕೆಲವೊಂದು ಬಾರಿ ನಮಗೆ ತೊಂದರೆ ಕೊಡಬಹುದೇ ಹೊರತು ಸದಾ ಕಾಲ ಅಲ್ಲ. ನಾವು ಒಳ್ಳೆಯವರಾದಾಗ ನಮ್ಮ ಸುತ್ತಲಿನ ಪರಿಸರವೂ ಒಳ್ಳೆಯದಾಗಿಬಿಡುತ್ತದೆ~ ಎಂದು ಅವರು ಪ್ರತಿಪಾದಿಸಿದರು.

ಚಂಡೀಗಢದ ಗುರ‌್ವಿಂದರ್ ಸಿಂಗ್ ಸಹ `ಯುವಶಕ್ತಿ ದೇಶದ ಬಗ್ಗೆ ಕಾಳಜಿ ವಹಿಸಬೇಕು~ ಎಂದು ಹೇಳಿದರು. `ನಾನೊಬ್ಬ ಕಲಾವಿದ, ಕಲೆಯ ಪ್ರಸಾರವಷ್ಟೇ ನನ್ನ ಜೀವನ. ದೇಶದಾದ್ಯಂತ ವಿಭಿನ್ನ ಕಲೆ, ಸಂಸ್ಕೃತಿ ಇದೆ, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ನಿರಂ

ತರ ನಡೆಯುತ್ತಿರಬೇಕು. ಇದರಿಂದ ನಮ್ಮ ದೇಶದ ಬಹು ಸಂಸ್ಕೃತಿಯ ಹಂದರ ಭದ್ರವಾಗಿ ಇರಲು ಸಾಧ್ಯ~ ಎಂದರು ಗುರವಿಂದರ್.

ಬಿಹಾರದ ಎಂ.ಡಿ.ಮುಜಿಬುರ್ ರೆಹಮಾನ್ ನೆಹರೂ ಯುವ ಕೇಂದ್ರದ ವತಿಯಿಂದ ಯುವಜನೋತ್ಸವಕ್ಕೆ ಸ್ವಯಂಸೇವಕರಾಗಿ ಬಂದವರು.

`ದೇಶ ಇಂದು ಯುವಜನತೆಯತ್ತ ಬಹಳ ದೊಡ್ಡ ಭರವಸೆ ಇಟ್ಟಿದೆ. ಅದನ್ನು ಖಂಡಿತ ಯುವಕರು ಹುಸಿಗೊಳಿಸಬಾರದು. ನಮ್ಮ ಭಾಷೆ, ಸಂಸ್ಕೃತಿ ಬೇರೆ ಬೇರೆ ಇದ್ದೀತು. ಆದರೆ ರಾಷ್ಟ್ರದ ಒಟ್ಟಾರೆ ಹಿತಾಸಕ್ತಿ ಗಮನಿಸಿದಾಗ ನಮ್ಮ ಸಂಕುಚಿತ ಭಾವ ತೊರೆದು ಒಗ್ಗಟ್ಟು ಪ್ರದರ್ಶಿಸಬೇಕು. ಜಾತಿ, ಧರ್ಮದ ಹೆಸರಲ್ಲಿ ನಮ್ಮಳಗೆ ದ್ವೇಷ ಸಾಧನೆ ಮಾಡುವುದು ಅಪಾಯಕಾರಿ~ ಎನ್ನುವುದು ಮುಜಿಬುರ್ ಅಭಿಮತ.

ಮಿಜೋರಾಂನ ಐರಿನ್ ಲಾಲ್‌ನಿ ಇದೇ ಪ್ರಥಮ ಬಾರಿಗೆ ದಕ್ಷಿಣ ಭಾರತವನ್ನು ಕಂಡವರು. `ದೇಶ ಎಷ್ಟು ವಿಶಾಲವಾಗಿದೆ, ಈ ದೇಶದಲ್ಲಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ನನ್ನದು ದೇಶದ ಈಶಾನ್ಯ ಭಾಗದ ಶಾಂತಿ ಬಯಸುವ ರಾಜ್ಯ. ನಮ್ಮ ರಾಜ್ಯದಲ್ಲಿ ಇರುವ ಶಾಂತಿ ವಾತಾವರಣ ಇಡೀ ದೇಶದಲ್ಲಿ ಮೂಡಬೇಕು ಎಂಬುದೇ ನನ್ನ ಬಯಕೆ~ ಎಂದು ಆಶಿಸಿದರು.

ಯುವಜನೋತ್ಸವ ನೋಡಲು ಬಂದ ಮಂಗಳೂರು ಸೇಂಟ್ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿನಿ ದೇಶದ ವಿವಿಧ ಭಾಗಗಳಿಂದ ಬಂದಂತಹ ಯುವ ಕಲಾವಿದರನ್ನು ಕಂಡು ಖುಷಿಗೊಂಡಿದ್ದರು.

ಕಲೆಗೆ ಎಂತಹ ಬೆಲೆ ಇದೆ ಎಂಬುದಕ್ಕೆ ಇದೇ ಸಾಕ್ಷಿ, ಕೆಲವರಿಗೆ ಕಲೆ ಜನ್ಮಜಾತವಾಗಿ ಸಿದ್ಧಿಸಿರುತ್ತದೆ, ಅಂತಹವರನ್ನು ಗುರುತಿಸುವ ಕೆಲಸ ನಡೆಯಬೇಕು, ಅಂತಹವರು ಇಂತಹ ಅವಕಾಶಗಳನ್ನೂ ಬಳಸಿಕೊಳ್ಳಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.