ADVERTISEMENT

ರಾಮದಾಸ್‌ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2014, 20:45 IST
Last Updated 11 ಫೆಬ್ರುವರಿ 2014, 20:45 IST

ಮೈಸೂರು: ಮಾಜಿ ಸಚಿವ ರಾಮದಾಸ್ ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿ­ದ್ದಾರೆ ಎನ್ನಲಾಗಿದ್ದು, ಅವರನ್ನು ಇಲ್ಲಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿ­ಸ­ಲಾಗಿದೆ.

ಪ್ರೇಮಕುಮಾರಿ ಎಂಬವರು ಮಂಗಳ­ವಾರ ಮಧ್ಯಾಹ್ನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಮದಾಸ್ ಮನ­ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ದಟ್ಟ ವದಂತಿ ಹರಡಿತು. ವೈದ್ಯ­ರಾಗಲಿ, ಪೊಲೀಸರಾಗಲಿ ತಡರಾತ್ರಿ­ಯವರೆಗೂ ಖಚಿತಪಡಿಸಿಲ್ಲ. ಕೆಲವು ಮೂಲಗಳು ವಿಷ ಸೇವಿಸಿದ್ದಾರೆ ಎಂದು ಹೇಳಿದರೆ; ಮತ್ತೆ ಕೆಲವರು ನೇಣು ಹಾಕಿ ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳುತ್ತಿವೆ.

ಆದರೆ, ಆಸ್ಪತ್ರೆ ಮುಂದೆ ಮಂಗಳ ವಾರ ತಡರಾತ್ರಿ ಭಾರಿ ಜನಜಂಗುಳಿ ನೆರೆದಿದ್ದು, ಕಾರ್ಯಕರ್ತರು ಆಸ್ಪತ್ರೆ ಯತ್ತ ದೌಡಾಯಿಸಿದರು. ಕೆಲವರು ಇದಕ್ಕೆಲ್ಲಾ ವಿದ್ಯುನ್ಮಾನ ಮಾಧ್ಯಮ ಗಳೇ ಕಾರಣ ಎಂದು ಪತ್ರಕರ್ತ ರೊಂದಿಗೆ ಮಾತಿನ ಚಕಮಕಿ ನಡೆಸಿದ ಪ್ರಸಂಗವೂ ನಡೆಯಿತು.

ಆಸ್ಪತ್ರೆ ಸುತ್ತ ಮುತ್ತ ಪೊಲೀಸ್ ಬಂದೋಬಸ್ತ್‌ ಬಿಗಿ ಗೊಳಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ತುಕಡಿಗಳನ್ನೂ ನಿಯೋಜಿಸ ಲಾಗಿದೆ. ರಾಮದಾಸ್ ಅವರ ಸಹೋದರ ಶ್ರೀಕಾಂತ್ ಆಸ್ಪತ್ರೆಯಲ್ಲಿ ಇದ್ದರು. ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಆಸ್ಪತ್ರೆಗೆ ಭೇಟಿ ನೀಡಿ ರಾಮದಾಸ್ ಯೋಗಕ್ಷೇಮ ವನ್ನು ವಿಚಾರಿಸಿದರು.

ಬಿಜೆಪಿ ಮೈಸೂರು ನಗರ ಘಟಕದ ಅಧ್ಯಕ್ಷ ಮಾರುತಿರಾವ್ ಪವಾರ್ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

‘ರಾಮದಾಸ್ ತೀವ್ರ ನಿಗಾ ಘಟಕ ದಲ್ಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಹರೀಶ್‌ ನಾಯಕ್ ತಿಳಿಸಿದ್ದಾರೆ. ಆದರೆ, ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರ ಬಹುದು ಎಂದು ವೈದ್ಯರು ಶಂಕಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ತಪಾಸಣೆ ಗಳನ್ನು ಮಾಡುತ್ತಿದ್ದಾರೆ. ಮಹಿಳೆಯ ಆರೋಪವನ್ನು ಜನರು ಸುಲಭವಾಗಿ ನಂಬುತ್ತಾರೆ. ಹಾಗಾಗಿ, ರಾಮದಾಸ್ ಅವರು ಮನ ನೊಂದಿರಬಹುದು.

ಅವರ ತೇಜೋವಧೆ ಮಾಡಲೆಂದೇ ಇಡೀ ಪ್ರಕರಣವನ್ನು ಹೆಣೆಯಲಾಗಿದೆ. ನಾಲ್ಕು ವರ್ಷಗಳಿಂದ ಸುಮ್ಮನಿದ್ದ ಮಹಿಳೆ ಏಕಾಏಕಿ ಚುನಾವಣೆ ಸಮಯ ದಲ್ಲಿ ಮಾಧ್ಯಮಗಳ ಮುಂದೆ ಬಂದಿ ರುವುದು ರಾಮದಾಸ್ ಅವರ ಗೌರವಕ್ಕೆ ಚ್ಯುತಿ ತರಲೆಂದೇ ಮಾಡಿದಂತಿದೆ. ಮಹಿಳೆಯ ಫೋನ್‌ನಲ್ಲಿ ಪತ್ರಕರ್ತರಿಗೆ ಕೇಳಿಸಿದ ಧ್ವನಿಯ ಬಗೆಗೂ ತನಿಖೆಯಾಗಬೇಕು’ ಎಂದು ಅವರು ಆಗ್ರಹಿಸಿದರು.

ಮಹಿಳೆ ಆರೋಪಗಳು: ‘ಮಾಜಿ ಸಚಿವ ರಾಮದಾಸ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದು, ದೈಹಿಕ ಸಂಬಂಧ ಬೆಳೆಸಿ ಮೋಸ ಮಾಡಿದ್ದಾರೆ’ ಎಂದು ಪ್ರೇಮಕುಮಾರಿ ಎಂಬಾಕೆ ಆರೋಪ ಮಾಡಿದ್ದರು. ‘ತುಮಕೂರು ಜಿಲ್ಲಾಧಿ ಕಾರಿ ಕಚೇರಿಯಲ್ಲಿ ದ್ವಿತೀಯದರ್ಜೆ ಗುಮಾಸ್ತೆಯಾಗಿರುವ ತಾನು ವಿಧವೆಯಾಗಿದ್ದು, ಎರಡು ಮಕ್ಕಳಿವೆ. ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿದೆ. ತರೀಕೆರೆಯಿಂದ ಮೈಸೂರಿಗೆ ವರ್ಗಾವಣೆ ಮಾಡಿ ಎಂದು 2009 ರಲ್ಲಿ ರಾಮದಾಸ್ ಅವರನ್ನು ಕೋರಿದೆ. ಅಲ್ಲಿಂದ ನನಗೆ ಲೈಂಗಿಕ ಕಿರುಕುಳ ಆರಂಭವಾಯಿತು. 2012 ರಲ್ಲಿ ನನಗೆ ಇಷ್ಟ ಇಲ್ಲದಿದ್ದರೂ ಮೈಸೂರಿನಿಂದ ತುಮಕೂರಿಗೆ ವರ್ಗಾವಣೆ ಮಾಡಿಸಿದರು. ಅನಧಿಕೃತವಾಗಿ ನನ್ನನ್ನು ಮದುವೆಯಾಗಿದ್ದಾರೆ’ ಎಂದು ಹೇಳಿಕೊಂಡ ಆಕೆ, ‘ನನ್ನನ್ನು ಅಧಿಕೃತವಾಗಿ ಹೆಂಡತಿಯಾಗಿ  ಒಪ್ಪಿಕೊಳ್ಳಬೇಕು’ ಎಂದು ಆಗ್ರಹಿಸಿದ್ದರು.

‘ಸದ್ಯ ನಾನು ಕೆಲಸಕ್ಕೆ ಹೋಗುತ್ತಿಲ್ಲ. ಇಬ್ಬರು ಮಕ್ಕಳಿದ್ದು ಜೀವನ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿದೆ. ನನಗೆ ಯಾವುದೇ ಸಹಾಯವನ್ನೂ ಅವರು ಮಾಡುತ್ತಿಲ್ಲ’ ಎಂದು ಇದೇ ವೇಳೆ ಅವರು ಅಳಲು ತೋಡಿಕೊಂಡರು.

‘ಇದಕ್ಕೆ ಸಂಬಂಧಿಸಿದ ಸಾಕ್ಷ್ಯಾ ಧಾರಗಳು ಇದ್ದು, ಶೀಘ್ರದಲ್ಲೇ ನಾನು ಪೊಲೀಸರಿಗೆ ದೂರು ನೀಡಲಿದ್ದೇನೆ’ ಎಂದು ಎಚ್ಚರಿಕೆಯನ್ನೂ ನೀಡಿದರು.

ಮಾನಸಿಕ ಅಸ್ವಸ್ಥೆ: ಈ ಬಗ್ಗೆ ಸಂಜೆ ಹೊತ್ತಿಗೆ ಪ್ರತಿಕ್ರಿಯಿಸಿದ ರಾಮದಾಸ್ ‘ಈ ಮಹಿಳೆ ಮಾನಸಿಕ ಅಸ್ವಸ್ಥೆ. ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ಇದೊಂದು ಸುಳ್ಳು ಆರೋಪ’ ಎಂದು ಸ್ಪಷ್ಟೀಕರಣ ನೀಡಿದ್ದರು.

‘ವಿಷ ಕುಡಿದು ಪ್ರಾಣ ಬಿಡುತ್ತೇನೆ’:  ಪತ್ರಕರ್ತರ ಮುಂದೆ ಮಹಿಳೆ ಅಳಲು ತೋಡಿಕೊಳ್ಳುತ್ತಿರುವಾಗಲೇ ಆಕೆ ಮೊಬೈಲಿಗೆ ರಾಮದಾಸ್ ಅವರೇ ಕರೆ ಮಾಡಿದ್ದಾರೆ ಎಂದು ಹೇಳಿ ಮೊಬೈ ಲ್‌ನ ಸ್ಪೀಕರ್‌ ಆನ್‌ನಲ್ಲಿಟ್ಟು ಪತ್ರ ಕರ್ತರ ಮುಂದೆ ಮಾತನಾಡಿದರು.

ಮೊಬೈಲಿನಲ್ಲಿ ಕೇಳಿ ಬಂದ ಧ್ವನಿಯು ‘ದಯವಿಟ್ಟು ಏನೂ ಮಾಡ ಬೇಡ. ನಾನು ವಿಷ ಕುಡಿದು ಪ್ರಾಣ ಬಿಡುತ್ತೇನೆ’ ಎಂದು ಹೇಳಿತು. ತಕ್ಷಣ ಮಹಿಳೆ ‘ನೀವು ಸಾಯಲಿ ಎಂಬುದು ನನ್ನ ಉದ್ದೇಶ ಅಲ್ಲ. ನನಗೆ ನ್ಯಾಯ ಸಿಗಬೇಕು ಅಷ್ಟೆ’ ಎಂದು ಹೇಳಿದರು. ಫೋನ್ ಕರೆ ಸ್ಥಗಿತಗೊಂಡ ನಾಟಕೀಯ ವಿದ್ಯಮಾನವೂ ಜರುಗಿತು.

‘ರಾಮದಾಸ್ ಬೇಕು’: ‘ಈಗಲೂ ಮಾಡಿರುವ ಆರೋಪಕ್ಕೆ ಬದ್ಧವಾಗಿ ದ್ದೇನೆ. ನನಗೆ ರಾಮದಾಸ್ ಬೇಕು ಅಷ್ಟೆ. ಅವರ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಉದ್ದೇಶ ವಂತೂ ಇಲ್ಲ’ ಎಂದು ಮಾಜಿ ಸಚಿವ ರಾಮ ದಾಸ್ ವಿರುದ್ಧ ಆರೋಪ ಮಾಡಿದ ಪ್ರೇಮಕುಮಾರಿ ಮಂಗಳ ವಾರ ತಡರಾತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮದಾಸ್ ಆತ್ಮಹತ್ಯೆಗೆ ಯತ್ನಿ ಸಿದ ಸುದ್ದಿ ಹರಡುತ್ತಿದ್ದಂತೆ ‘ಪ್ರಜಾವಾಣಿ’ ಪ್ರೇಮಕುಮಾರಿಯನ್ನು ಸಂಪರ್ಕಿಸಿದಾಗ ‘ರಾಮದಾಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಹೋದ ನಂತರ ತೀವ್ರವಾಗಿ ಕುಗ್ಗಿ ಹೋಗಿದ್ದರು. ಖಿನ್ನತೆಗೂ ಒಳಗಾಗಿದ್ದರು. ಹೆಚ್ಚಾಗಿ ಅಳುತ್ತಿದ್ದರು. ಆದರೆ, ಅವರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿರಲಿಲ್ಲ. ಅವರು ಬದುಕುಳಿದು ನನ್ನನ್ನು ಸ್ವೀಕರಿಸಿದರೆ ಅಷ್ಟೇ ಸಾಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.