
ಬೆಂಗಳೂರು/ಕೋಲಾರ್: ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ‘ಅಸಹಜ’ ಸಾವಿಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯಲ್ಲಿ ಮಂಗಳವಾರ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಹೆದ್ದಾರಿ ತಡೆ ನಡೆಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಉದ್ರಿಕ್ತ ಪ್ರತಿಭಟನಾಕಾರರು ಸ್ಥಳೀಯ ಶಾಸಕ ವರ್ತೂರು ಪ್ರಕಾಶ್ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಪೊಲೀಸರು ಮಧ್ಯೆ ಪ್ರವೇಶಸಿ, ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸದನದಲ್ಲೂ ಪ್ರತಿಧ್ವನಿ: ವಿಧಾನಮಂಡಳದ ಬಜೆಟ್ ಅಧಿವೇಶನದಲ್ಲಿ ರವಿ ಅವರ ಸಾವಿಗೆ ಆಕ್ರೋಶ ವ್ಯಕ್ತವಾಗಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು ರವಿ ಅವರ ಸಾವಿನ ಕುರಿತು ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಎಲ್ಲಾ ಕೋನಗಳಿಂದ ತನಿಖೆ: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಅನಿಸಿದೆ. ಅದಾಗ್ಯೂ ವೈದ್ಯಕೀಯ ವರದಿ ಬರುವ ತನಕ ಕಾಯಬೇಕಿದೆ. ಎಲ್ಲಾ ಕೋನಗಳಿಂದಲೂ ತನಿಖೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
ರವಿ ಅವರ ಸಾವು ಪ್ರಕರಣ ಬೇಧಿಸಿಲು ಪೊಲೀಸರು ಡಿಸಿಪಿ ರೋಹಿಣಿ ಕಟೋಚ್ ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿದ್ದಾರೆ. ರೋಹಿಣಿ ಅವರು ಶೈಕ್ಷಣಿಕವಾಗಿ ವೈದ್ಯಕೀಯ ವಿಜ್ಞಾನ ಅಭ್ಯಸಿಸಿದ್ದಾರೆ.
ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದ ರವಿ ಅವರು ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದರು. ಅಲ್ಲಿನ ಮರಳು ಮಾಫಿಯಾವನ್ನು ಮಟ್ಟಹಾಕಿದ್ದರು. ಬಳಿಕ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಆದಾಯ ತೆರಿಗೆ ಇಲಾಖೆಗೆ ಹೆಚ್ಚುವರಿ ಆಯುಕ್ತರಾಗಿ ಬೆಂಗಳೂರಿಗೆ ಬಂದಿದ್ದರು.
2009ರ ಬ್ಯಾಚ್‌ನ ಕರ್ನಾಟಕ ಕೇಡರಿನ ಅಧಿಕಾರಿಯಾಗಿದ್ದ ರವಿ ಅವರು, ಬೆಂಗಳೂರಿಗೆ ಬಂದಾಗಿನಿಂದ ರಿಯಲ್ ಎಸ್ಟೇಟ್ ಕಂಪೆನಿಗಳಿಗೆ ಸಿಂಹಸ್ವಪ್ನವಾಗಿದ್ದರು. ಮಾರಾಟ ತೆರಿಗೆ ವಂಚಿಸುತ್ತಿದ್ದವರನ್ನು ಪತ್ತೆ ಮಾಡಿ ನಾಲ್ಕು ತಿಂಗಳಲ್ಲಿ 125 ಕೋಟಿ ರೂಪಾಯಿ ವಸೂಲಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.