ಬೆಂಗಳೂರು: ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತು ಅವರ ನಂಬಿಕಸ್ಥ ಬಂಟ ಮೆಹಫೂಜ್ ಅಲಿಖಾನ್‌ನನ್ನು ಇದೇ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಬ್ಬರು ಆರೋಪಿಗಳನ್ನೂ ಸಿಬಿಐ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಓಬಳಾಪುರಂ ಗಣಿ ಕಂಪೆನಿ ಮೂಲಕ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಜನಾರ್ದನ ರೆಡ್ಡಿ ಅವರನ್ನು ಕಳೆದ ಸೆಪ್ಟೆಂಬರ್ 5ರಂದು ಬಂಧಿಸಲಾಗಿತ್ತು. ರಾಜ್ಯದಲ್ಲಿ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ ಮೂಲಕ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದ ವಿಚಾರಣೆಗಾಗಿ ಮಾರ್ಚ್ 2ರಂದು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು.
ಅಂದೇ ರೆಡ್ಡಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಲಾಗಿತ್ತು. ಅದೇ ದಿನ ನ್ಯಾಯಾಲಯಕ್ಕೆ ಶರಣಾಗಿದ್ದ ಅಲಿಖಾನ್‌ನನ್ನು ಮಾ.5ರಂದು ಸಿಬಿಐ ವಶಕ್ಕೆ ನೀಡಲಾಗಿತ್ತು.14 ದಿನಗಳ ಕಾಲ ಇಬ್ಬರೂ ಆರೋಪಿಗಳ ನಿರಂತರ ವಿಚಾರಣೆ ನಡೆಸಿದ ಸಿಬಿಐ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಆವರಣದ ಗಾಂಧಿ ಭವನದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಮಧ್ಯಾಹ್ನ ಹಾಜರುಪಡಿಸಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಎಂ.ಅಂಗಡಿ ಅವರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.
ಅಗ್ರಹಾರ ಪ್ರವೇಶ: ನ್ಯಾಯಾಲಯದ ಆದೇಶದಂತೆ ಮಧ್ಯಾಹ್ನ 3 ಗಂಟೆಗೆ ರೆಡ್ಡಿ ಮತ್ತು ಅಲಿಖಾನ್‌ನನ್ನು ಸಿಬಿಐ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಶಕ್ಕೆ ಒಪ್ಪಿಸಿದರು. ತಕ್ಷಣವೇ ಕಾರಾಗೃಹದ ಆಸ್ಪತ್ರೆಯಲ್ಲಿ ಇಬ್ಬರಿಗೂ ಆರೋಗ್ಯ ತಪಾಸಣೆ ನಡೆಸಲಾಯಿತು. ನಂತರ ಕಾರಾಗೃಹದ ಅತಿಭದ್ರತಾ ವಿಭಾಗದ ಕಟ್ಟಡದಲ್ಲಿರುವ ಕೋಣೆ ಸಂಖ್ಯೆ 5ರಲ್ಲಿ ಇಬ್ಬರನ್ನೂ ಇರಿಸಲಾಗಿದೆ.
ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಕಾರಾಗೃಹದ ಮುಖ್ಯ ಅಧೀಕ್ಷಕ ಎಚ್.ಟಿ.ಲಕ್ಷ್ಮೀನಾರಾಯಣ, `ಇಬ್ಬರೂ ಆರೋಪಿಗಳೂ ಮನೆ ಊಟಕ್ಕೆ ಅರ್ಜಿ ಸಲ್ಲಿಸಿದ್ದರು. ಒಪ್ಪಿಗೆ ನೀಡಲಾಗಿದೆ. ಮನೆಯಿಂದ ಹಾಸಿಗೆ ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆರೋಪಿಗಳನ್ನು ಇರಿಸಲಾಗಿರುವ ಕೋಣೆಗೆ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.