ADVERTISEMENT

ಯುವತಿಯರ ಹತ್ಯೆಗೆ ಲಾಡ್ಜ್, ಸೈನೈಡ್ ಬಾಟಲಿ ಸಾಕ್ಷಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2011, 19:30 IST
Last Updated 22 ನವೆಂಬರ್ 2011, 19:30 IST
ಯುವತಿಯರ ಹತ್ಯೆಗೆ ಲಾಡ್ಜ್, ಸೈನೈಡ್ ಬಾಟಲಿ ಸಾಕ್ಷಿ
ಯುವತಿಯರ ಹತ್ಯೆಗೆ ಲಾಡ್ಜ್, ಸೈನೈಡ್ ಬಾಟಲಿ ಸಾಕ್ಷಿ   

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ, ದೇಹಸುಖ ಪಡೆದು, ಸೈನೈಡ್ ನೀಡಿ 20 ಯುವತಿಯರನ್ನು ಕೊಂದ ಆರೋಪ ಎದುರಿಸುತ್ತಿರುವ ಮೋಹನ್ ಕುಮಾರ್ ವಿಚಾರಣೆ ಸತತ ಎರಡನೇ ದಿನವಾದ ಮಂಗಳವಾರವೂ ಇಲ್ಲಿನ ತ್ವರಿತಗತಿ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ಹಾಸನದ ಸನ್ಮಾನ್ ಲಾಡ್ಜ್, ಬಂಟ್ವಾಳದಲ್ಲಿ ದೊರೆತ ಸೈನೈಡ್ ಬಾಟಲಿ ಇಂದು ಪ್ರಮುಖ ಸಾಕ್ಷಿಯಾಗಿ ದಾಖಲಾದವು.

ನ್ಯಾಯಾಧೀಶ ನಿಂಗಣ್ಣಗೌಡ ಜಂಟ್ಲಿ ಅವರ ತ್ವರಿತಗತಿ ನ್ಯಾಯಾಲಯದಲ್ಲಿ ನಾಲ್ವರು ಸಾಕ್ಷಿಗಳು ಹಾಜರಾಗಿ ಹೇಳಿಕೆ ನೀಡಿದರು. ವಕೀಲರನ್ನು ಇಟ್ಟುಕೊಳ್ಳದೆ ಸ್ವತಃ ಪ್ರತಿವಾದ ಮಂಡಿಸುತ್ತಿರುವ ಆರೋಪಿ ಮೋಹನ್ ಕುಮಾರ್ ಪಾಟೀ ಸವಾಲಿಗೂ ಸಾಕ್ಷಿಗಳು ಸಮರ್ಪಕ ಉತ್ತರ ನೀಡಿದ.

`ಹಾಸನದ ಸನ್ಮಾನ ಲಾಡ್ಜ್‌ಗೆ 2009ರ ಜೂನ್ 17ರಂದು ಸಂಜೆ ಆಗಮಿಸಿದ ಮೋಹನ್ ರಿಜಿಸ್ಟರ್‌ನಲ್ಲಿ ತನ್ನ ಹೆಸರನ್ನು ಬದಲಿಸಿದ್ದ. ಮರುದಿನ ಬೆಳಿಗ್ಗೆ 5.45ರ ಹೊತ್ತಿಗೆ ಆಕೆಯೊಂದಿಗೆ ಹೊಸ ಬಟ್ಟೆ ತೊಟ್ಟು ಲಾಡ್ಜ್‌ನಿಂದ ಹೊರ ಹೋಗಿದ್ದ. 15 ನಿಮಿಷದೊಳಗೆ ಒಬ್ಬನೇ ವಾಪಸ್ ಬಂದ. ಮತ್ತೆ ಅರ್ಧ ಗಂಟೆಗೆಲ್ಲಾ ರೂಂ ಖಾಲಿ ಮಾಡಿಕೊಂಡು ಹೋದ~... ಸನ್ಮಾನ್ ಲಾಡ್ಜ್‌ನಲ್ಲಿ ಈಗಲೂ ಕ್ಯಾಶಿಯರ್ ಆಗಿರುವ ಕಾಂತರಾಜ್ ಕಟಕಟೆಯಲ್ಲಿ ನಿಂತು ಸಾಕ್ಷಿ ಹೇಳುತ್ತಿದ್ದಾಗ ಮೋಹನ ಕುಮಾರ್ ಸೂಕ್ಷ್ಮವಾಗಿ ಗಮನಿಸುತ್ತಿದ್ದ.

ಅನಿತಾ ಉಟ್ಟಿದ್ದ ಸೀರೆಯನ್ನು ಸಾಕ್ಷಿ ಗುರುತಿಸಿದಾಗ ಮೋಹನ್ ಬತ್ತಳಿಕೆಯಲ್ಲಿದ್ದ ಪ್ರಶ್ನೆಗಳ ಅಸ್ತ್ರ ಕೊನೆಗೊಂಡಂತೆ ಕಾಣಿಸಿತು. ಪಾಟಿಸವಾಲು ರೂಪದಲ್ಲಿ ಆತ ಕೇಳಿದ 3-4 ಪ್ರಶ್ನೆಗಳಿಗೆ ಸಾಕ್ಷಿ ದಿಟ್ಟವಾಗಿಯೇ ಉತ್ತರಿಸಿದರು. ವಿಶೇಷ ಸರ್ಕಾರಿ ವಕೀಲ ಚೆಯ್ಯಬ್ಬ ಬ್ಯಾರಿ ಅವರೂ ಸಾಕ್ಷಿಯಿಂದ ವಿವರ ಹೇಳಿಕೆ ಹೊರಬರುವಂತೆ ಮಾಡಿದರು.

`ಬಂಟ್ವಾಳ ಗ್ರಾಮಾಂತರ ಠಾಣೆ ಎಲ್ಲಿದೆ ಎಂದು ನಿಮಗೆ ಗೊತ್ತಿದೆಯೇ?~ ಎಂದು ಮೋಹನ ಕಟ್ಟಿಹಾಕಲು ಯತ್ನಿಸಿದಾಗ ಕಾಂತರಾಜ್ ಸ್ವಲ್ಪ ಗಲಿಬಿಲಿಗೊಂಡರು. ಮೊದಲು ಗೊತ್ತಿಲ್ಲ ಎಂದ ಅವರು, ಪುತ್ತೂರು ಎಸಿಪಿ ಅವರ ಕರೆ ಮೇರೆಗೆ ಅಲ್ಲಿಗೆ ತೆರಳಿದ್ದನ್ನು ಬಳಿಕ ತಿಳಿಸಿದರು.

ಬಳಿಕ ಇದೇ ಲಾಡ್ಜ್‌ನಲ್ಲಿ ಪೊಲೀಸರು ಮಹಜರು ನಡೆಸುವ ಸಂದರ್ಭದಲ್ಲಿ ಸಹಿ ಹಾಕಿದ್ದ ಹಾಸನ ಸುಭಾಷ್ ವೃತ್ತದ ಬಳಿ ಕ್ಯಾಂಟೀನ್ ನಡೆಸುವ ಮಂಜುನಾಥ ಸಾಕ್ಷಿ ಹೇಳಿದರು. ಪೊಲೀಸರು ಸ್ಥಳ ಮಹಜರು ನಡೆಸಿದಾಗಿನ ವಿದ್ಯಮಾನ ವಿವರಿಸಿದರು.

ಬಂಟ್ವಾಳದ ಚರಣ್ ಕುಮಾರ್ ಮೂರನೇ ಸಾಕ್ಷಿಯಾಗಿದ್ದರು. ಪೊಲೀಸರು ಮಹಜರು ನಡೆಸುವಾಗ ತಾವು ಕಂಡಿದ್ದ ವಿಚಾರವನ್ನೆಲ್ಲ ಆತ ತಿಳಿಸಿದರು. ಮುಖ್ಯವಾಗಿ ಮೋಹನನ ಕಿಸೆಯಲ್ಲಿ `ಕ್ಲಾಸಿಕ್ ಮೊಬೈಲ್ ಫೋನ್ ಕಂಡಿದ್ದನ್ನೂ, ಕಪ್ಪು ಚೀಲದಲ್ಲಿ ಸಿಮ್ ಇರದ ಮೊಬೈಲ್ ಫೋನ್, ಎರಡು ಚಿಕ್ಕ ಡೈರಿಗಳು, ಕೆಂಪು ಮುಚ್ಚಳದ ಬಾಟಲಿಯೊಳಗಿದ್ದ ಸೈನೈಡ್ ಪುಡಿ, ಎರಡು ಪ್ಲಾಸ್ಟಿಕ್ ಕವರ್‌ಗಳಲ್ಲಿದ್ದ ಸೈನೈಡ್ ಗುಳಿಗೆಗಳ ಬಗೆಗೂ ಮಾಹಿತಿ ನೀಡಿದರು.

`ಪೊಲೀಸರು ಎರಡು ಬಾರಿ ಮಹಜರು ನಡೆಸಿದ್ದು, ಮೊದಲ ಬಾರಿಗೆ ತೆಗೆದ ಫೋಟೊದಲ್ಲಿ ಸೈನೈಡ್ ಇರಲಿಲ್ಲ. ಅದನ್ನು ಮತ್ತೆ ತಂದು ಇಡಲಾಗಿದೆ~ ಎಂದು ಮೋಹನ್ ಹೇಳಿದ್ದನ್ನು ಸಾಕ್ಷಿ ಚರಣ್ ಕುಮಾರ್ ಒಪ್ಪಲಿಲ್ಲ.

ಮೋಹನ್‌ಗೆ ಸೈನೈಡ್ ನೀಡಿದ ಆರೋಪಿ ಅಂಗಡಿ ಮೇಲೆ ದಾಳಿ ನಡೆಸಿ, ಪೊಲೀಸರು ಜಪ್ತಿ ಮಾಡಿದಾಗ ಇದ್ದ ಸಾಕ್ಷಿ ಪುತ್ತೂರಿನ ರಾಜೇಶ್ ಮಧ್ಯಾಹ್ನ ನಂತರ ಸಾಕ್ಷ್ಯ ನುಡಿದರು.

ಆದರೆ ಸೈನೈಡ್ ನೀಡಿದ ವ್ಯಕ್ತಿ ನ್ಯಾಯಾಲಯದೆದುರು ಹಾಜರಿರದ ಕಾರಣ ಆರೋಪಿ ಮೋಹನ್ ಪಾಟಿಸವಾಲು ನಡೆಸಲಿಲ್ಲ.

ಮೂವರು ಯುವತಿಯರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ. 8ರವರೆಗೆ ವಿಚಾರಣೆ ನಿರಂತರವಾಗಿ ಮುಂದುವರಿಯಲಿದೆ.
 

ಪಕ್ಕಾ ಪಾಟಿಸವಾಲು!
ಸರಣಿ ಹತ್ಯೆ ಆರೋಪಿ ಮೋಹನ್ ಕುಮಾರ್ ವೃತ್ತಿಯಲ್ಲಿ ಶಿಕ್ಷಕನಾಗಿದ್ದ. ಆದರೆ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ಭಾರತೀಯ ದಂಡ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮ, ಅಪರಾಧ ಪ್ರಕ್ರಿಯಾ ಸಂಹಿತೆ ಪುಸ್ತಕಗಳನ್ನು ಓದಿಕೊಂಡಿದ್ದು, ಈಗ ಪಕ್ಕಾ ವಕೀಲನಂತೆಯೇ ಪಾಟಿಸವಾಲು ನಡೆಸುತ್ತಿದ್ದಾನೆ!
ಆತ ನಡೆಸಿದ ಪಾಟಿಸವಾಲು ಕಿರಿದಾದ ಕೋರ್ಟ್ ಹಾಲ್‌ನಲ್ಲಿ ಕಿಕ್ಕಿರಿದಿದ್ದ ಯುವ ವಕೀಲರು ಹುಬ್ಬೇರಿಸುವಂತೆ ಮಾಡಿತು.
ಸಾಕ್ಷಿಗಳು ಹೇಳಿಕೆ ನೀಡುವಾಗ ಗಮನವಿಟ್ಟು ಆಲಿಸುತ್ತಿದ್ದ ಆರೋಪಿ, ಮಾಹಿತಿಗಳನ್ನು ಪುಟ್ಟ ಪುಸ್ತಕದಲ್ಲಿ ಗುರುತು ಹಾಕಿಕೊಳ್ಳುತ್ತಿದ್ದ. ಸಾಕ್ಷಿಗಳ ಹೇಳಿಕೆಯಲ್ಲಿ ಎಲ್ಲಿ ತಪ್ಪು, ಗೊಂದಲ ಕಾಣುತ್ತದೋ ಎಂಬುದನ್ನು ಗಮನಿಸಿ ತನ್ನ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದ ರೀತಿ ಎದ್ದು ಕಾಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.