ಬೆಂಗಳೂರು: ರಾಜ್ಯದ ಎಲ್ಲ 28 ಲೋಕ ಸಭಾ ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಒಂದೇ ದಿನ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆ ಇದೇ 19ರಿಂದ ಆರಂಭವಾಗಲಿದೆ.16ರಂದು ಮತಗಳ ಎಣಿಕೆ ನಡೆಯಲಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣಾ ನೀತಿ ಸಂಹಿತೆ ಬುಧವಾರದಿಂದಲೇ ಜಾರಿಯಾಗಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ವರಿಗೆ ಈ ವಿಷಯವನ್ನು ತಿಳಿಸಲಾಗಿದೆ ಎಂದರು.
28 ಕ್ಷೇತ್ರಗಳ ಪೈಕಿ ಗುಲ್ಬರ್ಗ, ವಿಜಾಪುರ, ಚಿತ್ರದುರ್ಗ, ಚಾಮರಾಜ ನಗರ ಮತ್ತು ಕೋಲಾರ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಹಾಗೂ ರಾಯಚೂರು, ಬಳ್ಳಾರಿ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ.
ಸದ್ಯ 54,261 ಮತಗಟ್ಟೆಗಳಿವೆ. ಇನ್ನೂ ಒಂದು ಸಾವಿರ ಮತಗಟ್ಟೆಗಳು ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸಾವಿರ ಪುರುಷರಿಗೆ 970 ಮಹಿಳೆಯರಿದ್ದಾರೆ. ಮತದಾರರ ಪಟ್ಟಿಯಲ್ಲಿ ಸಾವಿರ ಪುರುಷರಿಗೆ ಮಹಿಳಾ ಮತದಾರರ ಸಂಖ್ಯೆ 960 ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 4,36,52,706 ಮತದಾರರು ಇದ್ದರು. ಅದಕ್ಕೆ ಹೋಲಿಸಿದರೆ ಈಗ ಶೇ 2ರಷ್ಟು ಮತದಾರರು ಹೆಚ್ಚಾಗಿದ್ದಾರೆ. 8,04,786 ಮತದಾರರು ಹೆಸರು ನೋಂದಾಯಿಸಿದ್ದಾರೆ.
ಮೇಯರ್ ಚುನಾವಣೆ: ಕೆಲ ಮಹಾನಗರ ಪಾಲಿಕೆಗಳ ಮೇಯರ್ ಚುನಾವಣೆ ನಡೆಸಲು ಅಡ್ಡಿ ಇಲ್ಲ. ಆದರೂ ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದಿಂದ ಸ್ಪಷ್ಟನೆ ಪಡೆಯಲಾಗುವುದು ಎಂದು ಅನಿಲ್‌ಕುಮಾರ್ ಝಾ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೆಸರು ಇದ್ದರಷ್ಟೇ ಮತ ಹಕ್ಕು
ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ ಇದ್ದರಷ್ಟೇ ಸಾಲದು. ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕು. ಹೆಸರು ಇದೆಯೇ ಎಂಬುದನ್ನು ಆಯೋಗದ ವೆಬ್‌ಸೈಟ್‌ನಲ್ಲಿ ನೋಡಬಹುದು. ಅಲ್ಲದೆ ಎಸ್ಎಂಎಸ್ ಮೂಲಕವೂ ತಿಳಿಯಬಹುದು.
ವೆಬ್‌ಸೈಟ್ : ceokarnataka.kar.nic.in.
ಅಥವಾ ಮೊಬೈಲ್‌ನಲ್ಲಿ karepic<space> ಎಂದು ಟೈಪ್ ಮಾಡಿ ಮತದಾರರ ಗುರುತು ಚೀಟಿ ಸಂಖ್ಯೆ ನಮೂದಿಸಿ 9243355223ಕ್ಕೆ ಎಸ್‌ಎಂಎಸ್ ಕಳುಹಿಸಿದರೆ ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎಂಬ ಮಾಹಿತಿ ಲಭ್ಯವಾಗುತ್ತದೆ.
ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಆರಂಭಿಸಿದ್ದು, 1950ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.