ADVERTISEMENT

ಯೂಟ್ಯೂಬ್‌ನಲ್ಲಿ ಭವಿಷ್ಯ ನೋಡಿ ಬಂದಿದ್ದ!

ತಪ್ಪೊಪ್ಪಿಗೆ ಹೇಳಿಕೆ ನೀಡಿದ ಆರೋಪಿ, 20 ದಿನಗಳ ಹಿಂದೆಯೇ ಚಾಕು ಖರೀದಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:33 IST
Last Updated 8 ಮಾರ್ಚ್ 2018, 19:33 IST
ತೇಜ್‌ರಾಜ್‌
ತೇಜ್‌ರಾಜ್‌   

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿಂದ ಇರಿದ ತೇಜ್‌ರಾಜ್ ಶರ್ಮಾ (32), ಬುಧವಾರ ಬೆಳಿಗ್ಗೆ ಮನೆಯಿಂದ ಹೊರಡುವಾಗ ‘ಯುಟ್ಯೂಬ್‌’ನಲ್ಲಿ ತನ್ನ ಭವಿಷ್ಯ ನೋಡಿಕೊಂಡು ಬಂದಿದ್ದ.

ಈ ವಿಚಾರವನ್ನು ಆತನೇ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾನೆ. ‘ನಾನು ವಿಶಾಖ ನಕ್ಷತ್ರದಲ್ಲಿ ಹುಟ್ಟಿರೋದು. ಬುಧವಾರ ನನಗೆ ಶುಭದಿನ. ಯುಟ್ಯೂಬ್‌ನಲ್ಲಿ ಭವಿಷ್ಯ ನೋಡಿದಾಗ, ‘ಈ ದಿನ ಏನೇ ಕೆಲಸ ಮಾಡಿದರೂ, ನಿಮಗೆ ಜಯ ಸಿಗುತ್ತದೆ’ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರು. ಹೀಗಾಗಿ, ಚಾಕು ಹಾಗೂ ದಾಖಲೆಗಳನ್ನು ತೆಗೆದುಕೊಂಡು ಹೊರಟಿದ್ದೆ. ಮೊದಲು ನ್ಯಾಯ ಕೇಳೋಣ. ಸಿಗಲಿಲ್ಲ ಎಂದರೆ ಮುಂದುವರಿಯೋಣ ಎಂದು ನಿರ್ಧರಿಸಿಕೊಂಡೇ ಬಂದಿದ್ದೆ’ ಎಂದು ತೇಜ್‌ರಾಜ್ ಹೇಳಿಕೆ ನೀಡಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

‘ತುಮಕೂರಿನಲ್ಲಿ ಎಂಟು ಇಲಾಖೆಗಳ 15 ಅಧಿಕಾರಿಗಳು ನನಗೆ ಮೋಸ ಮಾಡಿದ್ದರು. ಅವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ಕೊಟ್ಟರೆ, ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಹೀಗಾಗಿ, ಲೋಕಾಯುಕ್ತದಲ್ಲಿ ಪ್ರಕರಣಗಳನ್ನು ದಾಖಲಿಸಿದ್ದೆ. ಆದರೆ, ಸಾಕ್ಷ್ಯಗಳಿಲ್ಲ ಎಂದು ಅಲ್ಲೂ ನ್ಯಾಯ ಸಿಗಲಿಲ್ಲ.’ ‘ಆ ನಂತರ ಪ್ರತಿ 15 ದಿನಗಳಿಗೊಮ್ಮೆ ಲೋಕಾಯುಕ್ತರ ಕಚೇರಿಗೆ ಹೋಗಿ, ಮರುತನಿಖೆಗೆ ಆದೇಶಿಸುವಂತೆ ಮನವಿ ಮಾಡುತ್ತಿದ್ದೆ. ಕೊನೆ ಸಲ ಹೋದಾಗ, ಅಲ್ಲಿನ ಸಿಬ್ಬಂದಿ ನನಗೆ ಒಳಗೆ ಬಿಟ್ಟಿರಲಿಲ್ಲ. ‘ಯಾವಾಗಲೂ ಸುಳ್ಳು ದೂರುಗಳನ್ನು ತೆಗೆದುಕೊಂಡು ಬರುತ್ತಾನೆ. ಈತನನ್ನು ಒಳಗೆ ಕಳುಹಿಸುವುದು ಬೇಡ’ ಎಂದು ಅಲ್ಲಿನ ನೌಕರರು ನನ್ನನ್ನು ವಾಪಸ್ ಕಳುಹಿಸಿದ್ದರು. 20 ದಿನಗಳ ಹಿಂದೆಯೂ ಹೀಗೆ ಆಯಿತು. ಆಗಲೇ, ಅವೆನ್ಯೂ ರಸ್ತೆಗೆ ಹೋಗಿ ₹ 60 ಕೊಟ್ಟು ಚಾಕು ಖರೀದಿಸಿದ್ದೆ.’

ADVERTISEMENT

‘ಬುಧವಾರ ಬೆಳಿಗ್ಗೆ 7.30ಕ್ಕೆ ತುಮಕೂರಿನಿಂದ ರೈಲಿನಲ್ಲಿ ಹೊರಟು ಮೆಜೆಸ್ಟಿಕ್‌ಗೆ ಬಂದಿಳಿದ ನಾನು, ಅಲ್ಲಿಂದ ನಡೆದುಕೊಂಡೇ ಲೋಕಾಯುಕ್ತರ ಕಚೇರಿ ಬಳಿ ತೆರಳಿದೆ. ಮಧ್ಯಾಹ್ನ 12.30ರವರೆಗೂ ಪಾರ್ಕ್‌ನಲ್ಲಿ ಕುಳಿತುಕೊಂಡು ಆ ನಂತರ ಕಚೇರಿ ಹತ್ತಿರ ಹೋದೆ. ‌ಮೊದಲ ಎಆರ್‌ಇಯನ್ನು ಭೇಟಿಯಾಗಿ ಪ್ರಕರಣಗಳ ಬಗ್ಗೆ ವಿಚಾರಿಸಿದೆ. ಮರುತನಿಖೆಗೆ ಅವರು ಒಪ್ಪದಿದ್ದಾಗ, ವಿಶ್ವನಾಥ್ ಶೆಟ್ಟಿ ಅವರ ಕಚೇರಿ ಹತ್ತಿರ ಹೋದೆ.’‌

‘ಸ್ವಲ್ಪ ಸಮಯದ ಬಳಿಕ ಅವರು ಒಳಗೆ ಕರೆದರು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಟೇಬಲ್‌ ಮೇಲಿಟ್ಟೆ. ಅವರು ಸಹ ಸಾಕ್ಷ್ಯಗಳನ್ನು ಕೇಳಿದರು. ಆ ಕೂಡಲೇ ಜೇಬಿನಿಂದ ಚಾಕು ತೆಗೆದ ನಾನು, ಟೇಬಲ್‌ ಮೇಲೆ ಹತ್ತಿ ಅವರಿಗೆ ಚುಚ್ಚಲಾರಂಭಿಸಿದೆ. ಎಲ್ಲೆಲ್ಲಿಗೆ ಇರಿದೆ ಎಂಬುದೂ ಗೊತ್ತಿಲ್ಲ. ಅಷ್ಟರಲ್ಲಿ ಅಲ್ಲಿನ ನೌಕರರು ಬಂದು ನನ್ನನ್ನು ಹಿಡಿದುಕೊಂಡರು.’

‘ಈ ಹಂತದಲ್ಲಿ ಮಹಿಳೆಯೊಬ್ಬರು ನನ್ನ ಕೆನ್ನೆಗೆ ಹೊಡೆದರು. ಆಗ ನನ್ನ ತಪ್ಪಿನ ಅರಿವಾಯಿತು. ಕೋಪ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಿತ್ತು ಎನಿಸಿತು. ಅನ್ಯಾಯವಾಗಿ ಅವರಿಗೆ ಚುಚ್ಚಿಬಿಟ್ಟೆ. ಪಾಪ ಲೋಕಾಯುಕ್ತರಿಗೆ ವಯಸ್ಸಾಗಿದೆ. ಹಾಗೆ ಮಾಡಬಾರದಿತ್ತು’ ಎಂದು ಆರೋಪಿ ಕಣ್ಣೀರಿಟ್ಟಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಕರಣ ಸಿಸಿಬಿಗೆ ವರ್ಗ: ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಗುರುವಾರ ಆದೇಶಿಸಿದ್ದಾರೆ.

‘ತನಿಖೆಗೆ ಸಿಸಿಬಿ ಡಿಸಿಪಿ ಜೀನೇಂದ್ರ ಕಣಗಾವಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಈಗಾಗಲೇ ವಿಧಾನಸೌಧ ಠಾಣೆ ಪೊಲೀಸರಿಂದ ದಾಖಲೆಗಳನ್ನು ಪಡೆದಿರುವ ತಂಡ, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ’ ಎಂದು ‌ತಿಳಿಸಿದರು.

ಐದು ದಿನ ಪೊಲೀಸ್ ಕಸ್ಟಡಿಗೆ
ತೇಜ್‌ರಾಜ್‌ನನ್ನು ಬುಧವಾರ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ ಪೊಲೀಸರು, ಐದು ದಿನ ತಮ್ಮ ಕಸ್ಟಡಿಗೆ ಪಡೆದುಕೊಂಡರು. ಬೆಳಿಗ್ಗೆ ಆರೋಪಿಯನ್ನು ತುಮಕೂರಿನ ಎಸ್‌.ಎಸ್.ಪುರದಲ್ಲಿರುವ ಆತನ ಮನೆಗೆ ಕರೆದೊಯ್ದು ಕೆಲ ದಾಖಲೆಗಳನ್ನು ಜಪ್ತಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.