ADVERTISEMENT

ಯೋಗೇಶ್‌ ಮಾಸ್ಟರ್‌ಗೆ ಮಸಿ ಬಳಿದು ಬೆದರಿಕೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 18:57 IST
Last Updated 12 ಮಾರ್ಚ್ 2017, 18:57 IST
ಯೋಗೇಶ್‌ ಮಾಸ್ಟರ್‌ಗೆ ಮಸಿ ಬಳಿದು ಬೆದರಿಕೆ
ಯೋಗೇಶ್‌ ಮಾಸ್ಟರ್‌ಗೆ ಮಸಿ ಬಳಿದು ಬೆದರಿಕೆ   

ದಾವಣಗೆರೆ: ನಿಷೇಧಿತ ‘ಢುಂಢಿ’ ಕೃತಿಯ ಲೇಖಕ ಯೋಗೇಶ್‌ ಮಾಸ್ಟರ್‌ ಮುಖಕ್ಕೆ ಕೆಲ ಕಿಡಿಗೇಡಿಗಳು ಮಸಿ ಬಳಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ‘ಗೌರಿ ಲಂಕೇಶ್‌’ ಪತ್ರಿಕೆಯ 12ನೇ ವಾರ್ಷಿಕೋತ್ಸವ ಮತ್ತು ‘ಲಂಕೇಶ್‌–82’ ಕಾರ್ಯಕ್ರಮದಲ್ಲಿ ಭಾಗವಹಿಸಲು ಯೋಗೇಶ್‌ ಮಾಸ್ಟರ್‌ ಬಂದಿದ್ದರು. ಸಂಜೆ 5ರ ವೇಳೆ ಅವರು ಸಮೀಪದ ಹೋಟೆಲ್‌ಗೆ ತೆರಳಿದ್ದಾಗ ಈ ಘಟನೆ ನಡೆದಿದೆ.

ಬಳಿಕ ಕುವೆಂಪು ಕನ್ನಡ ಭವನಕ್ಕೆ ಬಂದು ಯೋಗೇಶ್‌ ಮಾಸ್ಟರ್‌ ಘಟನೆಯ ಬಗ್ಗೆ ಮಾಹಿತಿ ನೀಡಿದರು.

ADVERTISEMENT

‘‘ಸ್ನೇಹಿತರೊಂದಿಗೆ ಟೀ ಕುಡಿಯುತ್ತಿದ್ದ ವೇಳೆ ಸುಮಾರು 8ರಿಂದ 10 ಯುವಕರು ಏಕಾಏಕಿ ನನ್ನ ಮೇಲೆ ದಾಳಿ ಮಾಡಿದರು. ರಾಸಾಯನಿಕ ಮಿಶ್ರಿತ ಮಸಿಯನ್ನು ನನ್ನ ಮೇಲೆ ಎರಚಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ‘ಹಿಂದೂ ಧರ್ಮದ ವಿರುದ್ಧ ಬರೆದರೆ ನಿನ್ನನ್ನು ಕೊಲ್ಲುತ್ತೇವೆ’ ಎಂದು ಜೀವ ಬೆದರಿಕೆ ಹಾಕಿದರು. ‘ಜೈ ಶ್ರೀರಾಮ್‌’, ‘ಬೋಲೊ ಭಾರತ್‌ ಮಾತಾಕಿ ಜೈ’ ಎಂದು ಘೋಷಣೆ ಕೂಗುತ್ತ ದ್ವಿಚಕ್ರ ವಾಹನದಲ್ಲಿ ಹೋದರು. ಮಸಿ ಹಾಕಿದವರನ್ನು ನಾನು ನೋಡಿದ್ದು, ಅವರನ್ನು ಗುರುತಿಸಬಲ್ಲೆ’’ ಎಂದು ಹೇಳಿದರು.

‘ದುಷ್ಕರ್ಮಿಗಳು ನನ್ನ ಚಲನವಲನ ಗಮನಿಸುತ್ತಿದ್ದರು. ಏಕಾಏಕಿ ಬಂದು ಮಸಿ ಎರಚಿದರು. ಅವರು ನನ್ನ ಕಣ್ಣಿಗೆ ಟಾರ್ಗೆಟ್‌ ಮಾಡಿದ್ದರು. ಮಸಿಗೆ ರಾಸಾಯನಿಕವನ್ನು ಮಿಶ್ರಣ ಮಾಡಿದ್ದರಿಂದ ಮೈ ಇನ್ನೂ ಉರಿಯುತ್ತಿದೆ. ಕಣ್ಣು ತೆರೆಯಲು ತುಂಬಾ ಹೊತ್ತು ಕಷ್ಟ ಪಟ್ಟೆ’ ಎಂದು ಅವರು ಹೇಳಿದರು.

‘ನಾನು ಇಲ್ಲಿ ಸ್ವತಂತ್ರವಾಗಿ ಸಂಚರಿಸುವುದು ಕಷ್ಟವಾಗಿದೆ. ದಾಳಿಯಿಂದ ಮಾನಸಿಕ ಹಾಗೂ ದೈಹಿಕವಾಗಿ ಅಘಾತವಾಗಿದೆ. ಇದು ಸಾಹಿತ್ಯ ಹಾಗೂ ಸಂಸ್ಕೃತಿಯ ಮೇಲೆ ನಡೆದ ದಾಳಿಯಾಗಿದೆ. ನನ್ನ ಜತೆಗಿದ್ದ ಸಾಹಿತಿ ನಾಗಭೂಷಣ್‌, ಉಪನ್ಯಾಸಕ ದುರ್ಗೇಶ್‌ ಅವರ ಮೇಲೆಯೂ ಕಿಡಿಗೇಡಿಗಳು ಮಸಿ ಎರಚಿದ್ದಾರೆ’ ಎಂದು ಯೋಗೇಶ್‌ ವಿವರಿಸಿದರು. ಪತ್ರಕರ್ತೆ ಗೌರಿ ಲಂಕೇಶ್‌, ‘ಯೋಗೇಶ್‌ ಮಾಸ್ಟರ್‌ ಮೇಲಿನ ದಾಳಿಗೆ ಆರ್‌ಎಸ್‌ಎಸ್‌, ಎಬಿವಿಪಿ, ವಿಶ್ವ ಹಿಂದೂ ಪರಿಷತ್‌ ಸಂಘಟನೆಗಳೇ ಕಾರಣ. ಕಿಡಿಗೇಡಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ಸಂಜೆ ಕುವೆಂಪು ಕನ್ನಡ ಭವನದಿಂದ ಯೋಗೇಶ್‌ ಅವರು ಗೌರಿ ಲಂಕೇಶ್‌ ನೇತೃತ್ವದಲ್ಲಿ ಕೆಲ ಸಾಹಿತಿ ಹಾಗೂ ಹೋರಾಟಗಾರರೊಂದಿಗೆ ಮೆರವಣಿಗೆಯಲ್ಲಿ ಬಡಾವಣೆ ಪೊಲೀಸ್‌ ಠಾಣೆಗೆ ಬಂದು ಘಟನೆ ಬಗ್ಗೆ ದೂರು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.