ADVERTISEMENT

ಯುವತಿಯರ ಜತೆಗಿದ್ದ ಯುವಕರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 20:21 IST
Last Updated 4 ಏಪ್ರಿಲ್ 2018, 20:21 IST

ನಾಪೋಕ್ಲು (ಕೊಡಗು ಜಿಲ್ಲೆ): ಪೊದೆಯಲ್ಲಿ ಯುವತಿಯರ ಜತೆ ಇದ್ದ ಇಬ್ಬರು ಯುವಕರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಭಾಗಮಂಡಲ ಸಮೀಪದ ಚೆಟ್ಟಿಮಾನಿ ವ್ಯಾಪ್ತಿಯ ಸೇತುವೆ ಬಳಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಗುಂಪೊಂದು ಯುವಕರನ್ನು ತರಾಟೆಗೆ ತೆಗೆದುಕೊಂಡಿದೆ. ‘ಇಲ್ಲಿ ನಿಮಗೇನು ಕೆಲಸ’ ಎಂದು ಪ್ರಶ್ನಿಸಿ, ಇಬ್ಬರು ಯುವಕರ ಶರ್ಟ್‌ ಬಿಚ್ಚಿಸಿ ಥಳಿಸಿದ್ದಾರೆ. ಪ್ಯಾಂಟ್‌ ಸಹ ಕಳಚಲು ಮುಂದಾಗಿದ್ದಾರೆ. ಅವರ ಬಳಿಯಿದ್ದ ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ ಕಸಿದುಕೊಂಡು ‘ಪೊಲೀಸರಿಗೆ ದೂರು ನೀಡುತ್ತೇವೆ’ ಎಂದು ಬೆದರಿಕೆ ಹಾಕಿರುವುದು ವಿಡಿಯೊದಲ್ಲಿದೆ. ‘ತಪ್ಪಿಸಿಕೊಂಡರೆ ಸಾಯಿಸುತ್ತೇವೆ’ ಎಂದೂ ಕೆಲವರು ಬೆದರಿಕೆ ಒಡ್ಡಿದ್ದಾರೆ.

ಜೊತೆಗಿದ್ದ ಯುವತಿಯರು ಹಲ್ಲೆ ನಡೆಸುವುದನ್ನು ತಡೆದು, ಕೈಮುಗಿದು ಬೇಡಿಕೊಂಡಿದ್ದಾರೆ. ಆದರೂ, ಹಲ್ಲೆ ನಡೆಸುವುದನ್ನು ನಿಲ್ಲಿಸಿಲ್ಲ. ಅಸಭ್ಯ ವರ್ತನೆಯೇ ಹಲ್ಲೆಗೆ ಕಾರಣ ಎನ್ನಲಾಗಿದೆ.

ADVERTISEMENT

‘ಕಳೆದ ವಾರವೇ ಘಟನೆ ನಡೆದಿದ್ದು, ಇತ್ಯರ್ಥ ಪಡಿಸಲಾಗಿದೆ. ಹಲ್ಲೆ ನಡೆಸಿದವರು ಹಾಗೂ ಯುವಕ– ಯುವತಿಯರನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಕೆಲವರು ಆ ದೃಶ್ಯಗಳನ್ನು ಈಗ ವೈರಲ್ ಮಾಡಿರಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.