ADVERTISEMENT

ರಾಯರ ಆರಾಧನೆ ಆರಂಭ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2011, 19:30 IST
Last Updated 12 ಆಗಸ್ಟ್ 2011, 19:30 IST
ರಾಯರ ಆರಾಧನೆ ಆರಂಭ
ರಾಯರ ಆರಾಧನೆ ಆರಂಭ   

ರಾಯಚೂರು:  ಮಂತ್ರಾಲಯ ಕ್ಷೇತ್ರದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಭಕ್ತ ಸಮೂಹದ ಪಾಲ್ಗೊಳ್ಳುವಿಕೆ ಮತ್ತು ಸಹಕಾರದಿಂದ ನಡೆಯುತ್ತಿದೆ.  ಬೃಂದಾವನದಲ್ಲಿರುವ ರಾಯರ ಅನುಗ್ರಹದಿಂದಲೇ ಇದು ಸಾಧ್ಯವಾಗಿದೆ. ಆರಾಧನಾ ಮಹೋತ್ಸವದ ಈ ದಿನಗಳಲ್ಲಿ ರಾಯರನ್ನು ಪ್ರಾರ್ಥಿಸಿದರೂ ಅವರು ಕಲ್ಪವೃಕ್ಷವಾಗಿ ಕರುಣಿಸುತ್ತಾರೆ ಎಂದು  ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಯತೀಂದ್ರತೀರ್ಥ ಶ್ರೀಪಾದಂಗಳು ನುಡಿದರು.

ಶುಕ್ರವಾರ ರಾತ್ರಿ ಮಂತ್ರಾಲಯದ ಶ್ರೀಮಠದ ಆವರಣದಲ್ಲಿ ರಾಘವೇಂದ್ರಸ್ವಾಮಿಗಳ 340ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಪ್ರವಾಹದ ಬಳಿಕ ಮಂತ್ರಾಲಯ ಕ್ಷೇತ್ರ ಭಕ್ತರ ಸಹಕಾರದಲ್ಲಿ ನಿರೀಕ್ಷೆಗೆ ಮೀರಿ ಅಭಿವೃದ್ಧಿಯಾಗಿದೆ. ಹಿಂದಿನ ಪೀಠಾಧಿಪತಿಗಳು ರಾಯರ ಆರಾಧನೆ ಮಹೋತ್ಸವ ನಡೆಸಿಕೊಂಡು ಬಂದಂತೆ ಈಗಲೂ ನಡೆಸಲಾಗುತ್ತಿದೆ ಎಂದು ನುಡಿದರು.

ಪೂಜೆ: ಮಂತ್ರಾಲಯ ಗ್ರಾಮ ದೇವತೆ ಮಂಚಾಲಮ್ಮ ದೇವಸ್ಥಾನದಲ್ಲಿ ಮೊದಲು ಪೂಜೆ ಸಲ್ಲಿಸಿದ ಪೀಠಾಧಿಪತಿಗಳು ನಂತರ ಗೋಪೂಜೆ, ಗಜ ಪೂಜೆ, ಅಶ್ವ ಪೂಜೆ, ಶ್ರೀಮಠದ ಕಚೇರಿ ಪೂಜೆ ನೆರವೇರಿಸಿದರು.

ಆರಾಧನಾ ಮಹೋತ್ಸವವನ್ನು ವೆಬ್‌ಸೈಟ್ ಮೂಲಕ ವೀಕ್ಷಣೆಗೆ ಶ್ರೀಮಠ ಪ್ರಪ್ರಥಮ ಬಾರಿಗೆ ವ್ಯವಸ್ಥೆ ಮಾಡಿದ್ದು, ಈ ವೆಬ್‌ಸೈಟ್ ಉದ್ಘಾಟನೆಯನ್ನು ಪೀಠಾಧಿಪತಿಗಳು ನೆರವೇರಿಸಿದರು. ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್, ಬಂಡಾಚಾರ್ಯ ಹಾಗೂ ಮಠದ ಸಿಬ್ಬಂದಿ, ಭಕ್ತರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.