ADVERTISEMENT

ರೂ.1,020 ಕೋಟಿ ಹೆಚ್ಚುವರಿ ತೆರಿಗೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:50 IST
Last Updated 24 ಫೆಬ್ರುವರಿ 2011, 18:50 IST

ಬೆಂಗಳೂರು: 2011-12ನೇ ಹಣಕಾಸು ವರ್ಷದಲ್ಲಿ ವಿವಿಧ ತೆರಿಗೆ ಮತ್ತು ದರಗಳ ಪರಿಷ್ಕರಣೆ ಮೂಲಕ ರೂ. 1,020 ಕೋಟಿ ಹೆಚ್ಚುವರಿ ಸಂಪನ್ಮೂಲ ಸಂಗ್ರಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಉದ್ದೇಶಿಸಿದ್ದಾರೆ.

ಸರ್ಕಾರ ಕೈಗೆತ್ತಿಕೊಳ್ಳಲಿರುವ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಪನ್ಮೂಲದ ಅಗತ್ಯ ಇರುವುದರಿಂದ ಕೆಲ ತೆರಿಗೆಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿದ್ದು, ತೆರಿಗೆ ಹೊರೆ ಭರಿಸುವವರ ಮೇಲೆ ಮಾತ್ರ ಹೆಚ್ಚುವರಿ ತೆರಿಗೆ ವಿಧಿಸುವುದಾಗಿಯೂ ಪ್ರಕಟಿಸಿದ್ದಾರೆ.

ಈ ಮಾತಿಗೆ ಬದ್ಧರೂ ಆಗಿರುವ ಮುಖ್ಯಮಂತ್ರಿಗಳು, ಚಿನ್ನ ಮತ್ತಿತರ ಬೆಲೆ ಬಾಳುವ ಲೋಹಗಳ ಆಭರಣ ಮತ್ತು ಅಮೂಲ್ಯ ಹರಳುಗಳ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಶೇ 1ರಿಂದ ಶೇ 2ಕ್ಕೆ ಮತ್ತು ಈ ಮೊದಲು ಜಾರಿಯಲ್ಲಿದ್ದ ಶೇ 13.5ರಷ್ಟಿದ್ದ ‘ವ್ಯಾಟ್’ ದರಗಳನ್ನು ಶೇ 14ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದಾರೆ.

ಜೂಜು ತೆರಿಗೆ ಅಡಿಯಲ್ಲಿಯೂ ಹೆಚ್ಚು ಸಂಪನ್ಮೂಲ ಕ್ರೋಡೀಕರಿಸಲು ನಿರ್ಧರಿಸಲಾಗಿದ್ದು, ಬೆಂಗಳೂರು ಟರ್ಫ್ ಕ್ಲಬ್ ಪಾವತಿಸಬೇಕಾದ ರಾಜಿ ತೆರಿಗೆ ಮೊತ್ತವನ್ನು ಶೇ 4ರಿಂದ ಶೇ 8ಕ್ಕೆ ಹೆಚ್ಚಿಸಲು ಉದ್ದೇಶಿಸಿದ್ದಾರೆ.

ಈ ಸಂಪನ್ಮೂಲ ಸಂಗ್ರಹ ಕ್ರೋಡೀಕರಣ ಕ್ರಮಗಳಿಂದ ್ಙ 500 ಕೋಟಿಗಳಷ್ಟು ಹೆಚ್ಚುವರಿ ವರಮಾನ ಸಂಗ್ರಹಗೊಳ್ಳುವ ನಿರೀಕ್ಷೆ ಇದೆ. ಮನರಂಜನಾ ತೆರಿಗೆ ಪರಿಹಾರ ರೂಪದಲ್ಲಿ ಚಲನಚಿತ್ರಗಳ ಹಂಚಿಕೆದಾರರನ್ನು ನೋಂದಣಿಯಿಂದ ವಿನಾಯ್ತಿಗೊಳಿಸಲು ಮತ್ತು ಹೋಂ ಸ್ಟೇ ಘಟಕಗಳು ಸಾಮಾನ್ಯ ತೆರಿಗೆ ಬದಲಾಗಿ ರಾಜಿ ಮೊತ್ತಗಳನ್ನು ಪಾವತಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಅಬಕಾರಿ ಸುಂಕ: ಅಬಕಾರಿ ಸುಂಕದ ದರಗಳನ್ನು ಶೇ 10ರಿಂದ ಶೇ 20ರವರೆಗೆ ಹೆಚ್ಚಿಸುವ ಮೂಲಕ ಮತ್ತು ಘೋಷಿತ ಬೆಲೆಯ ಎಲ್ಲಾ 17 ಸ್ಲಾಬ್‌ಗಳಲ್ಲಿ ಪ್ರತಿ ಸ್ಲಾಬ್‌ಗೆ ್ಙ 25ರಂತೆ ಹೆಚ್ಚಿಸಲು ಉದ್ದೇಶಿಸಿದ್ದಾರೆ. ಅಬಕಾರಿ ಸುಂಕ ದರಗಳಲ್ಲಿನ ಹೆಚ್ಚಳ ಮತ್ತು ಪರಿಣಾಮಕಾರಿಯಾದ ಜಾರಿ ಕ್ರಮಗಳ ಮೂಲಕ ಶೇ 12ರಷ್ಟು ಹೆಚ್ಚು ಸಂಪನ್ಮೂಲ ಸಂಗ್ರಹಗೊಳ್ಳಲಿದ್ದು ಈ ಮೂಲಕ ರೂ. 9200 ಕೋಟಿಗಳಷ್ಟು ವರಮಾನ ಸಂಗ್ರಹದ ಗುರಿ ನಿಗದಿಪಡಿಸಿದ್ದಾರೆ.

ವಾಹನ ತೆರಿಗೆ: ವಾಹನ ತೆರಿಗೆ ಬಾಬತ್ತಿನಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ 2800 ಕೋಟಿಗಳಷ್ಟು ತೆರಿಗೆ ವಸೂಲಿ ಮಾಡಲು ಉದ್ದೇಶಿಸಲಾಗಿದೆ.

ವಾಹನಗಳ ಮೇಲೆ ವಿಧಿಸುವ ಶೇ 10ರಷ್ಟು ಸೆಸ್ (ಉಪ ಕರವನ್ನು) ಶೇ 11ಕ್ಕೆ ಹೆಚ್ಚಿಸಿ, ಹೆಚ್ಚುವರಿಯಾಗಿ 20 ಕೋಟಿ ಸಂಗ್ರಹಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.