ADVERTISEMENT

ರಾಜ್ಯ ಬಂದ್‌ಗೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಬಂದ್ ಹಿನ್ನೆಲೆಯಲ್ಲಿ ಅಂಕೋಲಾದಲ್ಲಿ ಅಂಗಡಿಗಳು ಮುಚ್ಚಿದ್ದವು
ಬಂದ್ ಹಿನ್ನೆಲೆಯಲ್ಲಿ ಅಂಕೋಲಾದಲ್ಲಿ ಅಂಗಡಿಗಳು ಮುಚ್ಚಿದ್ದವು   

ಬೆಂಗಳೂರು: ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ನಡೆದ ಬಿಜೆಪಿ ಬೆಂಬಲಿತ ಬಂದ್‌ಗೆ ರಾಜ್ಯದಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವಡೆ ಅಂಗಡಿ, ಹೋಟೆಲ್‌ ಬಲವಂತವಾಗಿ ಮುಚ್ಚಿಸಿದ ಮತ್ತು ಬಸ್‌ ಸಂಚಾರ ಸ್ಥಗಿತಗೊಳಿಸಿದ ಘಟನೆ ನಡೆಯಿತು. ಬಸ್‌ಗಳ ಮೇಲೆ ಕಲ್ಲು ತೂರಾಟ ಹೊರತುಪಡಿಸಿದರೆ ಬಹುತೇಕ ಕಡೆ ಶಾಂತಿಯುತವಾಗಿತ್ತು. ಕೆಲವಡೆ ಶಾಲೆಗಳಿಗೆ ರಜೆ ನೀಡಲಾಗಿತ್ತು. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ತಹಶೀಲ್ದಾರ್‌ ಕಚೇರಿ, ಬ್ಯಾಂಕುಗಳ ಕಚೇರಿಗಳು ಮತ್ತು ಅಂಗಡಿಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಧಾರವಾಡ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿಯ ಮೂರು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಶಾಸಕ ಸಿದ್ದು ನ್ಯಾಮಗೌಡ ಅವರ ನಿಧನದ ಕಾರಣ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಬಂದ್‌ ಇರಲಿಲ್ಲ. ಹಾವೇರಿ, ಗದಗ, ಉತ್ತರ ಕನ್ನಡ, ಬಳ್ಳಾರಿ ಜಿಲ್ಲೆಗಳಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿರಸಿಯಲ್ಲೂ ಬಂದ್‌ ನಡೆಯಲಿಲ್ಲ. ಯಾದಗಿರಿ ನಗರದಲ್ಲಿ ಬಿಜೆಪಿ ಶಾಸಕ ವೆಂಕಟರಡ್ಡಿ ಮುದ್ನಾಳ, ಬಲವಂತವಾಗಿ ಹೋಟೆಲ್ ಹಾಗೂ ಬಸ್‌ ಸಂಚಾರ ಬಂದ್‌ ಮಾಡಿಸಿದರು.

ADVERTISEMENT

ಬಳಿಕ ಬಸ್‌ ಡಿಪೊಕ್ಕೆ ತೆರಳಿದ ಮುದ್ನಾಳ, ‘ಬಂದ್ ಕಾರಣ ಸಂಜೆ 4 ಗಂಟೆ ತನಕ ಬಸ್ ಸಂಚಾರ ಸ್ಥಗಿತಗೊಳಿಸಬೇಕು. ಯಾವುದೇ ಅನಾಹು
ತವಾದರೆ ನೀವೇ ಹೊಣೆಗಾರರಾಗುತ್ತೀರಿ’ ಎಂದು ಮ್ಯಾನೇಜರ್‌ಗೆ ಎಚ್ಚರಿಕೆ ನೀಡಿದರು. ಹೀಗಾಗಿ, ಅಧಿಕಾರಿಗಳು ಬಸ್ ಸಂಚಾರ ಸ್ಥಗಿತಗೊಳಿಸಿದರು.

ಚಿತ್ರದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪದ ಯೂನಿಯನ್‌ ಪಾರ್ಕ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ ಮೇಲೆ ದಾಳಿ ನಡೆಸಿದ ಸುಮಾರು
35 ಜನರ ಗುಂಪು ದಾಂಧಲೆನಡೆಸಿದೆ. ಬಾಗಿಲು ಮುಚ್ಚುವಂತೆ ಕ್ಯಾಂಟೀನ್‌ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿತು.

ಕೆಲವರು ಕ್ಯಾಂಟೀನ್‌ನ ಪ್ರವೇಶ ದ್ವಾರವನ್ನು ಕೈಯಿಂದ ಗುದ್ದಿ ಗಾಜು ಪುಡಿ ಮಾಡಿದರು. ಸರ್ಕಾರದವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪು ಚದುರಿಸಿದರು.

ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಿರಿಯೂರು, ಹೊಸದುರ್ಗ, ಚಳ್ಳಕೆರೆ ಸೇರಿಬಹುತೇಕ ಕಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಖ್ಯ ಕಾರ್ಯದರ್ಶಿಗೆ ವಾಟಾಳ್ ಮನವಿ: ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಆಗ್ರಹಿಸಿ ರಾಜ್ಯಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಒಕ್ಕೂಟ ಮನವಿ ಸಲ್ಲಿಸಿತು.

ಬಳಿಕ ಮಾತನಾಡಿದ ವಾಟಾಳ್, ‘ರಾಜ್ಯದಲ್ಲಿ ಮಳೆ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಸಾಲ ಪಾವತಿಸಲಾಗದೆ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು. ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಸಾ.ರಾ. ಗೋವಿಂದ್, ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ ಇದ್ದರು.

ಡಿವೈಎಸ್ಪಿಯನ್ನು ಎಳೆದಾಡಿದ ‘ಕರಡಿ‘

ಕೊಪ್ಪಳ: ಮೆರವಣಿಗೆ ಅನುಮತಿ ಪಡೆದಿಲ್ಲ ಎಂದು ಪೊಲೀಸರು ಸಂಸದ ಸಂಗಣ್ಣ ಕರಡಿ ಹಾಗೂ ಬಿಜೆಪಿ ಮುಖಂಡರನ್ನು ತಡೆದು, ಆಟೊಗೆ ಅಳವಡಿಸಿದ್ದ ಧ್ವನಿವರ್ಧಕ ಕಿತ್ತುಕೊಂಡರು.

ಇದರಿಂದ ಆಕ್ರೋಶಗೊಂಡ ಸಂಸದ ಹಾಗೂ ಕಾರ್ಯಕರ್ತರು ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಠಾಣೆಯ ಬಾಗಿಲುಗಳನ್ನು ಬಂದ್ ಮಾಡಿದ ಪೊಲೀಸರು ಸಂಸದರನ್ನು ಹೊರಗೆ ತಳ್ಳಿದರು. ಇದರಿಂದ ಕುಪಿತಗೊಂಡ ಸಂಸದ ಕರಣಿ ಸಂಗಣ್ಣ, ಡಿವೈಎಸ್ಪಿ ಎಸ್‌.ಎಂ. ಸಂದಿಗವಾಡ ಅವರನ್ನು ಹಿಡಿದುಕೊಂಡು ಎಳೆದಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಪೊಲೀಸರು ಗದ್ದಲವನ್ನು ನಿಯಂತ್ರಣಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.