
ಚಿಕ್ಕಮಗಳೂರು:‘ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ನಿರಾಕರಣೆ ನಡುವೆಯೂ ಪಶ್ಚಿಮ ಘಟ್ಟದ ಹೃದಯ ಭಾಗದ ಕಾಡಿನ ನಡುವೆ ಭೈರಾಪುರ–ಶಿಶಿಲ ರಸ್ತೆ ನಿರ್ಮಿಸಲು ಹೊರಟಿರುವುದರ ಹಿಂದೆ ಯಾರಿಗೋ ಲಾಭವಿರುವುದು ನಿಸ್ಸಂಶಯ. ಈ ಉದ್ದೇಶಿತ ರಸ್ತೆ ಹೆಸರಿನಲ್ಲಿ ಏನೋ ಬಹುದೊಡ್ಡ ಯೋಜನೆ ಕಾಲಿಡುವ ಲಕ್ಷಣಗಳಿವೆ. ಆದರೆ, ಯಾರೊಬ್ಬರೂ ಗುಟ್ಟು ಬಿಡುಕೊಡುತ್ತಿಲ್ಲ’
ಇದು ಅರಣ್ಯ ಇಲಾಖೆ ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಬಳಿ ಇತ್ತೀಚೆಗಷ್ಟೆ ತೋಡಿಕೊಂಡಿದ್ದ ಆತಂಕದ ನುಡಿ. ಇದಕ್ಕೆ ಪುಷ್ಟಿ ನೀಡುವಂತೆ, ಭೈರಾಪುರ–ಶಿಶಿಲ ನಡುವೆ ಮಲೆನಾಡು–ಕರಾವಳಿ ಸಂಪರ್ಕಿಸುವ ಬಹುಕೋಟಿ ವೆಚ್ಚದ ‘ತೂಗು ಸೇತುವೆ’ ನಿರ್ಮಾಣದ ಪ್ರಸ್ತಾವನೆ ಕೇಂದ್ರ ಸರ್ಕಾರದ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯಕ್ಕೆ ಇತ್ತೀಚೆಗಷ್ಟೆ ಸಲ್ಲಿಕೆ ಯಾಗಿರುವುದು ಬೆಳಕಿಗೆ ಬಂದಿದೆ.
ಶೋಲಾ ಅರಣ್ಯ ಮತ್ತು ಆನೆ, ಹುಲಿ ಕಾರಿಡಾರ್ ಇರುವ ದಟ್ಟ ಅರಣ್ಯದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಭೈರಾಪುರ–ಶಿಶಿಲ ಮಾರ್ಗದಲ್ಲಿ ‘ಫ್ಲೈ ಓವರ್’ ರಸ್ತೆ ನಿರ್ಮಿಸುವ ಪ್ರಸ್ತಾಪ ಹಿಂದೊಮ್ಮೆ ಆಗಿತ್ತು. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಫ್ಲೈಓವರ್ ಯೋಜನೆ ರೂಪಿಸಿ ಸರ್ಕಾರದ ಮುಂದಿಟ್ಟಿದ್ದರು.
ಆದರೆ, ಈ ಯೋಜನೆ ಕಾರ್ಯ ಸಾಧುವಲ್ಲ ಮತ್ತು ದುಬಾರಿ ವೆಚ್ಚದ್ದು ಎಂದು ಇಲಾಖೆ ಮಟ್ಟದಲ್ಲೇ ಕೈಬಿಡಲಾಗಿತ್ತು. ಆದರೆ, ಕೆಲ ತಿಂಗಳ ಹಿಂದೆ ಉಡುಪಿ–ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ತೂಗು ಸೇತುವೆ ಪರಿಕಲ್ಪನೆಗೆ ಮತ್ತೆ ಮರುಜೀವ ಕೊಟ್ಟಿದ್ದಾರೆ.
‘ಪಿಎಂಜಿಎಸ್‌ವೈ ರಸ್ತೆ ನಿರ್ಮಾಣದ ಪ್ರಸ್ತಾವನೆ ಇರುವ ಭೈರಾಪುರ–ಶಿಶಿಲ ಮಾರ್ಗ ಪಶ್ಚಿಮ ಘಟ್ಟದ ಹೃದಯ ಭಾಗದಲ್ಲಿದೆ. ಇದು ಅತ್ಯಂತ ಸುಂದರ ನಿಸರ್ಗ ತಾಣವಾಗಿದೆ. ಪ್ರಕೃತಿ ನೀಡಿರುವ ವರದಂತಿದೆ. ಈ ಭಾಗದ ಸುತ್ತಮುತ್ತ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಧರ್ಮಸ್ಥಳ ಕ್ಷೇತ್ರ, ಉಡುಪಿ ಶ್ರೀಕೃಷ್ಣ ದೇವಾಲಯ, ಶೃಂಗೇರಿ ಶಾರದಾಂಬೆ ಸನ್ನಿಧಿ, ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರಗಳಿವೆ. ಈ ಯಾತ್ರಾ ಸ್ಥಳಗಳನ್ನು ಬೆಸೆಯಲು, ಚಾರ್ಮಾಡಿ ಮತ್ತು ಶಿರಾಡಿ ಘಾಟಿ ರಸ್ತೆಗಳ ಮೇಲೆ ಉಂಟಾಗಿರುವ ವಾಹನ ದಟ್ಟಣೆ ತಪ್ಪಿಸಲು, ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ನಿಂದ ರಾಷ್ಟ್ರೀಯ ಹೆದ್ದಾರಿ 234ರಿಂದ ರಾಷ್ಟ್ರೀಯ ಹೆದ್ದಾರಿ ಪೆರಿಯಾಶಾಂತಿ 48ಕ್ಕೆ ಸಂಪರ್ಕ ರಸ್ತೆಯಾಗಿ ಬೈರಾಪುರ–ಶಿಶಿಲ ಮಾರ್ಗ ಬಳಸಿಕೊಳ್ಳಬಹುದು’ ಎಂದು ಸಂಸದರು ‘ತೂಗು ಸೇತುವೆ’ ರಸ್ತೆಯ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದ್ದಾರೆ.
ತೂಗು ಸೇತುವೆಗೆ ಈಗಾಗಲೆ ಪ್ರಸ್ತಾವನೆ ಸಿದ್ಧಪಡಿಸಿ 2016ರ ಜನವರಿ 22ರಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಲ್ಲಿಸಿದ್ದರು. ಗಡ್ಕರಿ ಅವರು ಈ ಪ್ರಸ್ತಾವನೆ ಪರಿಗಣಿಸಿದ್ದಾರೆ. ಕಳೆದ ಜುಲೈ 12ರಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಯೋಜನೆ ಜಾರಿಗೆ ಒಲವು ತೋರಿಸಿ, ಯೋಜನೆ ರೂಪರೇಷೆ ಸಿದ್ಧಪಡಿಸಲು ಸಹಕರಿಸುವಂತೆ ಸಂಸದರಿಗೆ ಪತ್ರ ಬರೆದಿದ್ದರು.
ಸಂಸದರು, ಭೈರಾಪುರ–ಶಿಶಿಲ ಮಾರ್ಗದ ಉದ್ದೇಶಿತ ‘ಫ್ಲೈಓವರ್ ರಸ್ತೆ’ ಪರಿಕಲ್ಪನೆಯ ರೂವಾರಿ, ಪಿಎಂಜಿಎಸ್‌ವೈ ತಾಂತ್ರಿಕ ಸಹಾಯಕ ಎಂಜಿನಿಯರ್ ಎಚ್.ಎಂ.ಶಿವಪ್ರಕಾಶ್ ಅವರನ್ನು ಈ ಸಂಬಂಧ ಚರ್ಚಿಸಲು 3 ದಿನಗಳ ಮಟ್ಟಿಗೆ (ಇದೇ13ರಿಂದ 16ರವರೆಗೆ) ದೆಹಲಿಗೆ ನಿಯೋಜಿಸುವಂತೆ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ (ಕೆಆರ್‌ಆರ್‌ಡಿಎ) ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಪಿಎಂ ಜಿಎಸ್‌ವೈ ಕಾರ್ಯನಿರ್ವಾಹಕ ಎಂಜಿನಿ ಯರ್, ಚಿಕ್ಕಮಗಳೂರು, ಮಂಗಳೂರು ಲೋಕೋಪಯೋಗಿ ಇಲಾಖೆ ಕಾರ್ಯ ಪಾಲಕ ಎಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ವಿಭಾಗದ ಕಾರ್ಯಪಾಲಕ ಎಂಜಿನಿ ಯರ್‌ಗೂ ರವಾನಿಸಿದ್ದರು. ಈ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭಿಸಿದೆ.
‘ಎಚ್.ಎಂ.ಶಿವಪ್ರಕಾಶ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಯೋಜನೆಯ ಬಗ್ಗೆ ಕೇಂದ್ರ ಸಚಿವರು ಹಾಗೂ ಸಚಿವಾಲಯದ ಅಧಿಕಾರಿಗಳಿಗೆ ವಿವರಿ ಸುತ್ತಿದ್ದಾರೆ. ಯೋಜನೆ ಜಾರಿಗೆ ಬೇಕಾದ ತಾಂತ್ರಿಕ ಸಲಹೆ ನೀಡುತ್ತಿದ್ದಾರೆ. ಕೇಂದ್ರದ 2017–18ರ ಬಜೆಟ್‌ನಲ್ಲಿ ಭೈರಾಪುರ–ಶಿಶಿಲ ಮಾರ್ಗದ ಉದ್ದೇಶಿತ ಫ್ಲೈಓವರ್ ರಸ್ತೆಗೆ ಅನುದಾನವನ್ನು ಆದ್ಯತೆ ಮೇಲೆ ಮೀಸಲಿಡುವಂತೆ ಸಂಸದರು ಮನವಿ ಸಲ್ಲಿಸಿದ್ದಾರೆ. ಇದರ ಜತೆಗೆ, ಚಿಕ್ಕಮಗಳೂರು ನಗರದ ರತ್ನಗಿರಿ ಬೋರೆ (ಮಹಾತ್ಮಗಾಂಧಿ ಉದ್ಯಾನ) ಯಿಂದ ಮುಳ್ಳಯ್ಯನಗಿರಿ, ಬಾಬಾಬುಡ ನ್‌ಗಿರಿ, ಮಾಣಿಕ್ಯಧಾರ– ದೇವೀರಮ್ಮ ಬೆಟ್ಟದಿಂದ ಬಿಂಡಿಗದವರೆಗೆ ‘ಏರಿಯಲ್ ಕಮ್ಯುಟರ್ ಟ್ರಾಮ್ ವೇ’ ಯೋಜನೆ ಮತ್ತು ಬಣಕಲ್ ಬಳಿಯ ಹೇಮಾವತಿ ನದಿಗೆ ಪ್ರವಾಹ ತಡೆಗೋಡೆ ನಿರ್ಮಿಸುವ ಯೋಜನೆಗೂ ಅನುದಾನ ಮೀಸಲಿಡು ವಂತೆ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ತೂಗು ಸೇತುವೆ, ಫ್ಲೈಓವರ್, ಹೆದ್ದಾರಿ ಸಂಪರ್ಕ ರಸ್ತೆ, ಮುಳ್ಳಯ್ಯನಗಿರಿ ಸಾಲಿನ ಏರಿಯಲ್ ಟ್ರಾಮ್ ವೇ ಯೋಜನೆ ಕೈಬಿಡಬೇಕು
ಜಿ.ವೀರೇಶ್, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ
ಭೈರಾಪುರ–ಶಿಶಿಲ ಮಾರ್ಗದ ರಸ್ತೆಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಬಾಳೂರು ಮೀಸಲು ಅರಣ್ಯದೊಳಗೆ ಏಕಪಕ್ಷೀಯವಾಗಿ ಸಮೀಕ್ಷೆ ನಡೆಸಿದ್ದಾರೆ
ಶೋಭಾ ಕರಂದ್ಲಾಜೆ, ಸಂಸದೆ
ಅರಣ್ಯ ಇಲಾಖೆ ಹೇಳುವುದೇನು?
* ರಸ್ತೆ ಯೋಜನೆ ಸರ್ವೆಗೆ ಇಲಾಖೆ ಅನುಮತಿಯನ್ನೇ ನೀಡಿಲ್ಲ
* ಅರಣ್ಯ ಕಾನೂನು ಉಲ್ಲಂಘಿಸಿ ಸರ್ವೆ ನಡೆಸಿರುವುದು ಸರಿಯಲ್ಲ
* ನಾವು ಕೇಳಿದ ಮಾಹಿತಿಗಳನ್ನು ಸರ್ವೆ ನಡೆಸಿದ ಏಜೆನ್ಸಿ ಒದಗಿಸಿಲ್ಲ
*ಮರಗಿಡ ಕಡಿದಿದ್ದರೆ, ಅರಣ್ಯ ಅಕ್ರಮ ಪ್ರವೇಶಿಸಿದ್ದರೆ ಏಜೆನ್ಸಿ ವಿರುದ್ಧ ಕ್ರಮ
* ಬಾಳೂರು ಮೀಸಲು ಅರಣ್ಯದಲ್ಲಿ ತೂಗು ಸೇತುವೆ, ಫ್ಲೈಓವರ್, ಲಿಂಕ್ ರಸ್ತೆ ಕಾರ್ಯಸಾಧುವಲ್ಲ
ಸ್ಥಳೀಯ ಪರಿಸರ ಸಂಘಟನೆಗಳ ಆಕ್ಷೇಪಗಳು
* ಅನುಮತಿ ಇಲ್ಲದೆ ಸರ್ವೆ ಮಾಡಲು ಬಿಟ್ಟಿರುವುದು ಅರಣ್ಯ ಇಲಾಖೆ ತಪ್ಪಲ್ಲವೇ?
*ಯೋಜನೆ ಮಂಜೂರಾಗದೆ ಬಜೆಟ್‌ನಲ್ಲಿ ರಸ್ತೆಗೇ ₹56 ಕೋಟಿ ಮೀಸಲಿಟ್ಟಿದ್ದು ಹೇಗೆ?
* ಪಶ್ಚಿಮಘಟ್ಟ ಹಾನಿಪಡಿಸುವ ಯೋಜನೆ ಜಾರಿಗೆ ಸಂಸದರು ಮುಂದಾಗಿರುವುದು ಸರಿಯಲ್ಲ
* ತೂಗು ಸೇತುವೆ ನಿರ್ಮಿಸಿದರೂ ಬಾಳೂರು ಮೀಸಲು ಅರಣ್ಯ ಬಲಿ ಖಚಿತ
* ‘ಪಶ್ಚಿಮಘಟ್ಟ ಉಳಿಸಿ’ ಚಳವಳಿ ಕಟ್ಟುತ್ತೇವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.