ADVERTISEMENT

ರಾಜ್ಯ ರೈತ ಸಂಘಕ್ಕೆ ನೂತನ ಸಾರಥಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST
ರಾಜ್ಯ ರೈತ ಸಂಘಕ್ಕೆ ನೂತನ ಸಾರಥಿ
ರಾಜ್ಯ ರೈತ ಸಂಘಕ್ಕೆ ನೂತನ ಸಾರಥಿ   

ಚಿತ್ರದುರ್ಗ: ನಗರದ ರೈತ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ರಾಯಚೂರು ಜಿಲ್ಲೆಯ ಚಾಮರಸ ಮಾಲಿ ಪಾಟೀಲರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಸಂಘದ ಹಿರಿಯ ಮುಖಂಡರಾದ ಕೆ.ಎಸ್. ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಎಚ್.ಆರ್. ಬಸವರಾಜಪ್ಪ ಅವರು 1 ವರ್ಷಗಳ ಕಾಲ ಯಾವುದೇ ಪದಾಧಿಕಾರಿ ಹುದ್ದೆಯನ್ನು ಸ್ವೀಕರಿಸದೆ ಸಂಘಟನೆ ಬಲಪಡಿಸಲು ಶ್ರಮಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಆದರೆ, ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಅವರ ಬೆಂಬಲಿಗರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇದರಿಂದ ಮತ್ತೆ ರೈತ ಸಂಘದ ಬಣಗಳ ನಡುವೆ ಇರುವ ಭಿನ್ನಾಭಿಪ್ರಾಯ ಮುಂದುವರಿಯುವ ಲಕ್ಷಣಗಳು ಗೋಚರಿಸಿವೆ.

24 ಜಿಲ್ಲೆಗಳ ಜಿಲ್ಲಾ ಪದಾಧಿಕಾರಿಗಳು ಹಾಗೂ ರಾಜ್ಯದ ಹಿರಿಯ ಪದಾಧಿಕಾರಿಗಳ ಕಾಯಂ ಆಹ್ವಾನಿತರು ಈ ರಾಜ್ಯ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸೋಮಗುದ್ದು ರಂಗಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
`ಈ ಹಿಂದಿನ ರಾಜ್ಯ ಸಮಿತಿಯನ್ನು ವಿಸರ್ಜಿಸಿ ಹೊಸದಾಗಿ ರಾಜ್ಯ ಪದಾಧಿಕಾರಿಗಳನ್ನು ನೇಮಕ ಮಾಡಬೇಕು ಎನ್ನುವುದು ಸಮಿತಿ ತೀರ್ಮಾನವಾಗಿತ್ತು.

ಪದಾಧಿಕಾರಿಗಳ ಆಯ್ಕೆ ರಾಜ್ಯ ಸಮಿತಿಯಲ್ಲೇ ನಡೆಯಬೇಕೆಂಬುದು ಸಂಘದ ನಿರ್ಧಾರವಾದ್ದರಿಂದ ಹಿಂದೆ ಮುರುಘಾ ಮಠದಲ್ಲಿ ಶಿವಮೂರ್ತಿ ಮುರುಘಾ ಶರಣರ ಸಮ್ಮುಖ ರಚಿಸಲಾಗಿದ್ದ ಸಮಿತಿಗೆ ವಿರೋಧ ವ್ಯಕ್ತವಾಯಿತು. ಆ ಸಮಿತಿಯನ್ನು ಒಪ್ಪದೆ ತಿರಸ್ಕರಿಸಲಾಗಿದೆ.
 
ಆದರೆ, ಶಿವಮೂರ್ತಿ ಮುರುಘಾ ಶರಣರ ರೈತಪರ ಕಾಳಜಿ, ರೈತ ಸಂಘದ ಒಗ್ಗೂಡುವಿಕೆ ಮಾಡಿದ ಪ್ರಯತ್ನವನ್ನು ಸ್ವಾಗತಿಸುತ್ತೇವೆ~ ಎಂದು ನೂತನ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ರಾಜ್ಯ ಸಮಿತಿ ನಿರ್ಣಯಗಳನ್ನು ಸ್ವಾಮೀಜಿಗೆ ತಿಳಿಸದೆ ತಪ್ಪು ಮಾಡಿದ್ದೇವೆ. 5-6 ಜನ ಸೇರಿ ನಿರ್ಣಯ ಕೈಗೊಳ್ಳುವುದು ತಪ್ಪು. ಸ್ವಾಮೀಜಿ ಅವರಿಗೆ ಮಾಹಿತಿ ನೀಡಿ ಮನವರಿಕೆ ಮಾಡಿದ್ದೇವೆ ಎಂದು ವಿವರಿಸಿದರು. ನೂತನ ಅಧ್ಯಕ್ಷ ಚಾಮರಸ ಪಾಲಿ ಪಾಟೀಲ ಮಾತನಾಡಿ, ರೈತ ಚಳವಳಿ ಅನೇಕ ಸವಾಲುಗಳಿವೆ.

100 ತಾಲ್ಲೂಕುಗಳಲ್ಲಿ ಬರ ಇದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯ ತಳೆದಿವೆ. ಈ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾಗಿ ಚಳವಳಿ ಕಟ್ಟುವುದೇ ನನ್ನ ಉದ್ದೇಶ.

ನೂತನ ಪದಾಧಿಕಾರಿಗಳ ವಿವರ: ಚಾಮರಸ ಮಾಲಿ ಪಾಟೀಲ (ಅಧ್ಯಕ್ಷ), ಸೋಮಗುದ್ದು ರಂಗಸ್ವಾಮಿ (ಗೌರವ ಅಧ್ಯಕ್ಷ), ಚುಕ್ಕಿ ನಂಜುಂಡಸ್ವಾಮಿ, ಬಿ.ಸಿ. ಪಾಟೀಲ್(ಕಾರ್ಯಾಧ್ಯಕ್ಷರು), ಬಡಗಲಪುರ ನಾಗೇಂದ್ರ (ಪ್ರಧಾನ ಕಾರ್ಯದರ್ಶಿ), ವೀರಸಂಗಯ್ಯ, ವಿ. ಅಶೋಕ್, ಡಾ.ವೆಂಕಟರೆಡ್ಡಿ, ಅನಸೂಯಮ್ಮ, ಲಕ್ಷ್ಮೀನಾರಾಯಣ (ಎಲ್ಲರೂ ಉಪಾಧ್ಯಕ್ಷರು), ನಂದಿನಿ ಜಯರಾಂ (ಮಹಿಳಾ ಘಟಕದ ರಾಜ್ಯ ಸಂಚಾಲಕಿ) ಅವರನ್ನು ನೇಮಕ ಮಾಡಲಾಗಿದೆ.

ಇದರ ಜತೆಗೆ ಐದು ವಿಭಾಗಗಳಿಗೆ ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಗುಲ್ಬರ್ಗ ವಿಭಾಗಕ್ಕೆ ಬಸವರಾಜ ರಾಚರೆಡ್ಡಿ, ಚಿತ್ರದುರ್ಗ ವಿಭಾಗಕ್ಕೆ ಗೋವಿಂದರಾಜ್, ಮೈಸೂರು ವಿಭಾಗಕ್ಕೆ ಜಿ.ಟಿ. ರಾಮಸ್ವಾಮಿ, ಬೆಳಗಾವಿ ವಿಭಾಗಕ್ಕೆ ಶಿವನಗೌಡ ಎನ್. ಗೌಡರ ಅವರನ್ನು ನೇಮಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.