ಬೆಂಗಳೂರು: ಬಿಎಂಟಿಸಿ ಬಸ್ ಚಾಲಕನೊಬ್ಬ ಬಸ್‌ನಲ್ಲೇ ಪಂಜಾಬ್ ಮೂಲದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಚಾಮರಾಜಪೇಟೆ ಪೊಲೀಸರು ಸಿದ್ದಾರ್ಥ್ ಎಂಬ ಚಾಲಕನನ್ನು ಬಂಧಿಸಿದ್ದಾರೆ.
ನಗರದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಆ ಯುವತಿ ಗುರುವಾರ (ಮಾ.13) ರಾತ್ರಿ ಪಂಜಾಬ್‌ನಿಂದ ವಿಮಾನದಲ್ಲಿ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾಳೆ. ಆ ನಂತರ ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್‌ನಲ್ಲಿ ಮೆಜೆಸ್ಟಿಕ್‌ಗೆ ಬಂದಿಳಿದ ಆಕೆ ಪದ್ಮನಾಭನಗರಕ್ಕೆ ಹೋಗಲು ಸಿದ್ದಾರ್ಥ್ ಚಾಲಕನಾಗಿದ್ದ ಬಸ್‌ಗೆ ಹತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಬಸ್ ಬನಶಂಕರಿಗೆ ಬರುವಷ್ಟರಲ್ಲಿ ಇತರೆ ಪ್ರಯಾಣಿಕರೆಲ್ಲಾ ವಿವಿಧ ನಿಲ್ದಾಣಗಳಲ್ಲಿ ಇಳಿದು ಯುವತಿ ಮಾತ್ರ ಉಳಿದುಕೊಂಡಿದ್ದಾಳೆ. ಬಳಿಕ ಪದ್ಮನಾಭನಗರದ ಕಡೆಗೆ ಬಸ್ ಚಾಲನೆ ಮಾಡಿಕೊಂಡು ಹೊರಟ ಸಿದ್ದಾರ್ಥ್, ಮಾರ್ಗಮಧ್ಯೆ ವಾಹನ ನಿಲ್ಲಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಯುವತಿ ಆತನ ಕೈಗಳಿಗೆ ಕಚ್ಚಿ ರಕ್ಷಣೆಗಾಗಿ ಕೂಗಿಕೊಂಡಿದ್ದಾಳೆ. ಇದರಿಂದ ಗಾಬರಿಯಾದ ಆತ ಆಕೆಯನ್ನು ಚಾಮರಾಜಪೇಟೆಗೆ ಕರೆದುಕೊಂಡು ಬಂದು ಹಣ, ಬ್ಯಾಗ್, ಮೊಬೈಲ್ ಕಿತ್ತುಕೊಂಡು ವಾಹನದಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಸಂಬಂಧ ಯುವತಿ ಶುಕ್ರವಾರ ಬೆಳಿಗ್ಗೆ ಠಾಣೆಗೆ ದೂರು ನೀಡಿದಳು. ಆ ದೂರು ಆಧರಿಸಿ ಸಿದ್ದಾರ್ಥ್‌ನನ್ನು ಬಂಧಿಸಲಾಗಿದೆ. ಆತ ಬಿಎಂಟಿಸಿಯ ಪೀಣ್ಯ ಡಿಪೊದಲ್ಲಿ ಚಾಲಕನಾಗಿದ್ದು, ಘಟನಾ ಸಂದರ್ಭದಲ್ಲಿ ಆತನೇ ಚಾಲಕ ಮತ್ತು ನಿರ್ವಾಹಕನ ಕೆಲಸ ನಿರ್ವಹಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಆತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.