ADVERTISEMENT

ರಾಜ್ಯಗಳ ಮೇಲೆ ಕೇಂದ್ರ ಸವಾರಿ

ಜಾನುವಾರು ಮಾರಾಟ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ರಾಜ್ಯಗಳ ಮೇಲೆ ಕೇಂದ್ರ ಸವಾರಿ
ರಾಜ್ಯಗಳ ಮೇಲೆ ಕೇಂದ್ರ ಸವಾರಿ   

ಬೆಂಗಳೂರು: ‘ಜಾನುವಾರು ಮಾರಾಟದ ಮೇಲೆ ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ  ಅಧಿಸೂಚನೆ ಹೊರಡಿಸಿರುವುದು ರಾಜ್ಯ ಸರ್ಕಾರಗಳ ಅಧಿಕಾರದ ಮೇಲೆ ಮಾಡಿರುವ ಆಕ್ರಮಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಗೋಹತ್ಯೆ  ನಿಷೇಧ  ರಾಜ್ಯಗಳ ನಿರ್ಧಾರಕ್ಕೆ ಬಿಟ್ಟ ವಿಷಯ. ನಾನು ಯಾವ ಬಟ್ಟೆ ತೊಡಬೇಕು, ಯಾವ ಆಹಾರ ಸೇವಿಸಬೇಕು ಎಂಬುದು ನನ್ನ ಹಕ್ಕು. ಅದರ ಮೇಲೆ ನಿರ್ಬಂಧ ವಿಧಿಸುವುದು  ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂದು ಅವರು ವಿಶ್ಲೇಷಿಸಿದರು.

ADVERTISEMENT

‘ದುಡಿಯುವ ಸಾಮರ್ಥ್ಯವಿಲ್ಲದ ಜಾನುವಾರು ರೈತರಿಗೆ ಹೊರೆಯಾಗಲಿವೆ. ಪ್ರತಿನಿತ್ಯ ಪ್ರತಿ ಜಾನುವಾರಿಗೆ ಕನಿಷ್ಠ 10 ಕೆಜಿ ಮೇವು ಬೇಕಾಗುತ್ತದೆ. ಇದರಿಂದ ಕೃಷಿ ಕ್ಷೇತ್ರಕ್ಕೂ  ಹಿನ್ನೆಡೆ ಆಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಿಲ್ಲ’ ಎಂದರು.

‘ಸಂಕ್ರಾಂತಿ ಮತ್ತು ದೀಪಾವಳಿ ಹಬ್ಬದ ದಿನ ನಾವೂ ಗೋವುಗಳನ್ನು ಪೂಜಿಸುತ್ತೇವೆ. ನಮಗೂ ಅವುಗಳ ಬಗ್ಗೆ ಗೌರವ ಇದೆ. ಗೋಹತ್ಯೆ ನಿಷೇಧದಿಂದ ಆಗುವ ದುಷ್ಪರಿಣಾಮದ ಅರಿವೂ ಇದೆ’ ಎಂದರು.

‘ನಾವು ಹಿಂದೂಗಳಲ್ಲವೇ, ಮುಸ್ಲಿಮರು ಹಾಗೂ ಕ್ರೈಸ್ತರು ಹಿಂದೂಸ್ತಾನಿಗಳಲ್ಲವೇ. ಭಾವನಾತ್ಮಕ ವಿಷಯಗಳನ್ನು ಬಿಜೆಪಿ ಪದೇ ಪದೇ ಕೆದಕಿ ಜನರನ್ನು ದಾರಿ ತಪ್ಪಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದ 100 ದಿನದಲ್ಲಿ ಕಪ್ಪುಹಣ ವಾಪಸ್ ತಂದು ಎಲ್ಲ ಬಡವರ ಖಾತೆಗೆ ₹ 15 ಲಕ್ಷ ಜಮೆ ಮಾಡುವುದಾಗಿ ಮೋದಿ ಭರವಸೆ ನೀಡಿದ್ದರು. ಆದರೆ, ಹದಿನೈದು ರೂಪಾಯಿ ಕೂಡ ಬರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಈವರೆಗೆ 4 ಲಕ್ಷ ಉದ್ಯೋಗ ಮಾತ್ರ ಸೃಷ್ಟಿಯಾಗಿದೆ ಎಂದು ಅವರು ಟೀಕಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಶರ್ಟಿನ ಎರಡೂ ಜೇಬಿಗೆ ಕೈ ಹಾಕಿಕೊಂಡು ಮಿಷನ್–150 ಕನಸು ಕಾಣುತ್ತಿದ್ದಾರೆ.  ಕಾಂಗ್ರೆಸ್‌ ಶಕ್ತಿಯನ್ನು ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆಯಲ್ಲೇ ತೋರಿಸಿದ್ದೇವೆ. ಈಗ ಏನು ಹೇಳ್ತಿಯಪ್ಪ ಯಡಿಯೂರಪ್ಪ’ ಎಂದರು.

15ರಂದು ವಿಚಾರಣೆ
ನವದೆಹಲಿ: 
ಕಸಾಯಿಖಾನೆಗೆ ಮಾರುಕಟ್ಟೆಯಿಂದ ಜಾನುವಾರು ಖರೀದಿಸುವುದಕ್ಕೆ ನಿಷೇಧ ಹೇರುವ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಇದೇ 15ರಂದು ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ತಡೆ ನೀಡದ ಕೇರಳ  ಹೈಕೋರ್ಟ್‌ (ತಿರುವನಂತಪುರ ವರದಿ):  ಕಸಾಯಿಖಾನೆಗೆ ಮಾರುಕಟ್ಟೆಯಿಂದ ಜಾನುವಾರು ಖರೀದಿ ನಿಷೇಧ ನಿಯಮ ಜಾರಿಗೆ ತಡೆ ನೀಡಲು ಕೇರಳ ಹೈಕೋರ್ಟ್‌ ನಿರಾಕರಿಸಿದೆ.

ಸಚಿವ ಡಿ.ಕೆ. ಶಿವಕುಮಾರ್‌  ಕೈಗೆ ಕತ್ತಿ ಕೊಟ್ಟ ಸಿ.ಎಂ

ಯುವ ಕಾಂಗ್ರೆಸ್‌ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೇಟ ತೊಡಿಸಿ, ಕತ್ತಿ ನೀಡಿ ಗೌರವಿಸಿದರು.  ಬಳಿಕ ದೊಡ್ಡ ಹೂವಿನ ಹಾರವೊಂದನ್ನು ಹಾಕುವಾಗ ಕಾರ್ಯಕರ್ತರು ಪಕ್ಕದಲ್ಲೇ ಇದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನೂ ಹಾರದೊಳಗೆ ನಿಲ್ಲುವಂತೆ ಕೈ ಹಿಡಿದು ಎಳೆದರು. ಆದರೂ ಶಿವಕುಮಾರ್‌ ಹೊರಗೇ ನಿಂತಿದ್ದರು. 

ಇದನ್ನು ಗಮನಿಸಿದ ಸಿದ್ದರಾಮಯ್ಯ ತಮ್ಮ ಕೈಲಿದ್ದ ಕತ್ತಿಯನ್ನು ಶಿವಕುಮಾರ್‌ ಅವರ ಕೈಗೆ ಕೊಟ್ಟು, ಹಾರದೊಳಕ್ಕೆ ಬರುವಂತೆ ಕೈಸನ್ನೆ ಮಾಡಿದರು. ಬಳಿಕ ಅವರು ಹಾರದೊಳಗೆ ತಲೆ ಹಾಕಿ ಕತ್ತಿ ಝಳಪಿಸಿದರು.

‘ಭಿನ್ನಮತ ಸಹಿಸುವುದಿಲ್ಲ’: ‘ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಭಿನ್ನಮತೀಯ ಚಟುವಟಿಕೆಗಳನ್ನು  ಸಹಿಸುವುದಿಲ್ಲ’ ಎಂದು ಜಿ. ಪರಮೇಶ್ವರ ಎಚ್ಚರಿಸಿದರು.

* ಮುಸ್ಲಿಮರು, ಕ್ರೈಸ್ತರು ಮತ್ತು ದಲಿತರನ್ನು  ದೂರ ಇಟ್ಟು  ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್ ಎನ್ನುವುದು ಢೋಂಗಿ ರಾಜಕಾರಣ

-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.