ADVERTISEMENT

ರಾಜ್ಯ ವಿರೋಧಿಸಲಿ: ಸಿದ್ಧಲಿಂಗಯ್ಯ

ತಮಿಳುನಾಡಿನಲ್ಲಿ ಕನ್ನಡಿಗರಿಗೂ ಪ್ರಥಮ ಭಾಷೆ ತಮಿಳು ಬೋಧನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2015, 19:30 IST
Last Updated 14 ಜೂನ್ 2015, 19:30 IST

ಹುಬ್ಬಳ್ಳಿ: ‘ತಮಿಳುನಾಡಿನಲ್ಲಿ ಕನ್ನಡಿಗರೂ ಪ್ರಥಮ ಭಾಷೆಯಾಗಿ ತಮಿಳನ್ನು ಕಲಿಯಬೇಕು ಎಂದು ಅಲ್ಲಿನ ಸರ್ಕಾರ ಆದೇಶಿಸಿರುವುದು ದುರದೃಷ್ಟಕರ. ರಾಜ್ಯ ಸರ್ಕಾರ ಈ ನಡೆಯನ್ನು ವಿರೋಧಿಸಿ, ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಲಿಯುವಂತೆ ಮಾಡಬೇಕು’ ಎಂದು ಸಾಹಿತಿ ಸಿದ್ಧಲಿಂಗಯ್ಯ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ತಮಿಳುನಾಡಿನಲ್ಲಿ 1.25 ಕೋಟಿ ಕನ್ನಡಿಗರಿದ್ದಾರೆ. ಅವರೆಲ್ಲರೂ ಪ್ರಥಮ ಭಾಷೆಯನ್ನಾಗಿ ತಮಿಳು ಕಲಿಯುವಂತೆ ಅಲ್ಲಿನ ಸರ್ಕಾರ ಆದೇಶಿಸಿದೆ.

ಅಲ್ಲದೆ, ಮಾತೃಭಾಷೆ ಕನ್ನಡವಾಗಿದ್ದರೂ ತಮಿಳನ್ನೇ ಮಾತೃಭಾಷೆಯನ್ನಾಗಿ ನಮೂದಿಸಬೇಕು ಎಂದು ತಮಿಳುನಾಡು ಸರ್ಕಾರ ಕನ್ನಡಿಗರ ಮೇಲೆ ಒತ್ತಡ ಹೇರುತ್ತಿದೆ. ಅಲ್ಲಿನ ಕನ್ನಡಿಗರು ಆತಂಕದಲ್ಲಿದ್ದಾರೆ. ಅವರಿಗೆ ಧೈರ್ಯ ತುಂಬುವ, ಕನ್ನಡವನ್ನು ರಕ್ಷಿಸುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಬೇಕು’ ಎಂದರು.

‘ನಮ್ಮ ರಾಜ್ಯದಲ್ಲಿ ಆಯಾ ಭಾಷಿಕರು ತಮ್ಮ ಭಾಷೆಯನ್ನೇ ಪ್ರಥಮ ಭಾಷೆಯನ್ನಾಗಿ ಕಲಿಯಲು ಅವಕಾಶ ನೀಡಲಾಗಿದೆ. ಆದರೆ ತಮಿಳುನಾಡು ಸರ್ಕಾರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ’ ಎಂದು ಅವರು ದೂರಿದರು.

ಗೋವಾ ಕನ್ನಡಿಗರ ಹಿತರಕ್ಷಣೆ: ‘ಗೋವಾದಲ್ಲಿ ಇರುವ ಕನ್ನಡಿಗರು ಬೀದಿ ಪಾಲಾಗುತ್ತಿದ್ದಾರೆ. ಸಾವಿರಾರು ಕನ್ನಡಿಗರು ವಸತಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅವರನ್ನು ಒಕ್ಕಲೆಬ್ಬಿಸುತ್ತಿರುವುದು ದುರದೃಷ್ಟಕರ. ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡುವ ಹಕ್ಕು ಕನ್ನಡಿಗರಿಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಸುಪ್ರೀಂ ಕೋರ್ಟ್‌ ಮಾತೃಭಾಷೆಯಲ್ಲಿ ಶಿಕ್ಷಣ ಕಡ್ಡಾಯವಲ್ಲ ಎಂದು ತೀರ್ಪು ನೀಡಿರುವುದು ದುರದೃಷ್ಟಕರ. ಈ ತೀರ್ಪು ಭಾರತೀಯ ಭಾಷೆಗಳ ಬೆಳವಣಿಗೆಗೆ ಹೇಗೆ ಅಡ್ಡಿಯಾಗುತ್ತದೆ ಎಂಬ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು’ ಎಂದು ಸಿದ್ಧಲಿಂಗಯ್ಯ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.