ADVERTISEMENT

ಯುವ ಕಾಂಗ್ರೆಸ್ ಚುನಾವಣೆ: ಹಿಂದೆ ಸರಿದ ನಟಿ ರಮ್ಯಾ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST
ಯುವ ಕಾಂಗ್ರೆಸ್ ಚುನಾವಣೆ: ಹಿಂದೆ ಸರಿದ ನಟಿ ರಮ್ಯಾ
ಯುವ ಕಾಂಗ್ರೆಸ್ ಚುನಾವಣೆ: ಹಿಂದೆ ಸರಿದ ನಟಿ ರಮ್ಯಾ   

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಸ್ಪರ್ಧಿ ಎಂದೇ ಭಾವಿಸಿದ್ದ ಚಿತ್ರನಟಿ ರಮ್ಯಾ ಅವರು ಕೊನೆಗಳಿಗೆಯಲ್ಲಿ ಕಣದಿಂದ ಹಿಂದೆ ಸರಿದಿದ್ದಾರೆ.

ಇದೇ 12 ಮತ್ತು 13ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಭಾನುವಾರ ಕೊನೆಯ ದಿನವಾಗಿತ್ತು. ಶನಿವಾರ ರಾತ್ರಿ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ರಮ್ಯಾ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದೆ ಇರಲು ತೀರ್ಮಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನನ್ನ ನೆಚ್ಚಿನ ನಾಯಕರಲ್ಲಿ ಒಬ್ಬರು ಎಂದು ರಮ್ಯಾ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಎಂದು ಬಿಂಬಿಸುವ ಭಿತ್ತಿಪತ್ರಗಳನ್ನು ಶಾಂತಿನಗರದ ಹಲವೆಡೆ ಅಂಟಿಸಲಾಗಿದೆ.

ಇದರಿಂದ ಬೇಸತ್ತ ರಮ್ಯಾ ಪಕ್ಷದ ಹಿರಿಯ ಮುಖಂಡರೊಬ್ಬರ ಸಲಹೆ ಮೇರೆಗೆ ಕಣದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, `ನನ್ನ ಹೆಸರಿಗೆ ಕಳಂಕ ತರುವ ಪ್ರಯತ್ನವನ್ನು ಪಕ್ಷದವರೇ ಮಾಡಿದ್ದಾರೆ. ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಾರದು ಎಂದು ವ್ಯವಸ್ಥಿತ ಪಿತೂರಿ ನಡೆದಿದೆ~ ಎಂದು ಮುಖಂಡರ ಮುಂದೆ ರಮ್ಯ ಅಳಲನ್ನು ತೋಡಿಕೊಂಡರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ, ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ (ಗುಲ್ಬರ್ಗ), ಎ.ಪಿ. ಬಸವರಾಜು (ಹಾಸನ), ರಿಜ್ವಾನ್ (ಮೈಸೂರು) ಸೇರಿದಂತೆ ಹಲವರು ಭಾನುವಾರ ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.